ಗಣೇಶ್ ತಮ್ಮಡಿಹಳ್ಳಿ
ಜಿಲ್ಲಾ ಆಸ್ಪತ್ರೆ ಮೆಗ್ಗಾನ್‌ನಲ್ಲಿ ವೈದ್ಯಾಧಿಕಾರಿಗಳ ಮಟ್ಟಿಗೆ ಎಲ್ಲವೂ ಸರಿ ಇದೆ. ಆದರೆ, ರೋಗಿಗಳ ಪಾಲಿಗೆ ಯಾವುದೂ ಇಲ್ಲ!.
ಶಿವಮೊಗ್ಗ ಸೇರಿದಂತೆ ಹೊರ ಜಿಲ್ಲೆಯಿಂದಲೂ ಮೆಗ್ಗಾನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಪ್ರತಿನಿತ್ಯ 2000ಕ್ಕೂ ಹೆಚ್ಚು ಒಳ ಹಾಗೂ ಹೊರ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಲ್ಲಿಗೆ ಹೆಚ್ಚಿನ ಪಾಲು ಬಡವರ್ಗದ ಜನರು ಬರುತ್ತಿದ್ದಾರೆ. ರೋಗಿಗಳ ಚಿಕಿತ್ಸೆಗಾಗಿ ಇರುವ ದೊಡ್ಡಾಸ್ಪತ್ರೆಯ ಸ್ಥಿತಿಯೇ ತೀವ್ರ ಹದಗೆಟ್ಟಿದೆ. ಮೆಗ್ಗಾನ್ ಆಸ್ಪತ್ರೆಗೆ ಸರ್ಕಾರ ಕೋಟಿ ಕೋಟಿ ಹಣ ವ್ಯಹಿಸಿ ಎಲ್ಲ ಸೌಲಭ್ಯ ಕೊಟ್ಟರೂ ಇದ್ಯಾವುದೂ ಇಲ್ಲಿನ ರೋಗಿಗಳಿಗೆ ಸಿಗುತ್ತಿಲ್ಲ. ತುರ್ತು ಸಂದರ್ಭಗಳಲ್ಲಿ ರಕ್ತ ಪರೀಕ್ಷೆ, ಸ್ಕ್ಯಾನಿಂಗ್, ಔಷಧಿ ಹೀಗೆ ಎಲ್ಲವನ್ನೂ ಹಣ ಕೊಟ್ಟು ಹೊರಗೆ ಮಾಡಿಸುವ ಅನಿವಾರ್ಯತೆಗೆ ರೋಗಿಗಳು ಒಳಗಾಗಿದ್ದಾರೆ.
ಸರ್ಕಾರಿ ಆಸ್ಪತ್ರೆಗೆ ಖಾಸಗಿ ಮೆಡಿಸಿನ್: ‘ಎಂಟು ದಿನಗಳ ಹಿಂದೆ ಇಲ್ಲಿಗೆ ಬಂದಿದ್ದೇವೆ. ಬಿಪಿಎಲ್ ಕಾರ್ಡ್ ಇದ್ದರೂ ಮೊದಲು ನಾಲ್ಕು ದಿನ ಎಲ್ಲದಕ್ಕೂ ಬಿಲ್ ಪಾವತಿ ಮಾಡಿದ್ದೆ. ಮೊದಲ ದಿನ ಎರಡು ರಕ್ತ ಪರೀಕ್ಷೆಗೆ ಖಾಸಗಿ ಲ್ಯಾಬ್‌ಗೆ ಬರೆದುಕೊಟ್ಟಿದ್ದರು. ಅಲ್ಲಿ ಸಿಕ್ಕಾಪಟ್ಟೆ ದುಬಾರಿ. 3,000 ರು. ಖರ್ಚು ಆಗಿತ್ತು. ಇಲ್ಲಿ ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ. ಇಲ್ಲ ಎಂದರೆ ಪರದಾಡಬೇಕಾಗುತ್ತದೆ. ನಾವು ಬಡವರು, ಹಣ ಕೊಟ್ಟು ಚಿಕಿತ್ಸೆ ಪಡೆಯುವುದಿದ್ದರೆ ಸರ್ಕಾರಿ ಆಸ್ಪತ್ರೆಗೆ ಏಕೆ ಬರಬೇಕು?’ ಎಂದು ರೋಗಿ ಕರೆತಂದಿದ್ದ ಸಂಬಂಧಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆ ಗಮನಿಸದ ಅಧೀಕ್ಷಕರು!
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಒಂದಲ್ಲ ಒಂದು ಅವಾಂತರಗಳು ನಡೆಯುತ್ತಲೇ ಇರುತ್ತವೆ. ಇದರ ವಿರುದ್ಧ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಲೇ ಇರುತ್ತವೆ. ಸಚಿವರು ಬಂದು ಸಭೆ ನಡೆಸಿದರೂ, ಉನ್ನತ ಮಟ್ಟದ ಅಧಿಕಾರಿಗಳು ಭೇಟಿ ಕೊಟ್ಟರೂ ಸಮಸ್ಯೆಗಳಿಗೆ ಪರಿಹಾರ ಮಾತ್ರ ಶೂನ್ಯವಾಗಿದೆ. ಆಸ್ಪತ್ರೆಯಲ್ಲಿ ಅನೇಕ ಸಮಸ್ಯೆಗಳಿದ್ದರೂ ಯಾವುದು ಸಮಸ್ಯೆಯೇ ಇಲ್ಲವೆಂಬಂತೆ ಮೆಗ್ಗಾನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಟಿ.ಡಿ.ತಿಮ್ಮಪ್ಪ ಅವರು ವರ್ತಿಸುತ್ತಿದ್ದಾರೆ. ಯಾರೇ ಆಸ್ಪತ್ರೆಯ ಸಮಸ್ಯೆ ಬಗ್ಗೆ ಅವರ ಗಮನಕ್ಕೆ ತಂದರೂ ಯಾವುದನ್ನೂ ಕಿವಿಗೆ ಹಾಕಿಕೊಳ್ಳುವುದಿಲ್ಲ ಎಂಬುದು ಹಲವರ ಆರೋಪ.ಹೊಸ ನಿಯಮದಿಂದ ಬೇಸತ್ತ ರೋಗಿಗಳು
-----
ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಎಬಿಆರ್‌ಕೆ ಅಡಿಯಲ್ಲಿ ದಾಖಲಾದ 24 ಗಂಟೆ ಬಳಿಕ ಬಿಪಿಎಲ್ ಕಾರ್ಡ್ ಇದ್ದವರಿಗೆ ಉಚಿತ ಚಿಕಿತ್ಸೆ ಹಾಗೂ ಎಪಿಎಲ್ ಕಾರ್ಡ್ ಇದ್ದವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಕೆಲವೊಮ್ಮೆ ಔಷಧಿ ಲಭ್ಯ ಇರುವುದಿಲ್ಲ. ಆಗ ವೈದ್ಯರು ಹೊರಗಡೆ ಔಷಧಿ ಬರೆದುಕೊಡುತ್ತಿದ್ದಾರೆ. ಔಷಧಿ ಲಭ್ಯ ಇದ್ದೂ ಹೊರಗಡೆ ಔಷಧಿ ಬರೆದುಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು.- ಡಾ.ಟಿ.ಡಿ.ತಿಮ್ಮಪ್ಪ, ವೈದ್ಯಕೀಯ ಅಧೀಕ್ಷಕ, ಮೆಗ್ಗಾನ್ ಆಸ್ಪತ್ರೆ.