ಅರುಣ್ ಕುಮಾರ್ ಎಸ್.ವಿ.
ನಗರವೂ ಸೇರಿದಂತೆ ತಾಲೂಕಿನ ವಿವಿಧೆಡೆ ಅನಧಿಕೃತವಾಗಿ ಕ್ಲಿನಿಕ್‌ಗಳನ್ನು ತೆರೆದು ಕಾರ್ಯನಿರತವಾಗಿರುವ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ನಕಲಿ ವೈದ್ಯರ ಕ್ಲಿನಿಕ್‌ಗಳು ಮುಗ್ಧ ರೋಗಿಗಳ ಪ್ರಾಣದ ಜತೆ ಚೆಲ್ಲಾಟವಾಡುತ್ತಿದ್ದರೂ ಸಹ ಕ್ರಮಕೈಗೊಳ್ಳದೆ ಆರೋಗ್ಯ ಇಲಾಖೆ ಜಡವಾಗಿದೆ.
ಕೆಲವು ನಕಲಿ ವೈದ್ಯರು ಮನೆಗಳಲ್ಲೇ ಭ್ರೂಣ ಹತ್ಯೆಗೆ ಬೇಕಾದ ಔಷಧಿಗಳನ್ನು ವಿತರಣೆ ಮಾಡುತ್ತಿದ್ದಾರೆ. ಹಲವು ಕಡೆ ಆರೋಗ್ಯ ಇಲಾಖೆ ನಿಯಮ ಪಾಲಿಸದೆ ಕಾರ್ಯನಿರ್ವಹಿಸುತ್ತಿದ್ದಾರೆ.ಸಾಮಾನ್ಯ ಕಾಯಿಲೆಗಳ ತಪಾಸಣೆಗೆ ಬರುವ ರೋಗಿಗಳಿಗೆ ಅಗತ್ಯಕ್ಕಿಂತ ಹೆಚ್ಚಾದ ಮಾತ್ರೆ, ಇಂಜೆಕ್ಷನ್ ನೀಡಿ ಅವರಲ್ಲಿರುವ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ಇನ್ನಷ್ಟು ಅನಾರೋಗ್ಯ ಪೀಡಿತರನ್ನಾಗಿ ಮಾಡುವ ಕೆಲಸ ನಕಲಿ ವೈದ್ಯರಿಂದ ನಡೆಯುತ್ತಿದೆ. ವೈದ್ಯಕೀಯ ಶಿಕ್ಷಣ ಪಡೆಯದೆ, ಕೆಲವು ಕೋರ್ಸುಗಳನ್ನು ಓದಿಕೊಂಡು ಕ್ಲಿನಿಕ್ ತೆರೆದವರೂ ಇದ್ದಾರೆ. ಅಧಿಕೃತವಲ್ಲದ ಕೆಲವು ಕ್ಲಿನಿಕ್‌ಗಳಲ್ಲಿ ಒಳರೋಗಿಗಳಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುವ ಕೆಲಸವೂ ನಡೆಯುತ್ತಿದೆ. ಗೌರಬಿದನೂರಿನಲ್ಲಿ ಹಲವು ಕಡೆ ನೋಂದಣಿಯಾಗದ ವೈದ್ಯರು ಔಷಧಿ ಸಲಹೆ ನೀಡುತ್ತಿದ್ದು, ಇದು ನೈಜ ವೈದ್ಯರ ವಿಶ್ವಾಸಾರ್ಹತೆಯನ್ನೂ ಜನರು ಪ್ರಶ್ನಿಸುವಂತಾಗುತ್ತಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯರೊಬ್ಬರು ದೂರಿದರು.ತಾಲೂಕಿನಲ್ಲಿ 20ಕ್ಕೂ ಹೆಚ್ಚು ನಕಲಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿರುವ ಶಂಕೆ ಇದೆ. ಹಲವು ಕ್ಲಿನಿಕ್‌ಗಳಿಗೆ ಈ ಹಿಂದೆಯೆ ನೊಟೀಸ್ ನೀಡಲಾಗಿದ್ದರೂ ಈವರೆಗೆ ಯಾವುದೇ ಗಂಭೀರ ಕ್ರಮವಾಗಿಲ್ಲ. ''''ನಕಲಿ ವೈದ್ಯರು ನೀಡುವ ಔಷಧಿಯ ಅಡ್ಡ ಪರಿಣಾಮವನ್ನು