ಬಿಜೆಪಿ ಜಿಲ್ಲಾ ಸಾರಥ್ಯ ವಹಿಸುವವರು ಯಾರು?

KannadaprabhaNewsNetwork |  
Published : Dec 31, 2023, 01:30 AM IST
ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಫೋಟೋಗಳು.   ( ಇದರ ಜೊತೆ ಬಿಜೆಪಿ ಲೋಗೋ ಬಳಸಿಕೊಳ್ಳಲು ಕೋರಿದೆ )  | Kannada Prabha

ಸಾರಾಂಶ

ಬಳ್ಳಾರಿ ಜಿಲ್ಲೆ ಬಿಜೆಪಿ ಅಧ್ಯಕ್ಷರು ಯಾರು ಎಂಬ ಕುತೂಹಲ ಮೂಡಿದೆ. ಡಿ. 31ರಂದು ಜಿಲ್ಲೆಗೆ ವೀಕ್ಷಕರು ಆಗಮಿಸಲಿದ್ದು, ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ.

ಕೆ.ಎಂ. ಮಂಜುನಾಥ್

ಬಳ್ಳಾರಿ: ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ತೆರೆಮರೆಯ ಪೈಪೋಟಿ ಶುರುವಾಗಿದ್ದು, ಪಕ್ಷದ ಜಿಲ್ಲಾ ಸಾರಥ್ಯ ವಹಿಸಲು ಜಿಲ್ಲೆಯ ಪಕ್ಷದ ಮುಖಂಡರು ರಾಜ್ಯ ನಾಯಕರ ಸಂಪರ್ಕದೊಂದಿಗೆ ಕಸರತ್ತು ಆರಂಭಿಸಿದ್ದಾರೆ!

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೇಮಕವಾಗುತ್ತಿದ್ದಂತೆಯೇ ಜಿಲ್ಲೆಯಲ್ಲಿ ಪಕ್ಷದ ನೇತೃತ್ವ ವಹಿಸುವರು ಯಾರು ಎಂಬ ಪ್ರಶ್ನೆ ಮೂಡಿತ್ತು. ಏತನ್ಮಧ್ಯೆಯೇ ಆಕಾಂಕ್ಷಿಗಳು ಜಿಲ್ಲಾಧ್ಯಕ್ಷ ಸ್ಥಾನಕ್ಕೇರಲು ತೆರೆಮರೆಯ ಪ್ರಯತ್ನಗಳು ಶುರು ಮಾಡಿದ್ದರು. ಇದೀಗ ತೀವ್ರ ಪೈಪೋಟಿ ಕಂಡು ಬಂದಿದೆ.

ಹೆಚ್ಚಿದ ಆಕಾಂಕ್ಷಿಗಳು: ಮಾಜಿ ಶಾಸಕ ಜಿ. ಸೋಮಶೇಖರ ರೆಡ್ಡಿ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್‌ ನಾಯ್ಡು ಮೋಕಾ, ಬಿಜೆಪಿ ರೈತ ಮೋರ್ಚಾದ ಮಾಜಿ ಜಿಲ್ಲಾಧ್ಯಕ್ಷ ಗಣಪಾಲ್ ಐನಾಥರೆಡ್ಡಿ, ಮಹಾನಗರ ಪಾಲಿಕೆ ಸದಸ್ಯ ಎಸ್. ಮಲ್ಲನಗೌಡ, ಸಿರುಗುಪ್ಪ ತಾಲೂಕಿನ ಆರ್‌.ಸಿ. ಪಂಪನಗೌಡ, ಕೊಂಚಿಗೇರಿ ನಾಗರಾಜಗೌಡ, ಸಂಡೂರು ತಾಲೂಕಿನ ಜಿ.ಟಿ. ಪಂಪಾಪತಿ ಅವರು ಹೆಸರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕೇಳಿ ಬರುತ್ತಿವೆ. ಇನ್ನು ಕೆಲವರು ತಮ್ಮದೇ ಆದ ರಾಜಕೀಯ ಪ್ರಭಾವ ಬಳಸಿ ಜಿಲ್ಲಾಧ್ಯಕ್ಷರಾಗಲು ಹವಣಿಸುತ್ತಿದ್ದಾರೆ.

ಈ ಹಿಂದೆ ಜಿಲ್ಲಾಧ್ಯಕ್ಷರಾದವರ ಪೈಕಿ ಹೆಚ್ಚಿನವರು ವೀರಶೈವ ಲಿಂಗಾಯತ ಸಮಾಜದವರು. ಈ ಬಾರಿ ಲಿಂಗಾಯಿತೇತರ ವ್ಯಕ್ತಿಗೆ ಪಕ್ಷದ ಜಿಲ್ಲಾ ಸಾರಥ್ಯ ನೀಡಲು ಪಕ್ಷ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆಯಾದರೂ, ಜಿಲ್ಲೆಯ ಹೆಚ್ಚಿನ ವಿಧಾನಸಭಾ ಹಾಗೂ ಲೋಕಸಭಾ ಕ್ಷೇತ್ರಗಳು ಮೀಸಲಾತಿಗೆ ಒಳಪಟ್ಟಿರುವುದರಿಂದ ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡುವ ಸಾಧ್ಯತೆಯೇ ಹೆಚ್ಚಾಗಿದೆ.

