ಕಾಟಾಚಾರದ ಪುರಸಭೆಯ ಸಭೆಯನ್ನು ಯಾಕೆ ಕರಿತೀರಿ

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ಬಜೆಟ್ ಮಂಡನೆಗೆ ಸಾರ್ವಜನಿಕರ ಸಲಹೆ ಕೇಳಲು ಸಭೆ ಕರೆಯುತ್ತೀರಿ ಆದರೆ ಯಾವ ಸಭೆಯಲ್ಲಿ ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ ನೀಡಿದ್ದೀರಾ ಮನ್ನಣೆ ನೀಡಿದ ಬಗ್ಗೆ ಯಾವ ದಾಖಲೆ ಇಟ್ಟಿದ್ದೀರಾ...

ಹೊಸದುರ್ಗ: ಬಜೆಟ್ ಮಂಡನೆಗೆ ಸಾರ್ವಜನಿಕರ ಸಲಹೆ ಕೇಳಲು ಸಭೆ ಕರೆಯುತ್ತೀರಿ ಆದರೆ ಯಾವ ಸಭೆಯಲ್ಲಿ ಸಾರ್ವಜನಿಕರ ಸಲಹೆಗಳಿಗೆ ಮನ್ನಣೆ ನೀಡಿದ್ದೀರಾ ಮನ್ನಣೆ ನೀಡಿದ ಬಗ್ಗೆ ಯಾವ ದಾಖಲೆ ಇಟ್ಟಿದ್ದೀರಾ ಎಂದು ಪಟ್ಟಣದ ಮುಖಂಡ ಶ್ರೀಧರ್ ಭಟ್ ಹೇಳಿದರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಶನಿವಾರ ಕರೆಯಲಾಗಿದ್ದ 2024-25ನೇ ಸಾಲಿನ ಬಜೆಟ್ ಕುರಿತು ಸಾರ್ವಜನಿಕರ ಸಲಹೆ ಪಡೆಯಲು ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಭೂಪಾಳಂ ಛತ್ರ ವಿದ್ದ ಜಾಗ ಪುರಸಭೆ ಅಸ್ತಿಯಾಗಿದ್ದು, ಈ ಜಾಗದಲ್ಲಿ ಸಾರ್ವಜನಿಕರ ಒಳತಿಗಾಗಿ ಅಭಿವೃದ್ಧಿಪಡಿಸುವಂತೆ ಕಳೆದ 2 ವರ್ಷಗಳಿಂದ ಬಜೆಟ್‌ನಲ್ಲಿ ಹಣ ಮೀಸಲು ಇಡಲಾಗುತ್ತಿದ್ದು, ಇದುವರೆಗೂ ಯಾವುದೇ ಅಭಿವೃದ್ಧಿ ಕಂಡಿಲ್ಲ. ಅನುದಾನ ಇಟ್ಟ ಕೆಲಸವನ್ನೇ ಮಾಡಿಲ್ಲ ಹೀಗಿದ್ದಾಗ ಪುನಹ ಇಂತಹ ಕಾಟಾಚಾರದ ಸಭೆಗಳನ್ನು ಏಕೆ ಕರೆಯುತ್ತಿರಿ ಎಂದು ಪ್ರಶ್ನಿಸಿದ್ದರು.

ವೀರಶೈವ ಸಮಾಜದ ಮುಖಂಡ ಸತೀಶ್ ಮಾತನಾಡಿ, ಇತ್ತೀಚೆಗೆ ಪಟ್ಟಣಗಳಲ್ಲಿ ಕರಡಿ ಸೇರಿದಂತೆ ಕಾಡು ಪ್ರಾಣಿಗಳ ಓಡಾಟ ಹೆಚ್ಚಾಗುತ್ತಿದ್ದು, ಪುರಸಭೆಯವರಾಗಲಿ, ಅರಣ್ಯ ಇಲಾಖೆಯವರಾಗಲಿ ಯಾವುದೇ ಕ್ರಮಕೈಗೊಂಡಿಲ್ಲ. ಇದಕ್ಕೆ ಬೇಕಾದ ಸೂಕ್ತ ಕ್ರಮಕೈಗೊಳ್ಳಲು ಯೋಜನೆ ರೂಪಿಸಿ ಎಂದರು.

