ಉಭಯ ನಾಯಕರಲ್ಲಿ ವಿಜಯದ ಮಾಲೆ ಧರಿಸುವರ್ಯಾರು?

KannadaprabhaNewsNetwork | Published : Jun 4, 2024 12:32 AM

ಸಾರಾಂಶ

ಲೋಕಸಭಾ ಕ್ಷೇತ್ರದ ಕಣದಲ್ಲಿ 8 ಜನ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು ಇವರಲ್ಲಿ ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಹಾಗೂ ಕಾಂಗ್ರೆಸ್‌ನ ಜಿ.ಕುಮಾರ ನಾಯಕ ಅವರ ನಡುವೆ ನೇರ ಹಣಾಹಣಿ

ರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಲೋಕಸಭಾ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಕೊನೆ ಘಟ್ಟಕ್ಕೆ ಬಂದು ತಲುಪಿದ್ದು, ಮಂಗಳವಾರ ಫಲಿತಾಂಶ ಹೊರಬೀಳಲಿದ್ದು, ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯ ಬಯಲಾಗಲು ಕ್ಷಣಗಣನೆ ಶುರುವಾಗಿದ್ದು, ಶುಭ ಮಂಗಳವಾರ ಯಾರ ಪಾಲಾಗಲಿದೆ ಎನ್ನುವ ತೀವ್ರ ಕುತೂಹಲ ಎಲ್ಲೆಡೆ ಮನೆಮಾಡಿದೆ.

ಪಕ್ಕದ ಯಾದಗಿರಿ ಜಿಲ್ಲೆಯ ಮೂರು ಮತ್ತು ರಾಯಚೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯನ್ನು ಒಳಗೊಂಡಿರುವ ಲೋಕಸಭಾ ಕ್ಷೇತ್ರದ ಕಣದಲ್ಲಿ 8 ಜನ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು ಇವರಲ್ಲಿ ಬಿಜೆಪಿಯ ರಾಜಾ ಅಮರೇಶ್ವರ ನಾಯಕ ಹಾಗೂ ಕಾಂಗ್ರೆಸ್‌ನ ಜಿ.ಕುಮಾರ ನಾಯಕ ಅವರ ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದರಿಂದ ಈ ಉಭಯ ನಾಯಕರಲ್ಲಿ ಯಾರ ಕೊರಳಿಗೆ ಮತದಾರರು ವಿಜಯದ ಮಾಲೆ ಹಾಕುತ್ತಾರೆ ಎನ್ನುವ ಪ್ರಶ್ನೆಗೆ ಮಂಗಳವಾರ ಮಧ್ಯಾಹ್ನದ ವೇಳೆಗೆ ಉತ್ತರ ದೊರೆಯಲಿದೆ.

ಇಲ್ಲಿನ ಲೋಕಸಭಾ ಕ್ಷೇತ್ರದ ಚುನಾವಣೆ ಅಂತಿಮ ಕಣದಲ್ಲಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ, ಕಾಂಗ್ರೆಸ್ ಪಕ್ಷದಿಂದ ಜಿ.ಕುಮಾರ ನಾಯಕ, ಬಿಎಸ್ಪಿಯಿಂದ ಎಸ್.ನರಸಣ್ಣ ಗೌಡ ನಾಯಕ, ಕರ್ನಾಟಕ ರಾಷ್ಟ್ರ ಸಮಿತಿ ಬಸವಪ್ರಭು ಮೇದಾ, ಸೋಷಿಯಲ್ ಯುನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷದ ರಾಮಲಿಂಗಪ್ಪ, ಭಾರತೀಯ ಜನ ಸಾಮ್ರಾಟ ಪಕ್ಷದ ಮೇದಾರ ಶಾಮರಾವ್ ಮತ್ತು ಅಮರೇಶ ಹಾಗೂ ಯಲ್ಲಮ್ಮ ದಳಪತಿ ಅವರು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದು, ಕಳೆದ ಮೇ.7ರಂದು ಕ್ಷೇತ್ರಕ್ಕೆ ಜರುಗಿದ ಚುನಾವಣೆಯಲ್ಲಿ ಶೇ.64.66 ಮತದಾನವಾಗಿತ್ತು. ತಿಂಗಳ ನಂತರ ಮತ ಎಣಿಕೆ ಪ್ರಕ್ರಿಯೇ ಮಂಗಳವಾರ ನಡೆಯುತ್ತಿದ್ದು, ಕೊನೆ ಕ್ಷಣದಲ್ಲಿ ಫಲಿತಾಂಶದ ಕಾತರವು ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಡ್ಕಿಚ್ಚಿನಂತೆ ಆವರಿಸಿಕೊಂಡಿದೆ.

