ಕನ್ನಡಪ್ರಭ ವಾರ್ತೆ ಮೈಸೂರು
ಘಟನೆಯಲ್ಲಿ ನನ್ನ ತಪ್ಪೇನಿದೆ? ಬಿಜೆಪಿ ಹೋರಾಟ ರಾಜಕೀಯ ಪ್ರೇರಿತ ಮತ್ತು ಸುಳ್ಳು ಆರೋಪದಿಂದ ಕೂಡಿದೆ. ನಾನು ಪೊಲೀಸರಿಗೆ ಧಮ್ಕಿ ಹಾಕಿದ್ದೇನೆಂದು ಎಚ್.ಡಿ. ಕುಮಾರಸ್ವಾಮಿ ಸುಳ್ಳು ಹೇಳಿದ್ದಾರೆ. ಅವರಿಗೆ ಇದ್ದಕ್ಕಿದ್ದಂತೆ ಪೊಲೀಸರ ಮೇಲೆ ಪ್ರೀತಿ ಬಂದಿದೆ. ಬಿಜೆಪಿ - ಜೆಡಿಎಸ್ ನ್ಯಾಯಾಂಗ ತನಿಖೆಗೆ ಕೇಳಿದ್ದರು. ಅದರಂತೆ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದೇವೆ ಎಂದು ವಿವರಿಸಿದರು.
ಷರತ್ತು ಹಾಕಿ ಸರ್ಕಾರ ಕಾರ್ಯಕ್ರಮ ಮಾಡಬಹುದು ಎಂದು ಪೊಲೀಸರು ಹೇಳಿದ್ದಾರೆ. ಷರತ್ತು ಪೊರೈಸಿ ಕಾರ್ಯಕ್ರಮ ಮಾಡಿದ್ದಾರೆ. ಇದರಲ್ಲಿ ತಪ್ಪು ಏನಿದೆ ಹೇಳಿ? ವಿಧಾನಸೌಧದಲ್ಲಿ ಘಟನೆ ನಡೆದಿಲ್ಲ. ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡಿದ್ದು ನಾವಲ್ಲ. ಈ ಪ್ರಕರಣದಲ್ಲಿ ಡಿಪಿಎಆರ್ ಕಾರ್ಯದರ್ಶಿ ಸತ್ಯವತಿ ಏನು ತಪ್ಪು ಮಾಡಿದ್ದಾರೆ? ಅವರ ಮೇಲೆ ಯಾಕೆ ಕ್ರಮ ಕೈಗೊಳ್ಳಬೇಕು? ವಿಧಾನಸೌಧದಲ್ಲಿ ಘಟನೆಯೆ ನಡೆದಿಲ್ಲವಲ್ಲ ಎಂದು ಅವರು ಹೇಳಿದರು.ನನಗೆ ಬಂದೋಬಸ್ತ್ ಬಗ್ಗೆ ತಿಳಿಸಬೇಕಿದ್ದು ಪೊಲೀಸ್ ಆಯುಕ್ತರು. ಸರ್ಕಾರದ ಮುಖ್ಯಸ್ಥ ನಾನು. ನನಗೆ ಭದ್ರತೆ ಬಗ್ಗೆ ಪೊಲೀಸ್ ಆಯುಕ್ತರು ಮಾಹಿತಿಯನ್ನೇ ನೀಡಲಿಲ್ಲ. ಡಿಪಿಎಆರ್ ಕಾರ್ಯದರ್ಶಿ ನನಗೆ ಹೇಳಿದರು. ಪೊಲೀಸರು ಕಾರ್ಯಕ್ರಮಕ್ಕೆ ಒಪ್ಪಿ ಕೊಂಡಿದ್ದಾರೆ. ಮಾಡೋಣ ಎಂದರು. ನಾನು ಅದಕ್ಕೆ ಸಮ್ಮತಿಸಿದೆ ಎಂದು ತಿಳಿಸಿದರು.
ಕ್ರಿಕೆಟ್ ಸ್ಟೇಡಿಯಂಗೂ ನನಗೂ ಸಂಬಂಧವಿಲ್ಲ. ವಿಧಾನಸೌಧದಲ್ಲಿ ಯಾವ ಘಟನೆ ನಡೆದಿಲ್ಲ. ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂ ಬೇರೆ ಕಡೆ ವರ್ಗಾಯಿಸುವ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಅಧಿಕಾರಿಗಳ ತಪ್ಪಿನಿಂದ ಈ ಘಟನೆ ನಡೆದಿದೆ. ವೈಯಕ್ತಿಕವಾಗಿ ನನಗೆ ಮತ್ತು ಇಡೀ ಸರ್ಕಾರಕ್ಕೆ ನೋವಾಗಿದೆ. ಪೊಲೀಸ್ ಆಯುಕ್ತರು ಮಾತ್ರವಲ್ಲ ಐದು ಜನರು ಸಸ್ಪೆಂಡ್ ಆಗಿದ್ದಾರೆ. ಸಿಎಂ ಕಾರ್ಯದರ್ಶಿ ಗೋವಿಂದರಾಜ್ ನನ್ನೂ ತೆಗೆದು ಹಾಕಿದ್ದೇವೆ ಎಂದು ಅವರು ಸಮರ್ಥಿಸಿಕೊಂಡರು.
ಹೈಕಮಾಂಡ್ ಈ ಬಗ್ಗೆ ಯಾವ ವರದಿ ಕೇಳಿಲ್ಲ. ಒಂದು ವೇಳೆ ನಾವು ವಿಧಾನಸೌಧದ ಮುಂದೆ ಕಾರ್ಯಕ್ರಮ ಮಾಡದೆ ಹೋಗಿದ್ದರೆ ಬಿಜೆಪಿ ಇದಕ್ಕೆ ಬೇರೆ ಬಣ್ಣ ಕಟ್ಟುತ್ತಿತ್ತು ಎಂದು ಸಿಎಂ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.