ಈಗಾಗಲೇ ಪಕ್ಷದ ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವವರು ಪಕ್ಷ ಮೇಲಿರುವ ತಮ್ಮನಿಷ್ಠೆ, ಈ ಹಿಂದಿನ ಸಂಘಟನಾ ಕೆಲಸ, ಪಕ್ಷಕ್ಕಾಗಿ ಅವಿರತ ಶ್ರಮ, ಚುನಾವಣೆ ಸಂದರ್ಭಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಕೈಗೊಂಡ ಕ್ರಮಗಳು, ಪಕ್ಷದ ಕಾರ್ಯಕರ್ತರ ಒಡನಾಟ ಕುರಿತು ರಾಜ್ಯ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದು, ಪಕ್ಷದ ಕೆಲಸ ಮಾಡಲು ಮತ್ತಷ್ಟು ದೊಡ್ಡ ಜವಾಬ್ದಾರಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ವೀಕ್ಷಕರು ಇಂದು ಬಳ್ಳಾರಿಗೆ: ಬಿಜೆಪಿ ಜಿಲ್ಲಾಧ್ಯಕ್ಷ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ವೀಕ್ಷಕರಾಗಿ ಪಕ್ಷದ ರಾಜ್ಯ ಉಪಾಧ್ಯಕ್ಷ ಮೈಸೂರಿನ ಎಂ. ರಾಜೇಂದ್ರ ಅವರು ಡಿ. 31ರಂದು ನಗರಕ್ಕೆ ಆಗಮಿಸಿ, ಇಲ್ಲಿನ ವಾಜಪೇಯಿ ಬಡಾವಣೆಯಲ್ಲಿ ಇರುವ ಪಕ್ಷದ ಜಿಲ್ಲಾ ಕಚೇರಿಯಲ್ಲಿ ಸಭೆ ನಡೆಸಲಿದ್ದಾರೆ. ಆಕಾಂಕ್ಷಿಗಳು, ಪಕ್ಷದ ಪದಾಧಿಕಾರಿಗಳು, ಹಿರಿಯ ಮುಖಂಡರು, ಕೋರ್ ಕಮಿಟಿ ಸದಸ್ಯರು ಹಾಗೂ ಮಂಡಲ ಅಧ್ಯಕ್ಷರ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಬಳಿಕ ಸಭೆಯ ಅಭಿಪ್ರಾಯವನ್ನು ಪಕ್ಷದ ರಾಜ್ಯ ಸಮಿತಿಗೆ ನೀಡಲಿದ್ದಾರೆ.ಭಾನುವಾರ ಪಕ್ಷದ ವೀಕ್ಷಕರು ಆಗಮಿಸಿ, ಸಭೆ ನಡೆಸುತ್ತಿರುವುದರಿಂದ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು, ಪಕ್ಷದ ಹಿರಿಯ ಮುಖಂಡರು, ಪದಾಧಿಕಾರಿಗಳಿಗೆ ಕರೆ ಮಾಡಿ ತಮ್ಮ ಹೆಸರು ಸೂಚಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. "ನೀವು ಇಷ್ಟು ವರ್ಷಗಳಿಂದ ನನ್ನನ್ನು ನೋಡಿದ್ದೀರಿ. ನಾನು ಎಂದೂ ಹಿರಿಯರನ್ನು ಕಡೆಗಣಿಸಿಲ್ಲ. ಪಕ್ಷದ ಕೆಲಸವನ್ನು ಅತ್ಯಂತ ನಿಷ್ಠನಾಗಿ ಮಾಡಿಕೊಂಡು ಬರುತ್ತಿರುವೆ. ನಿಮ್ಮ ಆಶೀರ್ವಾದವಿದ್ದರೆ ಮತ್ತಷ್ಟು ದೊಡ್ಡ ಜವಾಬ್ದಾರಿ ತೆಗೆದುಕೊಂಡು ಪಕ್ಷಕ್ಕಾಗಿ ದುಡಿಯುವೆ " ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಕರೆ ಮಾಡಿದ ಎಲ್ಲರಿಗೂ ಮುಖಂಡರು ಭರವಸೆಗಳನ್ನು ನೀಡುತ್ತಿದ್ದು, ಸಭೆಯಲ್ಲಿ ಯಾರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂಬ ಕುತೂಹಲವೂ ಇದೆ.

ಪಕ್ಷ ತೆಗೆದುಕೊಳ್ಳುವ ಯಾವುದೇ ತೀರ್ಮಾನಕ್ಕೆ ಬದ್ಧನಾಗಿ ಪಕ್ಷದ ಸಂಘಟನೆಯ ಕೆಲಸದಲ್ಲಿ ತೊಡಗಿಸಿಕೊಳ್ಳುವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮುರಹರಗೌಡ ಗೋನಾಳ್ ಹೇಳಿದ್ದಾರೆ.ಪಕ್ಷ ಸಂಘಟನೆ ಹಾಗೂ ಜಾಗರಣ ವೇದಿಕೆಯಲ್ಲಿದ್ದು ಸಂಘ ಸಂಘಟನೆ ಮಾಡಿರುವೆ. ಹೀಗಾಗಿ ನನಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದೇನೆ ಎಂದು ಬಿಜೆಪಿ ಬಳ್ಳಾರಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅನಿಲ್‌ ನಾಯ್ಡು ಮೋಕಾ ಹೇಳಿದ್ದಾರೆ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