ಕನ್ನಡಪ್ರಭ ವಾರ್ತೆ ರಾಮನಗರ
ಬಿಡದಿಯಲ್ಲಿ ಗ್ರೇಟರ್ ಬೆಂಗಳೂರು ಸಮಗ್ರ ನಗರ ಯೋಜನೆಗೆ ವಿರೋಧ ಮಾಡುತ್ತಿರುವ ಮಾಜಿ ಪ್ರಧಾನಿ ದೇವೇಗೌಡರು, ಕೇಂದ್ರ ಸಚಿವ ಕುಮಾರಸ್ವಾಮಿ, ಮಾಜಿ ಶಾಸಕ ಮಂಜುನಾಥ್ ಅವರು, ಬಿಜೆಪಿ ಸರ್ಕಾರ 900 ಎಕರೆ ಜಾಗವನ್ನು ಕೆಐಎಡಿಬಿಎಗೆ ನೀಡುವಾಗ ಸಹಕಾರ ಕೊಟ್ಟಿದ್ದೇಕೆ?. ಈಗ ನನ್ನನ್ನು ಪ್ರಶ್ನೆ ಮಾಡುತ್ತಿರುವುದೇಕೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.ಜಿಬಿಐಟಿ ವಿರುದ್ಧ ದೇವೇಗೌಡರು ಹೋರಾಟ ಮಾಡುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಡಿ.ಕೆ.ಶಿವಕುಮಾರ್, ಆರ್.ಅಶೋಕ್ ಅವರಾದರೂ ಬರಲಿ, ದೇವೇಗೌಡರಾದರೂ ಬರಲಿ. ಅವರ ರಾಜಕೀಯ ಹೋರಾಟಕ್ಕೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ. ಹೋರಾಟ ಮಾಡುವುದಾದರೆ ಬಹಳ ಸಂತೋಷ. ಈ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದೇ ಕುಮಾರಸ್ವಾಮಿ. ಈ ಬಿಡದಿ ಟೌನ್‌ಶಿಪ್‌ಗೆ ಡಿಎಲ್‌ಎಫ್ ಜೊತೆ ಒಪ್ಪಂದ ಮಾಡಿಕೊಂಡಿದ್ದೂ ಅವರೇ, ಹಣ ಕಟ್ಟಿಸಿಕೊಂಡಿದ್ದೂ ಅವರೇ. ಅವರ ಆಡಳಿತಾವಧಿಯಲ್ಲಿ ಈ ಭೂಮಿಯನ್ನು ಯಾಕೆ ಡಿನೋಟಿಫಿಕೇಷನ್ ಮಾಡಲಿಲ್ಲ. ಯಡಿಯೂರಪ್ಪ ಅವರು ಕೆಐಎಡಿಬಿಗೆ ಭೂಮಿ ಕೊಟ್ಟಾಗ ಆ ಭಾಗದ ಎಲ್ಲಾ ರೈತರು ಪರಿಹಾರ ಪಡೆದಿದ್ದಾರೆ. ಈಗ ಆ ಜಾಗ ಕೆಐಎಡಿಬಿ ಸ್ವತ್ತಾಗಿದೆ. ಇವರೆಲ್ಲ ಅಂದು ಪ್ರಶ್ನೆ ಮಾಡದೇ ಸಹಕಾರ ಕೊಟ್ಟಿದ್ದೇಕೆ ಎಂದು ಕೇಳಿದರು.
ಬ್ರೋಕರ್‌ಗಳ ಮಾತುಗಳನ್ನು ಕೇಳುವುದಿಲ್ಲ:ಈ ವಿಚಾರವಾಗಿ ಗಲಾಟೆಗಳಾಗುತ್ತಿವೆಯಲ್ಲ ಎಂದು ಕೇಳಿದಾಗ, ಕಾನೂನು ಚೌಕಟ್ಟಿನಲ್ಲಿ ನಾವು ಮುಂದುವರಿಯುತ್ತೇವೆ. ನಾನು ರೈತರಿಗೆ ದೊಡ್ಡ ಆಫರ್ ಕೊಟ್ಟಿದ್ದೇನೆ. ಯಾರು ಈ ಪರಿಹಾರ ಬೇಡ ಎನ್ನುತ್ತಾರೋ ಅವರಿಗೆ ಕಾನೂನು ಪ್ರಕಾರ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆಗೆ ಇರುವ ಮಾರ್ಗಸೂಚಿ ಮೌಲ್ಯ ಆಧಾರದ ಮೇಲೆ ನ್ಯಾಯಾಲಯಕ್ಕೆ ನಾವು ಹಣ ಠೇವಣಿ ಮಾಡುತ್ತೇವೆ. ಅವರ ಕಾಲದಲ್ಲೇ ಸರಿ ಮಾಡಬಹುದಿತ್ತಲ್ಲವೇ? ಅವರು ಯಾರೋ ಬ್ರೋಕರ್ ಹೇಳುತ್ತಾರೆ ಎಂದು ನಾನು ಕೇಳುವುದಿಲ್ಲ ಎಂದರು.