ಧಾರವಾಡ: ಅಕ್ರಮವಾಗಿ ಎಚ್‌ಆರ್‌ಎ ಪಡೆದು ಸರ್ಕಾರಕ್ಕೆ ವಂಚಿಸಿದ, ಶಿಕ್ಷಕ ವಿರೋಧಿ ಹುಬ್ಬಳ್ಳಿಯ ಶಿಕ್ಷಣಾಧಿಕಾರಿ ಚನ್ನಪ್ಪಗೌಡರ ಅವರನ್ನು ಕೂಡಲೇ ಅಮಾನತ್ತಿನಲ್ಲಿರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ ಗಡದಿನ್ನಿ ಆಗ್ರಹಿಸಿದರು.
ಚನ್ನಪ್ಪಗೌಡರು ಬರೀ ಎಚ್‌ಆರ್‌ಎ ದುರುಪಯೋಗ ಪಡಿಸಿಕೊಂಡಿಲ್ಲ. ಅನುದಾನಿತ ಪ್ರೌಢ ಶಾಲಾ ಹಂತದ ಶಿಕ್ಷಕ-ಶಿಕ್ಷಕೇತರರ ವೇತನ ತಡೆ ಹಿಡಿದು ಕಿರಿಕಿರಿ ಮಾಡಿದ್ದು, ಶಿಕ್ಷಕರ ಸೇವಾ ಜೇಷ್ಠತೆ ಉಲ್ಲಂಘನೆ ಮಾಡಿದ್ದು, ಅನವಶ್ಯಕವಾಗಿ ಶಿಕ್ಷಕರ ಅಮಾನತು, ಅವೈಜ್ಞಾನಿಕ ಶಾಲಾ ತಪಾಸಣಾ ಕ್ರಮ, ಶಿಕ್ಷಕರ ವಿರುದ್ಧ ಇಲಾಖೆಗೆ ಸುಳ್ಳು ಮಾಹಿತಿ ನೀಡಿರುವುದು ಸೇರಿದಂತೆ ಶಿಕ್ಷಕರಲ್ಲಿ ಭಯಭೀತ ವಾತಾವರಣ ಸೃಷ್ಟಿಸಿದ್ದಾರೆ.ಇದರಿಂದ ಅಮಾಯಕ ಶಿಕ್ಷಕರು ತೀವ್ರ ಶೋಷಣೆಗೆ ಒಳಗಾಗಿದ್ದಾರೆ ಎಂದರು.
ಚನ್ನಪ್ಪಗೌಡರ ವಿರುದ್ಧ ಇಷ್ಟೆಲ್ಲ ಆರೋಪಗಳಿದ್ದರೂ ಅವರ ವಿರುದ್ಧ ನಡೆಯುತ್ತಿರುವ ತನಿಖೆಗೆ ಡಿಡಿಪಿಐ ತನಿಖಾಧಿಕಾರಿಗಳು. ಅವರಿಗೆ ನೋಟಿಸ್ ನೀಡಿ ಎರಡು ತಿಂಗಳಾದರೂ ಡಿಡಿಪಿಐ ಇನ್ನೂ ವರದಿ ನೀಡುತ್ತಿಲ್ಲ. ಚನ್ನಪ್ಪಗೌಡರ ನಿವೃತ್ತಿ ಇದೇ ಜೂ.30ಕ್ಕೆ ಆಗಲಿದ್ದು, ಅಷ್ಟರಲ್ಲಿ ವರದಿ ನೀಡಿ ಅವರ ಮೇಲೆ ಶಿಸ್ತು ಕ್ರಮ ಆಗಬೇಕು ಎಂದು ಆಗ್ರಹಿಸಿದ ಗಡದಿನ್ನಿ, ಈ ಕುರಿತು ಸರ್ಕಾರದ ಗಮನ ಸೆಳೆಯಲು ಜೂ.21ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟಕ್ಕೆ ಸಿದ್ಧತೆ ನಡೆಸಿದ್ದೇವೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷ ಆರ್.ರಂಜನ, ಟಿ.ಎಚ್. ತಳವಾರ ಇದ್ದರು.