- ಜಯದೇವ ವೃತ್ತದಲ್ಲಿ ಕಾರ್ಗಿಲ್ ವಿಜಯ್ ದಿವಸ್: ಹುತಾತ್ಮರಿಗೆ ನಮನ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾರ್ಗಿಲ್ ಯುದ್ಧದಲ್ಲಿ ಶತ್ರುರಾಷ್ಟ್ರ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತೀಯ ಸೇನೆ, ಯೋಧರ ತ್ಯಾಗ- ಬಲಿದಾನ, ಕೆಚ್ಚೆದೆಯ ಹೋರಾಟ, ಅಪ್ರತಿಮ ದೇಶಪ್ರೇಮ ಎಂದೂ ಮರೆಯಲಾಗದು. ವೀರಾವೇಶದ ಮೂಲಕ ಗಳಿಸಿದ ಕಾರ್ಗಿಲ್ ವಿಜಯೋತ್ಸವ ಸಂಭ್ರಮವನ್ನು ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಶನಿವಾರ ಆಚರಿಸಲಾಯಿತು.ನಗರದ ಶ್ರೀ ಜಯದೇವ ವೃತ್ತದಲ್ಲಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ್ ದಿವಸ್ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಮರ್ಪಿಸಲಾಯಿತು. ಭಾರತೀಯ ಸೇನೆಯ ಸಮಸ್ತರ ಶೌರ್ಯ, ಪರಾಕ್ರಮ ಸ್ಮರಿಸಲಾಯಿತು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ ನಾಗಪ್ಪ ಮಾತನಾಡಿ, ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಕಾರ್ಗಿಲ್ ವಿಜಯೋತ್ಸವವನ್ನು ಆಚರಿಸಲಿಲ್ಲ. ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಯೋಧರು ತಮ್ಮ ರಕ್ತವನ್ನು ಹರಿಸಿ, ಭಾರತ, ದೇಶವಾಸಿಗಳನ್ನು ರಕ್ಷಣೆ ಮಾಡಿದ್ದಾರೆ. ಇಂಥ ವಿಜಯೋತ್ಸವ ಕಾಂಗ್ರೆಸ್ ಸರ್ಕಾರ ಏಕೆ ಆಚರಿಸಲಿಲ್ಲ. ಕಾಂಗ್ರೆಸ್ಸಿಗರನ್ನು ಇಂದು ದೇಶವಾಸಿಗಳು ಹೀಗೆ ಪ್ರಶ್ನಿಸಬೇಕಿದೆ ಎಂದರು.ಕಾರ್ಗಿಲ್ ಯುದ್ಧ ವೇಳೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಿದ್ದರೆ ಜಮ್ಮು-ಕಾಶ್ಮೀರ ಇವತ್ತು ಪಾಕಿಸ್ತಾನದ ಭಾಗವಾಗಿ ಹೋಗುತ್ತಿತ್ತು. ದೆಹಲಿ ಮತ್ತು ಪಂಜಾಬ್‌ನಲ್ಲಿ ಜಮ್ಮು-ಕಾಶ್ಮೀರದ ಪರಿಸ್ಥಿತಿಯೇ ನಿರ್ಮಾಣವಾಗಿರುತ್ತಿತ್ತು. ಭಾರತೀಯರು ದೇಶಕ್ಕೆ ಕೆಲವು ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು. ರಾಷ್ಟ್ರ ಚಿಂತನೆ ಇದ್ದರೆ ಮಾತ್ರ ದೇಶ ಉಳಿಯಲು ಸಾಧ್ಯ ಎಂಬ ಸತ್ಯ ಎಲ್ಲರೂ ಅರಿಯಬೇಕು ಎಂದರು.
ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಜಿಲ್ಲಾ ವಕ್ತಾರ ಬಿ.ಎಂ.ಸತೀಶ ಕೊಳೇನಹಳ್ಳಿ, ಎಚ್.ಪಿ. ವಿಶ್ವಾಸ, ಉತ್ತರ ಅಧ್ಯಕ್ಷ ತಾರೇಶ್ ನಾಯ್ಕ, ಡಿ.ಎಸ್.ಶಿವಶಂಕರ, ಪಾಲಿಕೆ ಮಾಜಿ ಸದಸ್ಯರಾದ ಕೆ.ಪ್ರಸನ್ನಕುಮಾರ, ಆರ್.ಶಿವಾನಂದ, ಮಂಜಾನಾಯ್ಕ, ಬಸವರಾಜಯ್ಯ, ರವಿ ನಾಯ್ಕ, ಉಮೇಶ ಪಾಟೀಲ್ ಸೇರಿದಂತೆ ಕಾರ್ಯಕರ್ತರು ಇದ್ದರು.ಅನಂತರ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಬಳಿಕ ಎಸ್.ನಿಜಲಿಂಗಪ್ಪ ಬಡಾವಣೆಯ ಅಮರ್ ಜವಾನ್ ಉದ್ಯಾನವನಕ್ಕೆ ತೆರಳಿ ಯೋಧರಿಗೆ ಗೌರವ ಅರ್ಪಿಸಲಾಯಿತು.
- - -(ಟಾಪ್ ಕೋಟ್) ಕಾರ್ಗಿಲ್ ಯುದ್ಧದಲ್ಲಿ 536 ಯೋಧರು ಬಲಿದಾನ ಮಾಡಿದರು. ಸಾವಿರಾರು ಯೋಧರು ಗಾಯಾಳುಗಳಾದರು. ವೀರಯೋಧರ ತ್ಯಾಗ, ಬಲಿದಾನದಿಂದ ಭಾರತ ಒಂದಿಂಚೂ ಭೂಮಿಯನ್ನೂ ಕಳೆದುಕೊಳ್ಳಲಿಲ್ಲ. ಈ ಸಂದರ್ಭ ನಾವು ಹುತಾತ್ಮ ಸೈನಿಕರು, ಗಾಯಾಳು ಸೈನಿಕರ ಜೊತೆಗೆ ಅಂತಹವರ ಕುಟುಂಬವನ್ನೂ ನೆನಪಿಸಿಕೊಳ್ಳಬೇಕು. ಅದೇ ರೀತಿ 1947ರಲ್ಲಿ ಲಡ್ತೇ ಲಡ್ತೇ ಲಿಯಾ ಪಾಕಿಸ್ತಾನ, ಹಸ್ತೇ ಹಸ್ತೇ ಲೇಂಗೇ ಹಿಂದುಸ್ಥಾನ ಅಂತಾ ಘೋಷಣೆ ಕೂಗಿದ್ದವರು, ಅದೇ ಮನಸ್ಥಿತಿಯವರ ಬಗ್ಗೆ ಪ್ರತಿಯೊಬ್ಬ ಭಾರತೀಯರೂ ಜಾಗೃತರಾಗಿರಬೇಕು. - ರಾಜಶೇಖರ ನಾಗಪ್ಪ, ಜಿಲ್ಲಾಧ್ಯಕ್ಷ, ಬಿಜೆಪಿ
- - --26ಕೆಡಿವಿಜಿ17, 18.ಜೆಪಿಜಿ: ದಾವಣಗೆರೆ ಶ್ರೀ ಜಯದೇವ ವೃತ್ತದಲ್ಲಿ ಶನಿವಾರ ಬಿಜೆಪಿ ಜಿಲ್ಲಾ ಘಟಕದಿಂದ ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಯಿತು.