ಯಾರಿಗೆ ಒಲಿಯಲಿದೆ ಬೀರೂರು ಪುರಸಭೆ ಅಧ್ಯಕ್ಷ ಪಟ್ಟ?

KannadaprabhaNewsNetwork |  
Published : Aug 07, 2024, 01:01 AM IST
ಬೀರೂರು ಪುರಸಭೆ | Kannada Prabha

ಸಾರಾಂಶ

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷೆ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲು

-ಬೀರೂರು ಎನ್.ಗಿರೀಶ್

ಕನ್ನಡಪ್ರಭ ವಾರ್ತೆ ಬೀರೂರು

ಅಂತೂ ಸುಧೀರ್ಘ 14ತಿಂಗಳ ನಂತರ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ನಿಗದಿ ಪಡಿಸಿ ಆದೇಶ ಹೊರಡಿಸಿದೆ.

ಅದರಂತೆ ಬೀರೂರು ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ ಪಾಲಾಗಿದ್ದರೆ, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಈ ಹಿನ್ನೆಲೆ ಪುರಸಭೆ ಒಳಗೆ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಈ ಹಿಂದೆ 30 ತಿಂಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರಾವಧಿ ಮುಗಿದಿದ್ದು, 1ನೇ ವಾರ್ಡ್‌ನ ಸದಸ್ಯ ಎಂ.ಪಿ.ಸುದರ್ಶನ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಮೀನಾಕ್ಷಮ್ಮ ಅವರು ಅಧಿಕಾರ ನಿರ್ವಹಿಸಿ ಕೆಳಗಿಳಿದಿದ್ದಾರೆ. ಆ ಸಂದರ್ಭದಲ್ಲಿ ಪುರಸಭೆ ಆಡಳಿತವನ್ನು ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಅಧಿಕಾರ ಹಿಡಿದಿದ್ದವು.

ಅಧ್ಯಕ್ಷ ಸುದರ್ಶನ್ ಹಾಗೂ ಉಪಾಧ್ಯಕ್ಷರಾಗಿದ್ದ ಮೀನಾಕ್ಷಮ್ಮ ಇಬ್ಬರು ಬಿಜೆಪಿಯವರೇ ಆಗಿದ್ದು, ಎರಡು ಪಕ್ಷದವರ ನಾಯಕರ ನೇತೃತ್ವದಲ್ಲಿ ನಡೆದ ಮಾತುಕತೆಯಂತೆ ಇದೀಗ ಎರಡನೆ ಹಂತದ ಅಧಿಕಾರವಧಿಗೆ ಅಧಿಕಾರ ಬಿಟ್ಟುಕೊಡುವ ಪರಿಸ್ಥಿತಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಲ್ಲಿ ಇದೆ.

ಹಿಂದಿನ ಅವಧಿಯಲ್ಲಿ ಕಡೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಳ್ಳಿಪ್ರಕಾಶ್ ಶಾಸಕರಾಗಿದ್ದರು. ಈಗ ಶಾಸಕರಾಗಿ ಕಾಂಗ್ರೆಸ್‌ನ ಕೆ.ಎಸ್.ಆನಂದ್ ಆಯ್ಕೆಯಾಗಿದ್ದು. ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಮೇಲೆ ಇದು ಕೂಡ ಪರಿಣಾಮ ಬೀರಲಿದೆ. ಬೀರೂರು ಪುರಸಭೆಯಲ್ಲಿ ಒಟ್ಟು 23 ಸದಸ್ಯ ಬಲವಿದ್ದು, ಬಿಜೆಪಿಯ11 ಸದಸ್ಯರು, ಕಾಂಗ್ರೆಸ್‌ನ 9 ಸದಸ್ಯರು ಹಾಗೂ ಜೆಡಿಎಸ್‌ ನ 2 ಹಾಗೂ ಒರ್ವ ಪಕ್ಷೇತರ ಸದಸ್ಯರು ಇದ್ದಾರೆ. ಬಹುಮತಕ್ಕೆ ಬೇಕಾದ 12 ಸದಸ್ಯ ಬಲ ಬಿಜೆಪಿ ಬಳಿ ಇಲ್ಲದಿರುವುದ್ದರಿಂದ ಅದು ಜೆಡಿಎಸ್ ಬೆಂಬಲ ಪಡೆದು ಪುರಸಭೆ ಆಡಳಿತ ಚುಕ್ಕಾಣಿ ಹಿಡಿದಿತ್ತು. ಅಧಿಕಾರ ಹಂಚಿಕೆಯ ಸೂತ್ರ ಏನಾದರೂ ನಡೆದಿದ್ದರೆ, ಬಿಜೆಪಿಯು ಜೆಡಿಎಸ್‌ಗೂ ಅಧಿಕಾರ ಬಿಟ್ಟು ಕೊಡಬೇಕಾದ ಅನಿವಾರ್ಯತೆ ಇದೆ.

ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಪಾಲಾಗಿರುವುದರಿಂದ ಬಿಜೆಪಿಯಲ್ಲಿ ಸದಸ್ಯರಾದ ಸಹನಾ ವೆಂಕಟೇಶ್, ಭಾಗ್ಯಲಕ್ಷ್ಮಿ ಮೋಹನ್, ಶಾರದ ರುದ್ರಪ್ಪ ಹಾಗೂ ಸುಮಿತ್ರಾ ಕೃಷ್ಣಮೂರ್ತಿ ಇದ್ದರೆ, ಜೆಡಿಎಸ್‌ ಸದಸ್ಯೆ ವನಿತಾ ಮಧುಬಾವಿಮನೆ ರೇಸಿನಲ್ಲಿದ್ದಾರೆ.

ಇನ್ನು ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಸೀಮಿತವಾಗಿರುವುದ್ದರಿಂದ ಬಿಜೆಪಿಯಲ್ಲಿ ಮೂವರು ಹಿರಿಯ ಸದಸ್ಯರು ಮತ್ತು ಜೆಡಿಎಸ್ ಪಕ್ಷದ ಬಿ.ಎಂ.ಮೋಹನ್ ಕುಮಾರ್ ಆಕಾಂಕ್ಷಿಗಳಾಗಿದ್ದಾರೆ.

ಕಾಂಗ್ರೆಸ್‌ನ 9 ಸದಸ್ಯರು ಇದ್ದು, ಶಾಸಕರ ಮತ ಸೇರಿ ಒಟ್ಟು ಹತ್ತು ಆಗಲಿದೆ. ಕೇವಲ 2 ಸದಸ್ಯರ ಬೆಂಬಲ ಸಿಕ್ಕಿದರೆ ಕಾಂಗ್ರೆಸ್ ಕೂಡ ಅಧಿಕಾರ ಹಿಡಿಯಬಹುದು.

ಈ ಮಧ್ಯೆ 30 ತಿಂಗಳ ಅವಧಿಗೆ ಬಿಜೆಪಿ ಸದಸ್ಯರು ಅಧ್ಯಕ್ಷರಾಗಿರುವುದ್ದರಿಂದ ಈ ಬಾರಿ ಅಧ್ಯಕ್ಷ ಸ್ಥಾನ ಜೆಡಿಎಸ್‌ಗೆ ಬಿಟ್ಟು ಕೊಡಿ ಎಂಬ ಒತ್ತಡ ಹೆಚ್ಚಾಗುತ್ತಿದೆ. ಒಂದು ವೇಳೆ ಈ ಒತ್ತಡದ ಸಂದರ್ಭ ಬಳಸಿಕೊಂಡು ಕಾಂಗ್ರೆಸ್ ಜೆಡಿಎಸ್ ಸದಸ್ಯರನ್ನು ತನ್ನತ್ತ ಸೆಳೆದರೂ ಅಚ್ಚರಿಯಿಲ್ಲ. ಒಟ್ಟಿನಲ್ಲಿ ಬೀರೂರು ಪುರಸಭೆ ಒಳಗೆ ಮೂರು ಪಕ್ಷಗಳ ನಡುವೆ ಬಿರುಸಿನ ರಾಜಕೀಯ ಚಟುವಟಕೆಯಂತೂ ಶುರುವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿಯಲ್ಲಿ ಸ್ನೇಹಿತನಿಂದಲೇ ಯುವ ಕಾಂಗ್ರೆಸ್‌ ನಾಯಕ ಹತ್ಯೆ?
ಫಿಸಿಯೋಥೆರಪಿಗೆ ವಿಶ್ವಾದ್ಯಂತ ವಿಫುಲ ಅವಕಾಶ : ಯುಟಿ ಖಾದರ್‌