ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮಾಂಜಾದಾರ ಮಾರಾಟ ಅಧಿಕವಾಗಿದ್ದರೂ ಅಧಿಕಾರಿಗಳು ಮೌನವಹಿಸಿರುವುದು ಪಕ್ಷಿ ತಜ್ಞರ ಕೆಂಗಣ್ಣಿಗೆ ಗುರಿಯಾಗಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:
ಇತ್ತೀಚಿಗೆ ಬೆಳೆಗಾವಿ ಜಿಲ್ಲೆಯಲ್ಲಿ ಮಾಂಜಾದಾರ ಯುವಕನನ್ನು ಬಲಿಪಡೆದ ಬೆನ್ನಲ್ಲೆ ಅಲ್ಲಿನ ಜಿಲ್ಲಾಡಳಿತ, ಸ್ಥಳೀಯ ಸಂಸ್ಥೆ ಮಾಂಜಾದಾರದ ಮಾರಾಟಗಾರರ ವಿರುದ್ಧ ಸಮರ ಸಾರಿದ್ದು, ಅಂಗಡಿಗಳ ಮೇಲೆ ದಾಳಿ ನಡೆಸಿದೆ. ಆದರೆ, ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಇದರ ಮಾರಾಟ ಅಧಿಕವಾಗಿದ್ದರೂ ಅಧಿಕಾರಿಗಳು ಮೌನವಹಿಸಿರುವುದು ಪಕ್ಷಿ ತಜ್ಞರ ಕೆಂಗಣ್ಣಿಗೆ ಗುರಿಯಾಗಿದೆ. ತಕ್ಷಣ ಅಂಗಡಿಗಳ ಮೇಲೆ ದಾಳಿ ನಡೆಸಿ ಜೀವ ತೆಗೆಯುವ ಮಾಂಜಾದಾರ ವಶಪಡಿಸಿಕೊಳ್ಳದಿದ್ದರೆ ಹೋರಾಟದ ಎಚ್ಚರಿಕೆಯನ್ನೂ ನೀಡಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ವರ್ಷಕ್ಕೆ ಎರಡ್ಮೂರು ಮಾಂಜಾದಾರ ಪ್ರಕರಣಗಳು ಕಂಡುಬರುತ್ತಿದ್ದವು. ಮಹಾನಗರ ಪಾಲಿಕೆ ಮಾತ್ರ ಇದರ ಮಾರಾಟಕ್ಕೆ ಕಡಿವಾಣ ಹಾಕುತ್ತಿಲ್ಲ. ಜತೆಗೆ ಈ ಕುರಿತು ಜಾಗೃತಿ ಮೂಡಿಸುತ್ತಿಲ್ಲ. ಹೀಗಾಗಿ ಹಳೆ ಹುಬ್ಬಳ್ಳಿ, ಚನ್ನಪೇಟೆ, ನೆಹರು ನಗರ, ತೊರವಿಹಕ್ಕಲ, ದುರ್ಗದಬೈಲ್, ಜನತಾ ಬಜಾರ್, ಗಣೇಶಪೇಟೆ, ಶಾಹಬಜಾರ್ ಸುತ್ತಮುತ್ತ ಹಾಗೂ ಧಾರವಾಡದ ಹಲವು ಪ್ರದೇಶದ ಅಂಗಡಿಗಳಲ್ಲಿ ಮಾಂಜಾದಾರ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪವೂ ಕೇಳಿಬಂದಿದೆ.
ಗಾಜಿನ ಪುಡಿ ಲೇಪಿತ ಮಾರಕ ದಾರ:
ಸಾಮಾನ್ಯ ಹತ್ತಿ ನೂಲಿಗೆ ಗಂಜಿ ಬಳಸಿ, ಅದರ ಮೇಲೆ ಗಾಜಿನ ಪುಡಿ ಹಾಗೂ ಬಣ್ಣ ಲೇಪಿಸಿ ಮಾಂಜಾದಾರ ತಯಾರಿಸಲಾಗುತ್ತದೆ. ಗಾಜಿನ ಪುಡಿ ಲೇಪಿಸಿರುವುದರಿಂದ ಹರಿತವಾಗಿರುವ ಇದನ್ನು ಸಣ್ಣ ಪ್ರಮಾಣದ ಘಟಕ ಹಾಗೂ ಮನೆಗಳಲ್ಲಿ ತಯಾರಿಸಲಾಗುತ್ತಿದೆ. ಈ ಕುರಿತು ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಮೌನವಹಿಸಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಅಪಾಯದಿಂದ ಪಾರು:
ಅ. 1ರಂದು ಬಂಕಾಪುರ ಚೌಕದಲ್ಲಿ ಸ್ಕೂಟಿಯಲ್ಲಿ ಮಹಿಳೆ ತೆರಳುತ್ತಿದ್ದಾಗ ಕುತ್ತಿಗೆಗೆ ಮಾಂಜಾದಾರ ಸಿಲುಕಿ ತೀವ್ರ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ತೊರವಿಹಕ್ಕಳದಲ್ಲಿ ಈಚೆಗೆ 18 ವರ್ಷದ ಬಾಲಕನ ಕಾಲಿಗೆ ದಾರ ಸಿಲುಕಿ ಗಾಯವಾಗಿರುವ ಘಟನೆಗಳು ಕಳೆದ ಒಂದು ವಾರದಲ್ಲಿಯೇ ನಡೆದಿವೆ.
