ದಯೆ ಇದ್ದಲ್ಲಿ ಧರ್ಮ ಇರುತ್ತದೆ: ಕ್ಷುಲ್ಲಕ ನಿರ್ವಾಣ ಸಾಗರ ಶ್ರೀ

KannadaprabhaNewsNetwork |  
Published : Feb 02, 2025, 11:45 PM IST
32 | Kannada Prabha

ಸಾರಾಂಶ

ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಯ ಪಾದಗಳಿಗೆ ೨೧೬ ಕಲಶಗಳಿಂದ ಜಲಾಭಿಷೇಕ, ಎಳನೀರು, ಇಕ್ಷುರಸ, ಕಲ್ಕಚೂರ್ಣ, ಶ್ರೀಗಂಧ, ಚಂದನ ಮೊದಲಾದ ಮಂಗಲದ್ರವ್ಯಗಳಿಂದ ಪಾದಾಭಿಷೇಕ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ದಯೆಯೇ ಧರ್ಮದ ಮೂಲವಾಗಿದ್ದು ದಯೆ ಇದ್ದಲ್ಲಿ ಧರ್ಮ ಇರುತ್ತದೆ ಎಂದು ಕ್ಷುಲ್ಲಕ ನಿರ್ವಾಣ ಸಾಗರ ಮುನಿಮಹಾರಾಜರು ಹೇಳಿದ್ದಾರೆ.

ಧರ್ಮಸ್ಥಳದ ರತ್ನಗಿರಿಯಲ್ಲಿ ಭಾನುವಾರ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ನಡೆದ ಪಾದಾಭಿಷೇಕ ಸಂದರ್ಭದಲ್ಲಿ ಅವರು ಮಂಗಲ ಪ್ರವಚನ ನೀಡಿದರು.

ಉತ್ತಮ ಸಂಸ್ಕಾರ ಮತ್ತು ಧರ್ಮದ ಮರ್ಮವನ್ನರಿತು ಅನುಷ್ಠಾನದಿಂದ ಆತ್ಮಕಲ್ಯಾಣವಾಗುತ್ತದೆ. ನಾವು ಧರ್ಮವನ್ನು ಕಾಪಾಡಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಹೇಳಿದರು.

ಕಾರ್ಕಳ ಜೈನಮಠದ ಶ್ರೀ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಂಗಲ ಪ್ರವಚನ ನೀಡಿ, ಧರ್ಮದ ಪರಂಪರೆ ಉಳಿದರೆ ಧರ್ಮದ ರಕ್ಷಣೆಯಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ ಮನ, ವಚನ, ಕಾಯಗಳಿಂದ ಧರ್ಮದ ಪರಿಪಾಲನೆ ಮಾಡಬೇಕು ಎಂದರು.

ಕೋಲಾರದ ಎನ್.ಆರ್. ಜ್ಞಾನಮೂರ್ತಿ ಹರಿಕಥಾ ಕಾಲಕ್ಷೇಪದ ಮೂಲಕ ಭಗವಾನ್ ಬಾಹುಬಲಿಯ ಜೀವನ-ಸಾಧನೆಯನ್ನು ವಿವರಿಸಿದರು. ಬೀಡಿನಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಯ ಪಾದಗಳಿಗೆ ೨೧೬ ಕಲಶಗಳಿಂದ ಜಲಾಭಿಷೇಕ, ಎಳನೀರು, ಇಕ್ಷುರಸ, ಕಲ್ಕಚೂರ್ಣ, ಶ್ರೀಗಂಧ, ಚಂದನ ಮೊದಲಾದ ಮಂಗಲದ್ರವ್ಯಗಳಿಂದ ಪಾದಾಭಿಷೇಕ ನಡೆಯಿತು. ಮಹಾಮಂಗಳಾರತಿ, ಮಾಲಾರ್ಪಣೆ ಮತ್ತು ಶಾಂತಿಮಂತ್ರ ಪಠಣದೊಂದಿಗೆ ಪಾದಾಭಿಷೇಕ ಸಮಾಪನಗೊಂಡಿತು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರಾವಕರು ಮತ್ತು ಶ್ರಾವಕಿಯರು ಪಾದಾಭಿಷೇಕದಲ್ಲಿ ಭಾಗವಹಿಸಿದ್ದರು. ಡಾ. ಶಶಿಕಾಂತ ಜೈನ್ ಮತ್ತು ಉಪನ್ಯಾಸಕ ಮಹಾವೀರ ಜೈನ್ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