ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ ಉತ್ಪನ್ನ ಖರೀದಿ ಕೇಂದ್ರ ಆರಂಭಿಸಲು ಜಿಲ್ಲಾಧಿಕಾರಿ ಸೂಚನೆ

KannadaprabhaNewsNetwork |  
Published : Oct 19, 2025, 01:02 AM IST
17ಎಚ್‌ವಿಆರ್2 | Kannada Prabha

ಸಾರಾಂಶ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಋತುವಿನ ಬಿಳಿಜೋಳ ಹೈಬ್ರೀಡ್, ಮಾಲ್ದಂಡಿ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು.

ಹಾವೇರಿ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಋತುವಿನ ಬಿಳಿಜೋಳ ಹೈಬ್ರೀಡ್, ಮಾಲ್ದಂಡಿ ಉತ್ಪನ್ನ ಖರೀದಿ ಕೇಂದ್ರಗಳನ್ನು ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ಆರಂಭಿಸುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಟಾಸ್ಕಫೋರ್ಸ್‌ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕನಿಷ್ಠ ಬೆಂಬಲ ಬೆಲೆಯಡಿ ಸರ್ಕಾರದ ಮಾರ್ಗಸೂಚಿಯಂತೆ ಬಿಳಿಜೋಳ ಹೈಬ್ರೀಡ್, ಮಾಲ್ದಂಡಿ ಖರೀದಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಸರ್ಕಾರ ಮುಂಗಾರು ಮತ್ತು ಹಿಂಗಾರು ಋತುವಿನ ಬಿಳಿಜೋಳ ಬೈಬ್ರೀಡ್ ಪ್ರತಿ ಕ್ವಿಂಟಲ್‌ಗೆ ರು. 3,699 ಹಾಗೂ ಮಾಲ್ದಂಡಿ ಪ್ರತಿ ಕ್ವಿಂಟಲ್‌ಗೆ ರು. 3,749ಗಳಂತೆ ಖರೀದಿಗೆ, ಮುಂಗಾರು ಋತುವಿನ ರಾಗಿ ಪ್ರತಿ ಕ್ವಿಂಟಲ್‌ಗೆ ರು.4,886 ಮತ್ತು ಕಿರು ಸಿರಿಧಾನ್ಯ ಸಾಮೆ ಮತ್ತು ನವಣೆ ರು.4,886ರಂತೆ ದರ ನಿಗದಿಪಡಿಸಿದೆ. ಆದರೆ ಜಿಲ್ಲೆಯಲ್ಲಿ ಮುಂಗಾರು ಋತುವಿನಲ್ಲಿ ರಾಗಿ ಕೇವಲ 23 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ ಹಾಗೂ ಕಿರುಸಿರಿ ಧಾನ್ಯಗಳಾದ ಸಾಮೆ ಮತ್ತು ನವಣೆ ಉತ್ಪನ್ನ ಜಿಲ್ಲೆಯಲ್ಲಿ ಬಿತ್ತನೆಯಾಗದ ಪ್ರಯುಕ್ತ ಈ ಉತ್ಪನ್ನಗಳ ಖರೀದಿ ಕೇಂದ್ರ ತೆರೆಯುವ ಅವಶ್ಯಕತೆ ಇರುವುದಿಲ್ಲವೆಂದು ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ ಹಿನ್ನೆಲೆಯಲ್ಲಿ, ಬಿಳಿಜೋಳ ಹೈಬ್ರೀಡ್, ಮಾಲ್ದಂಡಿ ಉತ್ಪನ್ನ ಖರೀದಿ ಅಗತ್ಯ ಸ್ಥಳಗಳಲ್ಲಿ ಆರಂಭಿಸಬೇಕು ಎಂದರು.ಡಿ.1ರಿಂದ 31-03-2026ರ ವರೆಗೆ ರೈತರ ನೋಂದಣಿ ಪ್ರಕ್ರಿಯೆ ಜರುಗಲಿದೆ. 01-01-2026 ರಿಂದ 31-03-2026ರವರೆಗೆ ನೋಂದಾಯಿತ ರೈತರಿಂದ ಬಿಳಿಜೋಳ ಹೈಬ್ರೀಡ್, ಮಾಲ್ದಂಡಿ ಉತ್ಪನ್ನ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಸಂಸ್ಥೆಯಾಗಿ ನೇಮಿಸಿ ಆದೇಶಿಸಲಾಗಿದೆ ಎಂದು ತಿಳಿಸಿದರು.