ಜನಸ್ನೇಹಿ, ನೌಕರಸ್ನೇಹಿ ಎಂದೇ ಹೆಸರಾಗಿದ್ದವರು ಡಾ. ಶಿವಶಂಕರ್: ತಹಸೀಲ್ದಾರ್ ಎಚ್. ಬಾಲಕೃಷ್ಣ

KannadaprabhaNewsNetwork |  
Published : Feb 05, 2025, 12:36 AM IST
02 ಕುಂದಾಣ 04 | Kannada Prabha

ಸಾರಾಂಶ

ನಾನು ಮೊದಲಿನಿಂದಲೂ ಎಸಿ ಆಗಬೇಕೆಂದುಕೊಂಡು ಎಸಿ ಆಗಿ ಗುಲ್ಬರ್ಗ, ಯಾದಗಿರಿ, ಹಾಸನ, ಮಧುಗಿರಿ, ಮಡಿಕೇರಿ ನಂತರ ದೊಡ್ಡಬಳ್ಳಾಪುರದಲ್ಲಿ ಕಾರ್ಯ ನಿರ್ವಹಿಸಿದೆ.

ಕನ್ನಡಪ್ರಭ ವಾರ್ತೆ ಕುಂದಾಣ

ಜನಸ್ನೇಹಿ ಹಾಗೂ ನೌಕರಸ್ನೇಹಿ ಎಂದೇ ಹೆಸರಾಗಿದ್ದ, ಎಂತಹದೇ ಸಮಸ್ಯೆಗಳನ್ನು ಸುಲಲಿತವಾಗಿ ಬಗೆಹರಿಸುತಿದ್ದ, ಜಂಟಲ್ ಮ್ಯಾನ್ ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಎಂದು ದೇವನಹಳ್ಳಿ ತಹಸೀಲ್ದಾರ್ ಎಚ್. ಬಾಲಕೃಷ್ಣ ತಿಳಿಸಿದರು.

ತಾಲೂಕಿನ ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಡೀಸಿ ಎಸ್.ಶಿವಶಂಕರ್‌ರವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವುದೇ ಒಂದು ಚಾಲೆಂಜ್, ಅನೇಕ ಕ್ಲಿಷ್ಟಕರ ಸನ್ನಿವೇಶಗಳು ಬರುತ್ತಲೇ ಇರುತ್ತವೆ. ಆದರೂ ಹೆಚ್ಚು ಒತ್ತಡಕ್ಕೆ ಒಳಗಾಗದೆ ನಿರ್ವಹಿಸುವುದು ಬಹಳ ಕಷ್ಟ. ಅಂತಹ ಸನ್ನಿವೇಶಗಳಲ್ಲೂ ಯಾವುದೇ ಅಡೆತಡೆಗಳು ಎದುರಾದರೂ ಜಿಲ್ಲಾಧಿಕಾರಿ ಶಿವಶಂಕರ್ ಸಾಹೇಬರು ನಗುನಗುತ್ತಲೇ ಬಗೆಹರಿಸುವಲ್ಲಿ ನಿಸ್ಸೀಮರು. ಅವರ ಕೈಕೆಳಗೆ ಕೆಲಸ ಮಾಡುವವರನ್ನು ಇದುವರೆಗೆ ಏಕವಚನದಲ್ಲಿ ಸಂಭೋದಿಸಿದ್ದು ಯಾರೂ ನೋಡಿಲ್ಲ ಎಂದರು.

ನಿಕಟಪೂರ್ವ ಜಿಲ್ಲಾಧಿಕಾರಿ ಡಾ. ಎನ್. ಶಿವಶಂಕರ್ ಮಾತನಾಡಿ, ನಾನು ಮೊದಲಿನಿಂದಲೂ ಎಸಿ ಆಗಬೇಕೆಂದುಕೊಂಡು ಎಸಿ ಆಗಿ ಗುಲ್ಬರ್ಗ, ಯಾದಗಿರಿ, ಹಾಸನ, ಮಧುಗಿರಿ, ಮಡಿಕೇರಿ ನಂತರ ದೊಡ್ಡಬಳ್ಳಾಪುರದಲ್ಲಿ ಕಾರ್ಯ ನಿರ್ವಹಿಸಿದೆ. ಡೀಸಿ ಆಗಬೇಕು ಅಂದುಕೊಂಡೆ, ಬೆಂಗಳೂರು ಗ್ರಾ. ಜಿಲ್ಲೆಯಲ್ಲಿಯೇ ಜಿಲ್ಲಾಧಿಕಾರಿಯಾಗಿ 1 ವರ್ಷ 7ತಿಂಗಳು ಕಾರ್ಯ ನಿರ್ವಹಿಸಿ, ನಿಷ್ಠೆಯಿಂದ ಜನರ ಸೇವೆಯನ್ನು ಮಾಡಿದ್ದೇನೆ ಎನ್ನುವ ಸಮಾಧಾನವಿದೆ. ಈಗ ಬೆಸ್ಕಾಂನಲ್ಲಿ ವ್ಯವಸ್ಥಾಪಕ ನಿರ್ದೇಶಕನಾಗಿ ಪ್ರೊಮೋಷನ್ ದೊರೆತಿದೆ. ಯಾವುದೇ ಕೆಲಸವಾಗಲಿ, ಸರ್ಕಾರ ನೀಡುವ ಹುದ್ದೆಯನ್ನು ನಿಷ್ಠೆಯಿಂದ ಮಾಡಬೇಕು, ಮಾಡುತ್ತೇನೆ ಎಂದು ತಿಳಿಸಿದರು.