ಇಂದು ಲೆಕ್ಕಾಚಾರಕ್ಕೆ ತೆರೆ:ಮತದಾನದ ನಂತರ ಕ್ಷೇತ್ರದಾದ್ಯಂತ ಯಾರು ಗೆಲ್ಲುತ್ತಾರೆ ಎನ್ನುವ ಲೆಕ್ಕಾಚಾರವು ಜೋರಾಗಿತ್ತು. ಬೂತ್‌ ಮಟ್ಟದಿಂದ ಹಿಡಿದು ಗ್ರಾಪಂ, ತಾಪಂ, ಜಿಪಂ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ ಯಾರಪರವಾಗಿ ಮತದಾರರು ವಾಲಿದ್ದಾರೆ. ರಾಜಕೀಯ ಮುಖಂಡರು, ಯಾವ ಧರ್ಮ, ಜಾತಿಯವರು ಯಾರಿಗೆ ಬೆಂಬಲ ನೀಡಿದ್ದಾರೆ. ಹಣದ ವ್ಯವಹಾರ, ಯಾರು ಗೆಲ್ಲುತ್ತಾರೆ ಎಂಬ ವಿಷಯದಲ್ಲಿ ತೆರೆಮರೆಯಲ್ಲಿ ಸಾಗಿರುವ ಬೆಟ್ಟಿಂಗ್ ಸೇರಿದಂತೆ ಹತ್ತು ಹಲವು ರೀತಿಯಲ್ಲಿ ಸಾಗಿದ್ದ ಗೆಲುವಿನ ಲೆಕ್ಕಾಚಾರಕ್ಕೆ ಮಂಗಳವಾರ ಇತಿಶ್ರೀ ಬೀಳಲಿದೆ. ಇಷ್ಟು ದಿನಗಳ ಕಾಲ ಮತದಾರರ ನಾಡಿ ಮಿಡಿತವನ್ನು ಅರಿಯದೇ ಗೊಂದಲಕ್ಕೆ ಸಿಲುಕಿ ಕಂಗಾಲಾಗಿದ್ದವರು ಫಲಿತಾಂಶದತ್ತ ತಮ್ಮ ಚಿತ್ತ ನೆಟ್ಟಿದ್ದಾರೆ.

ಚುನಾವಣೆ ಪ್ರಕ್ರಿಯೆ ವಿವರ

06-ರಾಯಚೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾದಗಿರಿ ಜಿಲ್ಲೆಯ ಯಾದಗಿರಿ, ಶಹಾಪುರ, ಶೋರಾಪುರ ಮತ್ತು ರಾಯಚೂರು ಜಿಲ್ಲೆಯ ರಾಯಚೂರು ನಗರ, ಗ್ರಾಮೀಣ, ಮಾನ್ವಿ, ದೇವದುರ್ಗ ಮತ್ತು ಲಿಂಗಸುಗೂರು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಕಳೆದ ಮಾ.16ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆ ಘೋಷಣೆ, ಏ.12ಕ್ಕೆ ರಾಯಚೂರು ಕ್ಷೇತ್ರಕ್ಕೆ ಅಧಿಸೂಚನೆ ಪ್ರಕಟ, 19ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ, 11ರಿಂದ ಉಮೇದುವಾರಿಕೆ ಸಲ್ಲಿಕೆ, ಇದರಲ್ಲಿ ಅಂತಿಮ ಕಣದಲ್ಲಿ 8 ಜನ, ಮೇ 7ರಂದು ಜರುಗಿದ ಮತದಾನದಲ್ಲಿ 9,94,646 ಪುರುಷ, 10,15,158 ಮಹಿಳಾ, 299 ಇತರೆ ಸೇರಿ ಒಟ್ಟು 20,10,103 ಮತದಾರರ ಪೈಕಿ 6,57,867 ಪುರುಷ, 6,41,917 ಮಹಿಳಾ ಹಾಗೂ 22 ಇತರೆ ಸೇರಿ ಒಟ್ಟು 12,99,806 ಮತದಾರರಿಂದ ಶೇ.64.66 ರಷ್ಟು ಮತದಾನವಾಗಿದೆ. ಇದೀಗ ಚುನಾವಣೆ ಪ್ರಕ್ರಿಯೇ ಕೊನೆ ಹಂತವಾಗಿರುವ ಮತ ಎಣಿಕೆ ಕಾರ್ಯವು ಮಂಗಳವಾರ ನಡೆಯುತ್ತಿದೆ.

Share this article