ಹೋರಾಟ ಮಾಡುವವನು ಗೆದ್ದೇ ಗೆಲ್ತಾನೆ : ಡಿ.ಕೆ.ಶಿವಕುಮಾರ್‌

KannadaprabhaNewsNetwork |  
Published : Feb 24, 2026, 03:15 AM IST
DK Shivakumar

ಸಾರಾಂಶ

ಹೋರಾಟ ಮಾಡುವವನು ಗೆದ್ದೇ ಗೆಲ್ತಾನೆ. ಯಾವುದೇ ಕಾರಣಕ್ಕೂ ಅವನಿಗೆ ಸೋಲಿನ ಭಯ ಇರಲಿಕ್ಕೆ ಸಾಧ್ಯವೇ ಇಲ್ಲ.ಬಿದ್ದು ಹೋದ ಮೇಲೆ ಹೂವು ಮತ್ತೆ ಅರಳಲು ಸಾಧ್ಯವಿಲ್ಲ. ಹೊಸ ಚಿಗುರು ಹುಟ್ಟಿ ಬರಬೇಕು ಅಷ್ಟೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

 ಚಿಕ್ಕಬಳ್ಳಾಪುರ :  ಹೋರಾಟ ಮಾಡುವವನು ಗೆದ್ದೇ ಗೆಲ್ತಾನೆ. ಯಾವುದೇ ಕಾರಣಕ್ಕೂ ಅವನಿಗೆ ಸೋಲಿನ ಭಯ ಇರಲಿಕ್ಕೆ ಸಾಧ್ಯವೇ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಚಿಕ್ಕಬಳ್ಳಾಪುರ ಸಮೀಪದ ರಾಷ್ಟ್ರೀಯ ಹೆದ್ದಾರಿ 44ರ ಅಗಲಗುರ್ಕಿಯಲ್ಲಿ ಸೋಮವಾರ ನಡೆದ ಅಖಿಲ ಭಾರತ ಮಟ್ಟದ ನರೇಗಾ ಬಚಾಚೋ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ‘ಹೋರಾಟ ಮಾಡುವವನು ಗೆದ್ದೇ ಗೆಲ್ತಾನೆ. ಹೋರಾಟ ಮಾಡುವವನಿಗೆ ಸೋಲಿನ ಭಯ ಇರುವುದಕ್ಕೆ ಸಾಧ್ಯವೇ ಇಲ್ಲ’. ಈ ಮಾತನ್ನು ಬಿ.ಆರ್‌. ಅಂಬೇಡ್ಕರ್ ಅವರು ಹೇಳಿದ್ದಾರೆ. ಬಿದ್ದು ಹೋದ ಮೇಲೆ ಹೂವು ಮತ್ತೆ ಅರಳಲು ಸಾಧ್ಯವಿಲ್ಲ. ಹೊಸ ಚಿಗುರು ಹುಟ್ಟಿ ಬರಬೇಕು ಅಷ್ಟೆ. ಹಾಗೆಯೇ, ದೀಪ ಆರಿ ಹೋಗುವಾಗ ಜೋರಾಗಿ ಉರಿಯುತ್ತೆ. ಅದೇ ರೀತಿ, ಬಿಜೆಪಿ ಕೂಡ ಮನರೇಗಾದಿಂದ ಗಾಂಧಿ ಹೆಸರನ್ನು ಕಿತ್ತು ಹಾಕಿ, ವಿಬಿ ಜಿ ರಾಮ್ ಜಿ ಎಂದು ಮರು ನಾಮಕರಣ ಮಾಡಿದೆ. ಆದರೆ, ಗಾಂಧಿ ಹೆಸರನ್ನು ಅಳಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ವಿಶ್ವವಿಖ್ಯಾತ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯನವರು ಹುಟ್ಟಿದ ಜಿಲ್ಲೆಯಲ್ಲಿ ಈಗ ಹೋರಾಟ ಆರಂಭವಾಗಿದೆ. ಇದಕ್ಕೆ ಸೋಲಾಗುವುದಿಲ್ಲ. ಬಿಜೆಪಿಗೆ ಅಂತಿಮ ದಿನಗಳು ಬಂದು, ಮುಂದೆ ಕಾಂಗ್ರೆಸ್‌ ಮನರೇಗಾ ಯೋಜನೆಯನ್ನು ಮರುಸ್ಥಾಪಿಸಲಿದೆ ಎಂದರು.

ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ. 20 ವರ್ಷಗಳ ಕಾಲ ದುಡಿಯುವ ಕೈಗಳಿಗೆ ಉದ್ಯೋಗ, ಹಸಿದ ಹೊಟ್ಟೆಗೆ ಅನ್ನ ನೀಡಿದ್ದು ಮನರೇಗಾ. 5,900 ಗ್ರಾಮ ಪಂಚಾಯಿತಿಗಳ ಸಬಲತೆಗೆ ಕಾರಣವಾಗಿ, ಉದ್ಯೋಗ ಸೃಷ್ಟಿಯ ಶಕ್ತಿಯಾಗಿ ನರೇಗಾ ಕೆಲಸ ಮಾಡುತ್ತಿತ್ತು. ಹೀಗಾಗಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನರೇಗಾ ಉಳಿಸಿ, ದೇಶ ಉಳಿಸಿ, ಕಾರ್ಮಿಕರಿರುವ ಹಳ್ಳಿಗಳನ್ನು ಉಳಿಸಿ, ಆ ಮೂಲಕ ಮಹಾತ್ಮ ಗಾಂಧೀಜಿ ಹೆಸರು ಉಳಿಸಿ ಎಂದು ಹೋರಾಟ ಪ್ರಾರಂಭಿಸಿದೆ. ಮಹಾತ್ಮಾ ಗಾಂಧೀಜಿ ಹೆಸರನ್ನು ಚಿರಸ್ಥಾಯಿಯಾಗಿಸಲು ರಾಜ್ಯದ ಪ್ರತಿ ಗ್ರಾ.ಪಂ. ಹೆಸರಿನ ಮೊದಲು ಮಹಾತ್ಮ ಗಾಂಧೀಜಿ ಹೆಸರನ್ನು ಸೇರಿಸಲು ಸೂಚನೆ ನೀಡಲಾಗಿದೆ. ಇದಕ್ಕೆ ರಾಜ್ಯದ ಜನತೆ ಕೈಜೋಡಿಸಬೇಕಿದೆ. ಬಿಜೆಪಿ ಈ ದೇಶದಿಂದ ನಿರ್ಮೂಲನೆ ಆಗುವ ಸಂದರ್ಭದಲ್ಲಿ ವಿಬಿ ಜಿ ರಾಮ್ ಜಿ ಬಂದಿದೆ ಎಂದು ಹೇಳಿದರು.

ಕೇಂದ್ರದಿಂದ ನಿರಂತರ ಅನ್ಯಾಯ:

ಕೇಂದ್ರ ಸರಕಾರದಿಂದ ಕನ್ನಡಿಗರ ಮೇಲೆ ನಿರಂತರವಾಗಿ ಅನ್ಯಾಯ ನಡೆಯುತ್ತಿದೆ. ಕರ್ನಾಟಕ ಸರ್ಕಾರ ಇದನ್ನು ಎಂದಿಗೂ ಸಹಿಸುವುದಿಲ್ಲ. ವಿಬಿ ಜಿ ರಾಮ್‌ಜಿ ಪ್ರಕಾರ ಕೇಂದ್ರದ ಅನುದಾನ ಶೇ.60 ಮತ್ತು ರಾಜ್ಯದ ಅನುದಾನ ಶೇ.40ರಷ್ಟಿದೆ. ಈ 60% ಕೊಡಲು ಬಿಜೆಪಿ ಇರುವ ರಾಜ್ಯಗಳಲ್ಲಿಯೇ ಜಾರಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಕೂಡ ಇದನ್ನು ಒಪ್ಪಿಲ್ಲ ಎಂದು ಪ್ರತಿಪಾದಿಸಿದರು.