ಪಿ. ಗಂಗಾಧರಪ್ಪ ಮಾತನಾಡಿ, ನಿಕಟಪೂರ್ವ ಜಿಲ್ಲಾಧಿಕಾರಿ ಡಾ.ಎನ್. ಶಿವಶಂಕರ್ ಸಹನಾಮೂರ್ತಿ, ಇತ್ತೀಚೆಗೆ ನಡೆದ ದರಕಾಸ್ತು ಪೋಡಿ ಆಂದೋಲನದಲ್ಲಿ ಅವರ ಮಾರ್ಗದರ್ಶನದಲ್ಲಿ 1236 ಪೋಡಿ ಮಾಡಿಸಿ ರಾಜ್ಯದಲ್ಲಿಯೇ ಬೆಂ.ಗ್ರಾಮಾಂತರ ಜಿಲ್ಲೆ ಪ್ರಥಮ ಸ್ಥಾನಕ್ಕೆ ಭಾಜನವಾಗಿರುವುದು ಅವರ ಹೆಗ್ಗಳಿಕೆ, ಯಾರಿಗೂ ಒತ್ತಡ ನೀಡದೇ ಸಹನೆಯಿಂದಲೇ ಕೆಲಸ ಮಾಡಿಸಿದ ಜಿಲ್ಲಾಧಿಕಾರಿಯಾಗಿದ್ದಾರೆ ಎಂದರು.

ನಂತರ ಅವರಿಗೆ ಸಮಸ್ತ ಜಿಲ್ಲಾಡಳಿತ, ಅಧಿಕಾರಿ, ಸಿಬ್ಬಂದಿ ವರ್ಗ ಹಾಗೂ ಅವರ ಅಭಿಮಾನಿಗಳಿಂದ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.

ರಾಜೀವ ಸುಲೋಚನ, ಗುಣವಂತ, ವಿಠಳ ಕಾವಳೆ, ಜಗದೀಶ್ ಸೇರಿ ಹಲವು ಅಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗಿನ ಒಡನಾಟ, ಅವರ ತಾಳ್ಮೆ, ಕೆಲಸದ ವೈಖರಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿ ಅಗಣಿತ ಎಂದು ಗುಣಗಾನ ಮಾಡಿದರು.

ಅಪರ ಜಿಲ್ಲಾಧಿಕಾರಿ ಎಚ್. ಅಮರೀಶ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ದೇವನಹಳ್ಳಿ ಡಿ.ಡಿ.ಎಲ್.ಆರ್ ಸಂತೋಷ್, ದೊಡ್ಡಬಳ್ಳಾಪುರ ತಹಸೀಲ್ದಾರ್, ವಿಭಾ ರಾಠೋಡ್, ಹೊಸಕೋಟೆ ತಹಸೀಲ್ದಾರ್ ಮಲ್ಲಿಕಾರ್ಜುನ್, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಗುಣವಂತ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮಣ್, ಕೈಗಾರಿಕೆ ಇಲಾಖೆ ಉಪ ನಿರ್ದೇಶಕ ನರೇಂದ್ರಬಾಬು, ಯೋಜನಾ ನಿರ್ದೇಶಕ ರಮೇಶ್, ವಿಠಲಕಾವ್ಳೆ, ರಮೇಶ್ ಸೇರಿ ಜಿಲ್ಲಾಮಟ್ಟದ, ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಯ್ಯಪ್ಪನ ಮಾಲೆ ಧರಿಸಿದ ಬಾಲಕನ ಮೇಲೆ ಶಿಕ್ಷಕ ಹಲ್ಲೆ!
ತಂದೆಗೆ ಕಿರುಕುಳ ನೀಡದಂತೆ ಚೈತ್ರಾ ಕುಂದಾಪುರಗೆ ಆದೇಶ