ಬೆಂಬಲ ಬೆಲೆ ಯೋಜನೆಯಡಿ ಬಿಳಿಜೋಳ ಹೈಬ್ರೀಡ್, ಮಾಲ್ದಂಡಿ ಉತ್ಪನ್ನ ಖರೀದಿ ಕೇಂದ್ರಗಳನ್ನು ಹಾವೇರಿ, ರಾಣೇಬೆನ್ನೂರು, ಶಿಗ್ಗಾಂವ ಹಾಗೂ ಸವಣೂರ ಎಪಿಎಂಸಿ ಯಾರ್ಡಗಳಲ್ಲಿ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದರು.ಡಿಬಿಟಿ ಮೂಲಕ ಹಣ ಜಮೆ: ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಸಿದ ಸೋಯಾಬಿನ್ ಹಾಗೂ ಶೇಂಗಾ ಉತ್ಪನದ ಮೊತ್ತವನ್ನು ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಯಾದ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ಜಮೆ ಮಾಡಬೇಕು ಎಂದು ಸೂಚಿಸಿದರು.ಪ್ರತಿ ರೈತರಿಂದ ಪ್ರತಿ ಎಕರೆಗೆ 15ಕ್ವಿಂಟಲ್‌ನಂತೆ ಗರಿಷ್ಠ 150 ಕ್ವಿಂಟಲ್ ಬಿಳಿಜೋಳ ಹೈಬ್ರೀಡ್, ಮಾಲ್ದಂಡಿ ಉತ್ಪನ್ನ ಖರೀದಿಸಲು ಅವಕಾಶವಿದೆ. ಕನಿಷ್ಠ ಬೆಂಬಲ ಬೆಲೆಯಡಿ ಬಿಳಿಜೋಳ ಹೈಬ್ರೀಡ್, ಮಾಲ್ದಂಡಿ ಉತ್ಪನ್ನ ಖರೀದಿ ಉತ್ಪನ್ನ ಖರೀದಿ ಕೇಂದ್ರ ಆರಂಭಿಸಿರುವ ಕುರಿತಂತೆ ವ್ಯಾಪಕ ಪ್ರಚಾರನಡೆಸಿ, ಕರಪತ್ರ, ಬ್ಯಾನರ್ ಅಳಡಿಸುವ ಮೂಲಕ ರೈತರಿಗೆ ಮಾಹಿತಿ ತಲುಪಿಸಬೇಕು. ರೈತರಿಂದ ಖರೀದಿಸಿದ ಉತ್ಪನ್ನ ದಾಸ್ತಾನುಮಾಡಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಉಗ್ರಾಣಗಳನ್ನು ಕಾಯ್ದಿರಿಸಬೇಕು ಎಂದು ಸಂಬAಧಪಟ್ಟ ಆಧಿಕಾರಿಗಳಿಗೆ ಸೂಚನೆ ನೀಡಿದರು.ಬಿಳಿಜೋಳ ಖರೀದಿ ಕೇಂದ್ರದ ನೋಡಲ್ ಅಧಿಕಾರಿಗಳನ್ನಾಗಿ ಹಾವೇರಿ, ರಾಣಿಬೆನ್ನೂರು, ಶಿಗ್ಗಾಂವಿ, ಸವಣೂರು ಹಾಗೂ ಹಿರೇಕೆರೂರು ತಾಲೂಕಿನ ತಹಸೀಲ್ದಾರಗಳು ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳನ್ನು ನಿಯೋಜಿಸಲಾಗಿದೆ. ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕರನ್ನು ಜಿಲ್ಲೆಯ ಎಲ್ಲಾ ಖರೀದಿ ಕೇಂದ್ರದ ಜಿಲ್ಲಾ ನೋಡಲ್ ಅಧಿಕಾರಿಯಾಗಿ ನಿಯೋಜಿಸಲಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ 33 ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಹೈಬ್ರೀಡ್, ಮಾಲ್ದಂಡಿ ಬಿತ್ತೆನೆಯಾಗಿದೆ. ಹಿಂಗಾರು ಋತುವಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಳಿಜೋಳ ಹೈಬ್ರೀಡ್, ಮಾಲ್ದಂಡಿ ಹುಟ್ಟುವಳಿ ಹೆಚ್ಚುವರಿ ಬಿತ್ತನೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ , ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಶಾಖಾ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಇತರರು ಉಪಸ್ಥಿತರಿದ್ದರು.

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