ಕುದೂರು: ಮಕ್ಕಳಿಗೆ ಉಚಿತ ವಿದ್ಯೆ, ವಸತಿ, ಊಟ ನೀಡಿದರೆ ಅಲ್ಲಿ ನಿಜಕ್ಕೂ ಪರಮಾತ್ಮನಿರುತ್ತಾನೆ. ಇಂತಹ ಸತ್ಯವನ್ನು ಅರಿತೇ ಸಿದ್ದಗಂಗಾ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಇಂತಹ ಅವಕಾಶಗಳನ್ನು ಹಿರಿಯ ಶ್ರೀಗಳು ಒದಗಿಸಿಕೊಟ್ಟು ಇದರ ಸವಿಯನ್ನು ಎಲ್ಲಾ ಮಠಗಳು ಅನುಭವಿಸಲು ಮಾರ್ಗದರ್ಶನ ಮಾಡಿ ಹೋಗಿದ್ದಾರೆ ಎಂದು ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಕಂಚುಗಲ್ ಬಂಡೇಮಠದ ಶ್ರೀಮಹಾಲಿಂಗ ಸ್ವಾಮೀಜಿ ಮಾತನಾಡಿ, ಶಿಕ್ಷಣದಿಂದ ಮಾತ್ರ ನಿಜವಾದ ಬೆಳಕು ನೀಡಲು ಸಾಧ್ಯ. ಶಿಕ್ಷಣ ಕ್ಷೇತ್ರದಲ್ಲಿ ಒಂದು ಬಲಿಷ್ಟ ಸರ್ಕಾರ ಮಾಡಬಹುದಾದ ಕೆಲಸವನ್ನು ಶ್ರೀಮಠಗಳು ಮಾಡಿಕೊಂಡು ಬರುತ್ತಿರುವುದನ್ನು ದೇಶ ಬೆರಗಿನಿಂದ ನೋಡಿದೆ. ಈಗ ಇಂತಹ ಚಿಕ್ಕಪುಟ್ಟ ಮಠಗಳಲ್ಲೂ ಕೂಡಾ ಶಿಕ್ಷಣಕ್ರಾಂತಿಯಾಗಬೇಕೆಂದು ವಸತಿ ಶಾಲೆಗಳು ನಿರ್ಮಾಣ ಮಾಡಲು ಸಿದ್ದಗಂಗಾ ಮಠದ ಶ್ರೀಗಳು ನಮಗೆಲ್ಲಾ ಮಾರ್ಗದರ್ಶನ ಮಾಡಿದ್ದಾರೆ ಎಂದು ಹೇಳಿದರು.
ಕೆಎಸ್ ಆರ್ ಟಿಸಿ ಸಂಸ್ಥೆ ಮಾಜಿ ನಿರ್ದೇಶಕ ಭೃಂಗೇಶ್ ಮಾತನಾಡಿ, ಚಿಲುಮೆಮಠದಲ್ಲಿ ವಿದ್ಯಾಭ್ಯಾಸ ಮಾಡಲು ಅತ್ಯಂತ ಸುಂದರ ವಾತಾವರಣವಿದ್ದು, ಋಷಿಮುನಿಗಳ ತಪೋಸ್ಥಾನದಂತೆ ಕಂಡು ಬರುತ್ತಿದೆ. ಇಲ್ಲಿ ಶಿಕ್ಷಣ ಕ್ರಾಂತಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಚಿಲುಮೆಯಲ್ಲಿ ನೂತನವಾಗಿ ನಿರ್ಮಿಸಿದ ಸುಂದರವಾದ ಗೋಪುರವನ್ನು ಸಿದ್ದಗಂಗಾ ಶ್ರೀಗಳು ಉದ್ಘಾಟಿಸಿದರು. ಜಿಪಂ ಮಾಜಿ ಸದಸ್ಯ ಶಿವರುದ್ರಪ್ಪ, ಚಂದ್ರಣ್ಣ, ನಿವೃತ್ತ ಪ್ರಾಚಾರ್ಯ ಹೊನ್ನಶಾಮಯ್ಯ, ನಿವೃತ್ತ ಪೊಲೀಸ್ ಇನ್ಸ್ ಪೆಕ್ಟರ್ ಉಮೇಶ್, ಶಿವಕುಮಾರ್ ಇತರರಿದ್ದರು.15ಕೆಆರ್ ಎಂಎನ್ 5.ಜೆಪಿಜಿ
ಸೋಲೂರು ಚಿಲುಮೆ ಮಠದಲ್ಲಿ ಏರ್ಪಡಿಸಿದ್ದ ಶ್ರೀ ಬಸವಲಿಂಗ ಸ್ವಾಮೀಜಿಯ 2ನೇ ಪುಣ್ಯಾರಾಧನೆ ಸಮಾರಂಭದಲ್ಲಿ ವಿದ್ಯಾರ್ಥಿನಿಲಯಕ್ಕೆ ಸಿದ್ದಗಂಗಾ ಮಠಾಧೀಶರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಗುದ್ದಲಿಪೂಜೆ ನೆರವೇರಿಸಿದರು.