೨೦೨೭ರ ಜೂನ್ ಒಳಗೆ ಕಾಮಗಾರಿ ಪೂರ್ಣ: ಸಂಸದ ಎಂ.ಮಲ್ಲೇಶ್ ಬಾಬು
ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆವರೆಗೆ ರೈಲು ಸಂಚಾರದ ಸಮಸ್ಯೆ ನಿವಾರಿಸಲು ನಾಲ್ಕು ಲೈನ್ ಟ್ರ್ಯಾಕ್ ನಿರ್ಮಾಣಕ್ಕೆ ಅನುಮತಿ ದೊರೆತಿದ್ದು, ಜಿಲ್ಲೆಯ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಹಂತಹಂತವಾಗಿ ವೇಗ ನೀಡಲಾಗುತ್ತಿದೆ ಎಂದು ಸಂಸದ ಎಂ.ಮಲ್ಲೇಶ್ ಬಾಬು ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಲೂರು ನಗರದಲ್ಲಿ ಬಹುದಿನಗಳ ಬೇಡಿಕೆಯಾಗಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಈಗಾಗಲೇ ಟೆಂಡರ್‌ನಲ್ಲಿ ಸೇರ್ಪಡೆ ಮಾಡಲಾಗಿದೆ. ೨೦೨೭ರ ಜೂನ್ ಒಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.ಸೋಮವಾರ ದಕ್ಷಿಣ ಪಶ್ಚಿಮ ರೈಲ್ವೆ ಜಿಎಂರನ್ನು ಭೇಟಿ ಮಾಡಿ ಜಿಲ್ಲೆಯ ೪ ಆರ್‌ಒಬಿ (ರೈಲ್ವೆ ಮೇಲ್ಸೇತುವೆ) ಕಾಮಗಾರಿಗಳ ಬಗ್ಗೆ ಚರ್ಚಿಸಿದ್ದೇನೆ. ಶೀಘ್ರದಲ್ಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ. ದೇಶಿಹಳ್ಳಿ ಹಾಗೂ ಎಸ್.ಎನ್.ರೆಸಾರ್ಟ್ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುದಾನ ಮೀಸಲಿಡಲಾಗಿದ್ದು, ಶೀಘ್ರದಲ್ಲೇ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.
ಸ್ಯಾನಿಟೋರಿಯಂ, ಕಾಮಸಮುದ್ರ, ಕೋಲಾರದ ಟೇಕಲ್ ರಸ್ತೆ ಹಾಗೂ ಉರಿಗಾಂ ಸೇರಿದಂತೆ ವಿವಿಧೆಡೆ ಮೇಲ್ಸೇತುವೆ ಸೇರಿದಂತೆ ಅಗತ್ಯ ಮೂಲಸೌಕರ್ಯ ಕಾಮಗಾರಿಗಳಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಉರಿಗಾಂ ಬಳಿ ಜಿಲ್ಲಾಡಳಿತ ಅಗತ್ಯ ಜಾಗ ಒದಗಿಸಿದರೆ ಕಾಮಗಾರಿಗೆ ಮತ್ತಷ್ಟು ಅನುಕೂಲವಾಗಲಿದೆ ಎಂದರು.
ಕೋಲಾರದ ಕ್ರೀಡಾಂಗಣದ ಬಳಿ ರೈಲು ನಿಲುಗಡೆಗೆ ಅವಕಾಶ ಕಲ್ಪಿಸುವುದು ಸದ್ಯಕ್ಕೆ ಸಾಧ್ಯವಿಲ್ಲ. ನಿಲ್ದಾಣ ನಿರ್ಮಿಸಲು ಅಗತ್ಯ ಸ್ಥಳಾವಕಾಶ ಇಲ್ಲದಿರುವುದೇ ಕಾರಣ ಎಂದು ಸ್ಪಷ್ಟಪಡಿಸಿದರು.
ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದಂತೆ ಸಮೀಕ್ಷೆ ಕಾರ್ಯ ನಡೆದಿದ್ದು, ೨೦೨೮ರಲ್ಲಿ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ. ಕೋಲಾರದಿಂದ ವೈಟ್‌ಫೀಲ್ಡ್‌ಗೆ ನೇರ ಸಂಪರ್ಕ ಯೋಜನೆಗೆ ರಾಜ್ಯ ಸರ್ಕಾರ ಅಗತ್ಯ ಜಾಗ ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಜಕೀಯ ವಿಚಾರ:
ಬಿಜಿಎಂಎಲ್ ಕಾರ್ಮಿಕರಿಗೆ ಹಕ್ಕುಪತ್ರ ವಿತರಿಸಲು ಸಚಿವರನ್ನು ಕರೆಸಿ ಕಾರ್ಯಕ್ರಮ ಆಯೋಜಿಸಲಾಗುವುದು. ಮುಂಬರುವ ಚುನಾವಣೆಗೆ ಅಭ್ಯರ್ಥಿ ಆಯ್ಕೆ ವಿಚಾರವನ್ನು ೬ ತಿಂಗಳು ಮುಂಚಿತವಾಗಿ ತೀರ್ಮಾನಿಸಲಾಗುವುದು. ಸದ್ಯ ಜೆಡಿಎಸ್‌ನಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲೆಡೆ ಎನ್‌ಡಿಎ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದರು.