ಕೊಪ್ಪಳ:
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಿದರೆ ಬಿಜೆಪಿಗೆ ಏಕೆ ಭಯ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.ಆಲಮಟ್ಟಿ ಅಣೆಕಟ್ಟೆಗೆ ಬಾಗಿನ ಅರ್ಪಿಸಲು ತೆರಳುವ ವೇಳೆ ಸಮೀಪದ ಗಿಣಿಗೇರಾ ಹತ್ತಿರದ ಎಂಎಸ್‌ಪಿಎಲ್ ಏರ್‌ಸ್ಟ್ರಿಪ್‌ಗೆ ಆಗಮಿಸಿದ್ದ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ನಾವು ಮಾತ್ರವಲ್ಲ ಬೇರೆ ದೇಶಗಳು ಸಹ ಬ್ಯಾಲೆಟ್ ಪೇಪರ್ ಅಳವಡಿಸಿಕೊಂಡಿವೆ. ಇದರಿಂದ ಆ ದೇಶಗಳು ಶಿಲಾಯುಗಕ್ಕೆ ತೆರಳಿವೆಯಾ? ಎಂದು ಪ್ರಶ್ನಿಸಿದರು.
ಮತಯಂತ್ರಗಳ ಬಗ್ಗೆ ಅನುಮಾನವಿದೆ. ಮತಗಳ್ಳತನವಾಗುತ್ತಿರುವ ಬಗ್ಗೆ ರಾಹುಲ್ ಗಾಂಧಿ ಅವರು ದೇಶಾದ್ಯಂತ ಹೋರಾಟ ಮಾಡುತ್ತಿಲ್ಲವೆ. ಇದಕ್ಕಾಗಿಯೇ ಬ್ಯಾಲೆಟ್ ಪೇಪರ್ ಅಳವಡಿಸುವುದಕ್ಕೆ ಮುಂದಾಗಿದ್ದೇವೆ. ಇದಕ್ಕೆ ಯಾಕೆ ಬಿಜೆಪಿಯವರು ಭಯಬೀಳುತ್ತಿದ್ದಾರೆ ಎಂದರು.ಬ್ಯಾಲೆಟ್ ಪೇಪರ್ ದೋಷವಲ್ಲ:
ನಾನು ಕೊಪ್ಪಳದಲ್ಲಿ ಸ್ಪರ್ಧಿಸಿದಾಗ ನಾನು ಆರೋಪ ಮಾಡಿದ್ದು ಬ್ಯಾಲೆಟ್ ಪೇಪರ್ ದೋಷವಲ್ಲ. ಕೌಂಟಿಂಗ್‌ನಲ್ಲಿ ಆಗಿರುವ ದೋಷ ಕುರಿತು ಆರೋಪಿಸಿದ್ದೇನೆ. ಹಾಗಂತ ಯಾವುದೇ ಸರ್ಕಾರದ ವಿರುದ್ಧವೂ ನಾನು ಆರೋಪಿಸಿರಲಿಲ್ಲ. ಕೌಂಟಿಂಗ್ ಸರಿಯಾಗಿ ಆಗಿಲ್ಲ ಎಂದು ಹೇಳಿದ್ದೇನೆ ಹೊರತು, ಸರ್ಕಾರದ ವಿರುದ್ಧ ಆರೋಪ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.ಧರ್ಮಸ್ಥಳ ಪ್ರಕರಣ: ಕೈಮುಗಿದ ಡಿಕೆಶಿಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಡಿಸಿಎಂ ಡಿ.ಕೆ. ಶಿವಕುಮಾರ ಉತ್ತರಿಸದೆ ಕೈಮುಗಿದು ಮುಂದೆ ಹೋದ ಪ್ರಸಂಗ ಕೊಪ್ಪಳ ಬಳಿಯ ಗಿಣಿಗೇರಾ ಏರೋಡ್ರೋಮ್‌ನಲ್ಲಿ ನಡೆಯಿತು.ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ, ತುಂಗಭದ್ರಾ ಜಲಾಶಯ ಹೂಳು ತುಂಬಿ ವ್ಯಯವಾಗುತ್ತಿರುವ 30 ಟಿಎಂಸಿ ನೀರು ಸದ್ಬಳಕೆಗೆ ಪರ್ಯಾಯ ಯೋಜನೆ ರೂಪಿಸಲು ಆಂಧ್ರದ ಸಿಎಂ ಅವರೊಂದಿಗೆ ಚರ್ಚಿಸಬೇಕಿದೆ. ಅವರು ಸಮಯ ನೀಡುತ್ತಿಲ್ಲ. ಆದರೂ ಪ್ರಯತ್ನ ನಡೆದಿದೆ ಎಂದ ಅವರು, ಕ್ರಸ್ಟ್‌ಗೇಟ್ ಅಳವಡಿಕೆಗೆ ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು. ಈ ವೇಳೆಯಲ್ಲಿ ಧರ್ಮಸ್ಥಳದ ಪ್ರಶ್ನೆ ಕೇಳುತ್ತಿದ್ದಂತೆ ಕೈಮುಗಿಯುತ್ತಾ ಮುಂದೆ ಸಾಗಿದರು.