ರಜಾ ದಿನಗಳಲ್ಲಿಯೇ ಹೆಚ್ಚು:
ಶಾಲೆಗಳಿಗೆ ದಸರಾ ರಜೆ ಇದ್ದು ಸಂಜೆಯಾಗುತ್ತಿದ್ದಂತೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಗಾಳಿಪಟ ಹಾರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸಿದ್ಧಾರೂಢ ಮಠದ ಸುತ್ತಮುತ್ತ, ಬಯಲು ಪ್ರದೇಶ, ಹಳೇ ಹುಬ್ಬಳ್ಳಿ, ಎತ್ತರದ ಪ್ರದೇಶದಲ್ಲಿ ಗಾಳಿಪಟ ಹಾರಾಟದಲ್ಲಿ ಮಕ್ಕಳು ಭಾಗಿಯಾಗುತ್ತಿದ್ದಾರೆ. ಈ ಅವಧಿಯಲ್ಲಿ ಮಾಂಜಾದಾರ ಹೆಚ್ಚು ಮಾರಾಟವಾಗುತ್ತಿದೆ ಎಂದು ಪಕ್ಷಿ ತಜ್ಞರು ಹೇಳಿದ್ದಾರೆ.
ಜಾಗೃತಿ ಕೊರತೆ:
ಮಾಂಜಾದಾರ ಬಳಕೆಯಿಂದ ಎದುರಾಗುವ ಅಪಾಯದ ಕುರಿತು ಜನರಿಗೆ ಹಾಗೂ ಮಕ್ಕಳಲ್ಲಿ ಜಾಗೃತಿ ಕೊರತೆ ಇದೆ. ಮಹಾನಗರ ಪಾಲಿಕೆ ಈ ಕುರಿತು ಜಾಗೃತಿ ಮೂಡಿಸಬೇಕು. ತ್ಯಾಜ್ಯ ಸಂಗ್ರಹಿಸಲು ಮನೆ-ಮನೆಗೆ ಬರುವ ವಾಹನಗಳಲ್ಲಿ ಈ ಕುರಿತು ಧ್ವನಿ ವರ್ಧಕದ ಮೂಲಕ ಅರಿವು ಮೂಡಿಸಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.
ತಪಾಸಣೆ ಎಲ್ಲಿದೆ?:
ನಿಷೇಧ ಜಾರಿಯಲ್ಲಿದ್ದರೂ ಅಂಗಡಿಗಳಲ್ಲೇ ಮಾಂಜಾದಾರವನ್ನು ರಾಜಾರೋಷವಾಗಿ ಮಾರಾಟ ಮಾಡುತ್ತಿರುವುದು ಅಧಿಕಾರಿಗಳ ತಪಾಸಣಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿದೆ. ಕೆಲ ಅಂಗಡಿಗಳ ಮುಂದೆ ತಳಿರು-ತೋರಣದಂತೆ ತುಂಬಿದ ಮಾಂಜಾದಾರ ರೀಲ್‌ಗಳನ್ನು ಪ್ರದರ್ಶಿಸಿರುವುದು ಆಡಳಿತ ವೈಫಲ್ಯ ತೋರಿಸುತ್ತದೆ.
ಜಂಟಿ ಕಾರ್ಯಾಚರಣೆ ನಡೆಸಲಿ:
ನಿಷೇಧಿತ ಮಾಂಜಾದಾರ ಮಾರಾಟದ ವಿರುದ್ಧ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಜಂಟಿ ಕಾರ್ಯಾಚರಣೆ ನಡೆಸಬೇಕು. ಮಾರಾಟಗಾರರಷ್ಟೇ ಅಲ್ಲದೆ ತಯಾರಿಕೆ ಮತ್ತು ಪೂರೈಕೆ ಜಾಲವನ್ನೂ ಪತ್ತೆಹಚ್ಚಿ ಕ್ರಮಕೈಗೊಳ್ಳಬೇಕು. ಇಲ್ಲವಾದರೆ ಗಾಳಿಪಟದ ಸಂಭ್ರಮದ ಬೆಲೆ ಪಕ್ಷಿ ಮತ್ತು ಅಮಾಯಕರು ಜೀವ ತೆರಬೇಕಾದ ಪರಿಸ್ಥಿತಿ ಮುಂದುವರಿಯಲಿದೆ ಎಂದು ಪಕ್ಷಿ ತಜ್ಞ ಪವನ್ ಮಿಸ್ಕಿನ್ "ಕನ್ನಡಪ್ರಭ "ಕ್ಕೆ ತಿಳಿಸಿದರು.
ಮಾಂಜಾದಾರ ಮಾರಾಟ ನಿಷೇಧವಿದ್ದರೂ ನಗರದ ಪ್ರಮುಖ ಪ್ರದೇಶಗಳಲ್ಲೇ ಬಹಿರಂಗವಾಗಿ ಸಿಗುತ್ತಿದೆ. ಅಧಿಕಾರಿಗಳು ಕ್ರಮಕೈಗೊಳ್ಳಲು ಇನ್ನೇನು ಬೇಕು?. ಈಗಲಾದರೂ ಮಾಂಜಾದಾರ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ ಕಠಿಣ ಕ್ರಮಕೈಗೊಳ್ಳಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.