ಪುರಸಭಾ ಸದಸ್ಯ ಶಂಕ್ರಪ್ಪ ಮಾತನಾಡಿ, ಪಟ್ಟಣ ಸಾಕಷ್ಟು ಬೆಳೆದಿದೆ, ಜನಸಂಖ್ಯೆಯು ಹೆಚ್ಚಾಗಿದೆ ಹೀಗಾಗಿ ಈಗಿರುವ ಹಿಂದೂ ರುದ್ರಭೂಮಿ ಬಹಳ ಚಿಕ್ಕದಾಗಿದ್ದು, ಸ್ವಚ್ಛತೆ ಇಲ್ಲದಂತಾಗಿದೆ ಹಿಂದೂ ರುದ್ರಭೂಮಿ ಸ್ವಚ್ಛತೆಗೆ ಅಗತ್ಯ ಕ್ರಮಕೈಗೊಳ್ಳಿ ಎಂದು ತಿಳಿಸಿದರು.

ಕೆನರಾ ಬ್ಯಾಂಕ್ ಕೆಳಭಾಗದಲ್ಲಿರುವ ಕಿರು ಮಾರುಕಟ್ಟೆ ಪ್ರಾಂಗಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ ಉದ್ಘಾಟನೆಗೊಂಡು 3 ವರ್ಷಗಳಾದರೂ ಅಲ್ಲಿ ಯಾವುದೇ ವ್ಯಾಪಾರವಹಿವಾಟ ನಡೆಯುತ್ತಿಲ್ಲ ಅಲ್ಲಿಗೆ ವ್ಯಾಪಾರಸ್ಥರು ಬರುವುದಿಲ್ಲ ಎಂಬ ಹೇಳಿಕೆ ಸರಿಯಲ್ಲ ಫುಟ್‌ಪಾತ್‌ ವ್ಯಾಪಾರಿಗಳಿಗೆ ಯಾವುದೇ ಶುಲ್ಕ ವಿಧಿಸದೆ ಉಚಿತವಾಗಿ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಿ ಅಲ್ಲಿ ಕೆಲವು ದಿನಗಳ ಕಾಲ ವ್ಯಾಪಾರವಹಿವಾಟು ನಡೆಯಲಿ ಆನಂತರ ಬೇಕಾದರೆ ವ್ಯಾಪಾರಸ್ಥರಿಗೆ ಶುಲ್ಕ ವಿಧಿಸಿರಿ ಎಂದು ಪುರಸಭಾ ಸದಸ್ಯ ನಾಗರಾಜ್ ಸಲಹೆ ನೀಡಿದರು.

ಪಟ್ಟಣದ ಮುಖ್ಯ ರಸ್ತೆಯಲ್ಲಿನ ಪಾದಚಾರಿ ಮಾರ್ಗಗಳನ್ನು ರಸ್ತೆ ಬದಿಯ ವ್ಯಾಪಾರಸ್ಥರು ಒತ್ತುವರಿ ಮಾಡಿಕೊಂಡಿದ್ದು, ಅವುಗಳನ್ನು ತೆರವುಗೊಳಿಸುವಂತೆ ಪುರಸಭೆ ಸದಸ್ಯ ಶ್ರೀನಿವಾಸ್ ಸಲಹೆ ನೀಡಿದರು.

ಸಭೆಯಲ್ಲಿ ಮುಖ್ಯ ಅಧಿಕಾರಿ ತಿಮ್ಮರಾಜ್ ಸಭೆಯಲ್ಲಿ ಹಾಜರಿದ್ದ ಸಾರ್ವಜನಿಕರು ಹಾಗೂ ಪುರಸಭಾ ಸದಸ್ಯರ ಸಲಹೆಗಳನ್ನು ರೆಕಾರ್ಡ್ ಮಾಡಿಕೊಂಡು ಮುಂದಿನ ಸದಸ್ಯರ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.

ಪೂರ್ವಭಾವಿ ಸಭೆಗೆ ಗೈರಾದ ಆಡಳಿತ ಅಧಿಕಾರಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಕರೆಯಲಾಗಿದ್ದ ಬಜೆಟ್ ಮೇಲಿನ ಪೂರ್ವಭಾವಿ ಸಭೆ ಪುರಸಭೆ ಆಡಳಿತ ಅಧಿಕಾರಿಗಳಾಗಿರುವ ಉಪ ವಿಭಾಗಾಧಿಕಾರಿ ಕಾರ್ತಿಕ್ ಅವರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತಾದರೂ ಅವರೇ ಸಭೆಗೆಗೈರಾಗಿದ್ದು ಸಭೆಯಲ್ಲಿ ಭಾಗವಹಿಸಿದ್ದ ಸಾರ್ವಜನಿಕರಿಗೆ ಹಾಗೂ ಸದಸ್ಯರಿಗೆ ಬೇಸರ ಉಂಟು ಮಾಡಿತು.

Share this article