ಹೊಟ್ಟೆಪಾಡಿಗಾಗಿ ಮಾತ್ರವಲ್ಲ, ಇದ್ದ ಊರಿನಲ್ಲಿಯೇ ಬದುಕು ಕಟ್ಟಿಕೊಳ್ಳಲು ಉದ್ಯೋಗ ಬೇಕು. ಮನರೇಗಾ ಇದಕ್ಕೆಲ್ಲಾ ಆಶ್ರಯವಾಗಿತ್ತು. ಇದನ್ನು ಉಳಿಸಲು ಈಗ ನಮ್ಮ ಹೋರಾಟಕ್ಕೆ ಬನ್ನಿ ಎಂದರು.

ದೇಶಕ್ಕೆ ಸ್ವಾತಂತ್ರ‍್ಯ ತಂದು ಕೊಟ್ಟು 78 ವರ್ಷ ಆಗಿದೆ. ಈಗ ರೈತರ ಉದ್ಯೋಗ ಕಸಿಯಲು ಅವಕಾಶ ನೀಡುವುದಿಲ್ಲ. ಮನರೇಗಾ 5 ಕೋಟಿಯಷ್ಟು ಉದ್ಯೋಗ ಸೃಜಿಸಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಎಂದು ಕೇಂದ್ರ ಸರಕಾರವೇ ಸರ್ಟಿಫಿಕೇಟ್ ಕೊಟ್ಟಿದ್ದಾರೆ. ಇಂತಹ ಯಶಸ್ವಿ ಯೋಜನೆಯನ್ನು ಬದಲಿಸಿದ್ದು ಯಾಕೆ? ಎಂದು ಅವರು ಪ್ರಶ್ನಿಸಿದರು. 

ಜಿ ರಾಮ್‌ ಜಿ ಈಗ ನಿಷ್ಕ್ರಿಯ, ಅನುದಾನವೂ ಬರ್‍ತಿಲ್ಲ:

‘ವಿಬಿ ಜಿ ರಾಮ್‌ ಜಿ’ ವಿಚಾರವಾಗಿ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟನೆ ನೀಡಿಲ್ಲ ಹಾಗೂ ಯಾವುದೇ ನಿರ್ದೇಶನವನ್ನೂ ಕೊಟ್ಟಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ವಿಬಿ ಜಿ ರಾಮ್‌ ಜಿ ಯೋಜನೆ ಕುರಿತಂತೆ ರಾಜ್ಯ ಸರ್ಕಾರದ ವಿರೋಧದ ನಂತರವೂ ಕೇಂದ್ರ ಸರ್ಕಾರ ಯಾವುದೇ ಸ್ಪಷ್ಟನೆ ಮತ್ತು ನಿರ್ದೇಶನ ನೀಡಿಲ್ಲ. ಇನ್ನು, ಈ ಹಿಂದೆ ಮನರೇಗಾ ಅಡಿ ಕೂಲಿ ಮಾಡಿದವರಿಗೆ ಹಣ ನೀಡಲು ಅನುದಾನ ಬಿಡುಗಡೆ ಮಾಡಿಲ್ಲ. ಮನರೇಗಾ ನಂತರದ ವಿಬಿ ಜಿ ರಾಮ್‌ ಜಿ ಕಾಯ್ದೆಯನ್ನು ಸಂಪೂರ್ಣ ನಿಷ್ಕ್ರಿಯಗೊಳಿಸಲಾಗಿದೆ. ಕೂಲಿ ಕಾರ್ಮಿಕರು, ಬಡವರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಇದರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದರು.ಸಚಿವ ಮಹದೇವಪ್ಪ ಅವರು ದಲಿತ ಮುಖ್ಯಮಂತ್ರಿ ವಿಚಾರ ಮಂಡಿಸಿರುವ ಕುರಿತಂತೆ ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್‌, ಅವರು ನಮ್ಮ ರಾಷ್ಟ್ರೀಯ ನಾಯಕರು. ಅವರಿಗೆ ಇಲ್ಲಿಂದಲೇ ನಮಸ್ಕಾರ ಮಾಡುತ್ತೇನೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕಸದ ಸಮಸ್ಯೆ ನಾಚಿಕೆಗೇಡು : ಉದ್ಯಮಿ ಕಿರಣ್ ಶಾ ತರಾಟೆ
ಜಿಬಿಎ ಪಾಲಿಕೆ ಚುನಾವಣೆಗೆ ತಯಾರಾಗಿ : ಸಲೀಂ