ಬಳ್ಳಾರಿ: ಹುಬ್ಬಳ್ಳಿಯ ನೇಹಾ ಹಿರೇಮಠ ಕೊಲೆ ಪ್ರಕರಣದ ಬಗ್ಗೆ ದೊಡ್ಡ ದನಿಯಲ್ಲಿ ಮಾತನಾಡುವ ಬಿಜೆಪಿಯವರು, ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಎರಡು ಸಾವಿರ ಹೆಣ್ಣು ಮಕ್ಕಳಿಗೆ ಮಾಡಿದ ಲೈಂಗಿಕ ದೌರ್ಜನ್ಯದ ಬಗ್ಗೆ ಏಕೆ ಮಾತನಾಡುತ್ತಿಲ್ಲ? ಎಂದು ನಟ ಪ್ರಕಾಶ್ ರಾಜ್ ಕಟುವಾಗಿ ಪ್ರಶ್ನಿಸಿದರು.
ಹೆಣ್ಣು ಮಕ್ಕಳ ದೌರ್ಜನ್ಯ ಪ್ರಕರಣಗಳನ್ನು ರಾಜಕೀಯವಾಗಿ ಬಳಸಿಕೊಳ್ಳುವುದನ್ನು ಯಾರೂ ಸಹಿಸಲಾಗದು. ಬಿಜೆಪಿ- ಕಾಂಗ್ರೆಸ್ ಎರಡೂ ಪಕ್ಷಗಳು ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ ಎಂದು ಟೀಕಿಸಿದರು.
ಭ್ರಷ್ಟರು ಶುದ್ಧ ಆಗುತ್ತಿದ್ದಾರೆ:ಅಧಿಕಾರಕ್ಕೆ ಬಂದ ಕೂಡಲೇ ಭ್ರಷ್ಟಾಚಾರಿಗಳನ್ನು ಜೈಲಿಗೆ ಕಳಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ಚುನಾವಣೆಯಲ್ಲಿ ಹೇಳಿದ್ದರು. ಆದರೆ, ಯಾವ ಭ್ರಷ್ಟಾಚಾರಿಗಳನ್ನೂ ಜೈಲಿಗೆ ಕಳಿಸಲಿಲ್ಲ. ಬದಲಿಗೆ ಅವರನ್ನೇ ಪಕ್ಷಕ್ಕೆ ಕರೆದುಕೊಂಡು ವಾಷಿಂಗ್ ಪೌಡರ್ ಹಾಕಿ ಶುಭ್ರಗೊಳಿಸುತ್ತಿದ್ದಾರೆ ಎಂದು ಪ್ರಕಾಶ್ ರಾಜ್‌ವ್ಯಂಗ್ಯವಾಡಿದರು.
ದೇಶವನ್ನು ಕಾಯಕ ಕಲ್ಯಾಣ ಮಾಡಬೇಕಾದವರು ಕಾವಿ ಕಲ್ಯಾಣ ಮಾಡಲು ಹೊರಟಿದ್ದಾರೆ. ಶ್ರೀರಾಮ ಮಂದಿರ ಉದ್ಘಾಟನೆಗೆ ಗೈರಾದವರನ್ನು ದೇಶದ್ರೋಹಿಗಳು ಎಂದು ಜರಿಯುತ್ತಾರೆ. ನಾನಾ ಕಾರಣಗಳಿಂದ ವಿವಿಧ ಮಠಾಧೀಶರು ಸೇರಿದಂತೆ ಅನೇಕರು ಗೈರಾದರು. ಹಾಗಂತ ಅವರೆಲ್ಲರೂ ದೇಶದ್ರೋಹಿಗಳಾ? ಎಂದು ಪ್ರಶ್ನೆಗಳ ಸುರಿಮಳೆಗೈದರು.ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಮಂತ್ರಿ ನಿರುದ್ಯೋಗದ ಬಗ್ಗೆ ಮಾತನಾಡಲಿಲ್ಲ. ರೈತರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಧ್ವನಿ ಎತ್ತಲಿಲ್ಲ. ಬದಲಿಗೆ ಚಳವಳಿ ಹಮ್ಮಿಕೊಳ್ಳುವ ರೈತರನ್ನು ಆತಂಕವಾದಿಗಳು ಎಂದು ಜರಿದರು. ಪ್ರತಿಭಟನೆ ಹತ್ತಿಕ್ಕಲು ಹೆದ್ದಾರಿ ಅಗೆದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಸಂಸದರು, ತಾವು ಮಾಡಿದ ಕೆಲಸಗಳೇನು ಎಂದು ಎಲ್ಲೂ ಹೇಳುತ್ತಿಲ್ಲ. ಬರೀ ಮೋದಿ ಹೆಸರಿನಲ್ಲಿಯೇ ಮತ ಕೇಳುತ್ತಿದ್ದಾರೆ. ಹಾಗಾದರೆ, ಇವರನ್ನು ಆಯ್ಕೆ ಮಾಡಿ ಕಳಿಸಿದ್ದು ಜನರ ಕೆಲಸ ಮಾಡಲೆಂದೋ ಅಥವಾ ಮೋದಿ ಜಪ ಮಾಡಲೆಂದೋ ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು.
ಚುನಾವಣೆ ಸಂದರ್ಭದಲ್ಲಿ ಜನರು ಪ್ರಶ್ನೆ ಮಾಡಬೇಕು. ಕಣ್ಣೆದುರೇ ಅನ್ಯಾಯ ನಡೆಯುತ್ತಿದ್ದರೂ ಮೌನವಾಗಿರುವ ನಮ್ಮ ನಡೆಯನ್ನು ಮುಂದಿನ ಪೀಳಿಗೆ ಖಂಡಿತ ಕ್ಷಮಿಸುವುದಿಲ್ಲ. ಚುನಾವಣೆಯಲ್ಲಿ ನಾನು ಇಂಥದ್ದೇ ಪಕ್ಷಕ್ಕೆ ಮತ ನೀಡಿ ಎಂದು ಹೇಳುವುದಿಲ್ಲ. ಆದರೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಯನ್ನು ಆಯ್ಕೆ ಮಾಡಿ. ಪಕ್ಷೇತರನಾದರೂ ಸರಿಯೇ ಜನಪರ ಕಾಳಜಿಯುಳ್ಳವನಾಗಿದ್ದರೆ ಚುನಾಯಿಸಿ ಕಳಿಸಿ ಎಂದರು.ಚಾಗನೂರು-ಸಿರಿವಾರ ರೈತ ಹೋರಾಟಗಾರ ಮಲ್ಲಿಕಾರ್ಜುನಗೌಡ, ದಲಿತ ಸಂಘಟನೆಯ ಮುಖಂಡ ಎ.ಮಾನಯ್ಯ, ಕರ್ನಾಟಕ ಪ್ರಾಂತ ರೈತ ಸಂಘದ ವಿ.ಎಸ್. ಶಿವಶಂಕರ್, ಲೇಖಕರಾದ ಪಿ.ಆರ್. ವೆಂಕಟೇಶ್, ಕವಿ ಅಬ್ದುಲ್ ತೋರಣಗಲ್ ಇದ್ದರು.