ಅನೇಕರು ಅನುಭವಿಸಿದ್ದಾರೆ. ನಕಲಿ ವೈದ್ಯರಿಂದ ಔಷಧಿ ಪಡೆದ ಅನೇಕ ರೋಗಿಗಳು ಕಿಡ್ನಿ, ದೇಹದ ಅಂಗಾಂಗ ಕಳೆದುಕೊಂಡಿದ್ದಾರೆ. ವೈದ್ಯರಲ್ಲದವರೂ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಆರೋಗ್ಯ ಇಲಾಖೆ ಅಂತಹ ಕ್ಲಿನಿಕ್‌ಗಳ ಮುಚ್ಚಿಸಲು ಕ್ರಮವಹಿಸಿಲ್ಲ ಎನ್ನುತ್ತಾರೆ ಸುರೇಶ್ ರೆಡ್ಡಿ.ಗ್ರಾಮೀಣ ಪ್ರದೇಶಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಂ.ಬಿ.ಬಿ.ಎಸ್. ಹಾಗೂ ಸೂಕ್ತ ವಿದ್ಯಾರ್ಹತೆಯುಳ್ಳ ವೈದ್ಯರ ಕೊರತೆ ಇರುವುದು ನಕಲಿ ವೈದ್ಯರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಹೀಗಾಗಿ ಜನರು ಲಭ್ಯವಿರುವ ನಕಲಿ ವೈದ್ಯರ ಬಳಿ ಹೋಗುತ್ತಿದ್ದಾರೆ. ಎಲ್ಲ ಕಡೆಯೂ ನೋಂದಾಯಿತ ವೈದ್ಯರು ಇರುವಂತೆ ಆರೋಗ್ಯ ಇಲಾಖೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.ಕೋಟ್....ತಾಲೂಕಿನಲ್ಲಿ ನಕಲಿ ಆಸ್ಪತ್ರಗಳೇ ಇಲ್ಲ. ಒಂದು ವೇಳೆ ಇದ್ದರೆ ತಾವು ತೋರಿಸಿದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನಮಗೆ ದೊರೆತಂತಹ ನಕಲಿ ವೈದ್ಯರ ಬಗ್ಗೆ ಮಾಹಿತಿಯನ್ನು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವರದಿ ನೀಡಲಾಗಿದೆ. ಈ ಹಿಂದೆಯೂ ದಾಳಿ ಮಾಡಿ ನಕಲಿ ವೈದ್ಯರ ಬಗ್ಗೆ ಕ್ರಮಕ್ಕೆಶಿಫಾರಸ್ಸು ಮಾಡಲಾಗಿತ್ತು
ಹೇಮ ಬಿ.ವಿ., ತಾಲೂಕು ಆರೋಗ್ಯಾಧಿಕಾರಿ.ತಾಲೂಕಿನಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಹುದ್ದೆಯು ಖಾಲಿ ಇದ್ದು, ತಾತ್ಕಾಲಿಕವಾಗಿ ಟಿ.ಎಚ್.ಓ. ಅವರನ್ನು ನೇಮಕ ಮಾಡಲಾಗಿದೆ. ತಾತ್ಕಾಲಿಕ ಟಿಕೆಹೆಚ್.ಓ.ಗೆ ನಕಲಿ ಆಸ್ಪತ್ರೆಗಳನ್ನು ಸೀಜ್ ಮಾಡುವ ಅಧಿಕಾರವಿರುವುದಿಲ್ಲ. ಆದ ಕಾರಣ ನಾವೇ ಖುದ್ದಾಗಿ ಬಂದು ನಕಲಿ ಕ್ಲೀನಿಕ್‌ಗಳನ್ನು ತೆರವುಗೊಳಿಸಲಾಗುವುದು.
ಡಾ.ಜಿ.ಶ್ರೀನಿವಾಸ್, ಜಿಲ್ಲಾ ಆರೋಗ್ಯಾಧಿಕಾರಿ.