ರಾಜ್ಯದ ಪರ ಧ್ವನಿ ಎತ್ತದ ಜಾಧವ್‌ ಯಾಕೆ ಗೆಲ್ಲಬೇಕು: ಸಿಎಂ

KannadaprabhaNewsNetwork | Published : Apr 25, 2024 1:00 AM

ಸಾರಾಂಶ

ಸಂಸತ್‌ನಲ್ಲಿ ಕಳೆದ 5 ವರ್ಷದಲ್ಲಿ ಒಮ್ಮೆಯೂ ರಾಜ್ಯದ ಹಿತಾಸಕ್ತಿ ಪರವಾಗಿ, ಅದರ ರಕ್ಷಣೆಗಾಗಿ ಧ್ವನಿ ಎತ್ತದ ಡಾ. ಉಮೇಶ ಜಾಧವ್‌ ಯಾಕೆ ಗೆಲ್ಲಬೇಕು ಹೇಳಿ ನೋಡೋಣ?

ಕನ್ನಡಪ್ರಭ ವಾರ್ತೆ ಅಫಜಲ್ಪುರ/ಚವಡಾಪುರ

ಸಂಸತ್‌ನಲ್ಲಿ ಕಳೆದ 5 ವರ್ಷದಲ್ಲಿ ಒಮ್ಮೆಯೂ ರಾಜ್ಯದ ಹಿತಾಸಕ್ತಿ ಪರವಾಗಿ, ಅದರ ರಕ್ಷಣೆಗಾಗಿ ಧ್ವನಿ ಎತ್ತದ ಡಾ. ಉಮೇಶ ಜಾಧವ್‌ ಯಾಕೆ ಗೆಲ್ಲಬೇಕು ಹೇಳಿ ನೋಡೋಣ? ಕಳೆದ ಐವತ್ತು ವರ್ಷದಿಂದ ಖರ್ಗೆ ಈ ಭಾಗದ ಜನರ ಸೇವೆ ಮಾಡಿದ್ದಾರೆ, ರಾಧಾಕೃಷ್ಣ ಅವರಿಗೆ ಆಶೀರ್ವಾದ ಮಾಡಿ ಎಂದು ಸಿಎಂ ಸಿದ್ದರಾಮಯ್ಯ ಜನತೆಗೆ ಮನವಿ ಮಾಡಿದರು.

ಅಫಜಲ್ಪುರ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ಖರ್ಗೆ ಹಾಗೂ ಧರಂ ಸಿಂಗ್ ಇಲ್ಲದೇ ಹೋಗಿದ್ದರೆ ಈ ಭಾಗಕ್ಕೆ ಆರ್ಟಿಕಲ್ 371 (ಜೆ) ಜಾರಿಗೆ ಬರುತ್ತಲೇ ಇರಲಿಲ್ಲ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಅಂದಿಗ ಗೃಹ ಸಚಿವರಾಗಿದ್ದ ಲಾಲ್‌ಕೃಷ್ಣ ಅದ್ವಾನಿ‌ ಈ ಬೇಡಿಕೆಯನ್ನು ತಿರಸ್ಕರಿಸಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಖರ್ಗೆ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರ ಮೇಲೆ ಒತ್ತಡ ತಂದು ಜಾರಿಗೆ ತರಲು ಶ್ರಮಿಸಿದ್ದಾರೆ. ಈ ಭಾಗದ ಜನರು ಇದನ್ನು ಮರೆಯಬಾರದು. ಈ ಸಲ ಸುಮಾರು 5 ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ ಎಂದರು.

ಕಳೆದ ಹತ್ತು ವರ್ಷದಲ್ಲಿ ಮೋದಿ ತಾವು ನೀಡಿದ ಯಾವ ಭರವಸೆ ಈಡೇರಿಸಿಲ್ಲ ಎಂದು ಟೀಕಿಸಿದ ಸಿಎಂ, ಪ್ರತಿವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು ಉದ್ಯೋಗಗಳು ಎಲ್ಲಿ ಹೋದವು? ಹದಿನೈದು ಲಕ್ಷ ಹಣ ನೀಡುವುದಾಗಿ ಹೇಳಿದ್ದರು.‌ಹಣ ಎಲ್ಲಿ‌ಹೋಯಿತು ಎಂದು ಪ್ರಶ್ನಿಸಿದರು.

ರಾಧಾಕೃಷ್ಣ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಸಿಎಂ ಸಂಸತ್ತಿನಲ್ಲಿ ರಾಜ್ಯ ಸರ್ಕಾರದ ಪರ ಧ್ವನಿ ಎತ್ತದ ಜಾಧವ್ ಯಾಕೆ ಗೆಲ್ಲಬೇಕು? ಶಾ, ನಡ್ಡಾ, ನಿರ್ಮಲ ಸೀತಾರಾಮನ್ ಸೇರಿ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. 15ನೇ ಹಣಕಾಸು ಆಯೋಗದ ₹5495 ಕೋಟಿ‌ ಸೇರಿದಂತೆ ರಾಜ್ಯಕ್ಕೆ ಘೋಷಿತ ₹11495 ಕೋಟಿ ಅನುದಾನ ಬಿಡುಗಡೆ ಮಾಡಲಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲವಿದೆ. ಲಕ್ಷಾಂತರ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದೆ. ಬರ ಪರಿಹಾರವಾಗಿ ₹18171 ಕೋಟಿ ಬಿಡುಗಡೆ ಮಾಡಲು ಪರಿಪರಿಯಾಗಿ ಬೇಡಿಕೊಂಡರೂ ಕ್ಯಾರೆ ಅನ್ನಲಿಲ್ಲ‌. ಹಾಗಾಗಿ‌ ಅನಿವಾರ್ಯವಾಗಿ ಸುಪ್ರಿಂ ಕೋರ್ಟ್ ಗೆ ಹೋಗಬೇಕಾಯಿತು. ಆಗ ಅಟಾರ್ನಿ ಜನರಲ್ ಇತ್ಯರ್ಥಪಡಿಸುವುದಾಗಿ ಒಂದು ವಾರ ಸಮಯ ಕೇಳಿದ್ದಾರೆ. ನಾವು ಸುಪ್ರಿಂಗೆ ಹೋಗಿರದೇ ಇದ್ದರೆ, ನಮಗೆ ಈ ಭರವಸೆ ಸಿಗುತ್ತಿರಲಿಲ್ಲ.‌ ನಿರ್ಮಲಾ ಸೀತರಾಮನ್ ಅವರು ರಾಜ್ಯ ಸರ್ಕಾರ ಬರಪರಿಹಾರ ಕೇಳಿಲ್ಲ ಗ್ಯಾರಂಟಿ ಯೋಜನೆಗಳಿಗೆ ಹಣ ಕೇಳುತ್ತಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ‌. ನಿರ್ಮಲಾ ಅವರೇ ನಮಗೆ ಗ್ಯಾರಂಟಿಗಾಗಿ ಹಣ ಬೇಡ ನಮಗಿರುವ ಸಂಪನ್ಮೂಲ ಗಳಿಂದ ಅದನ್ನು ಭರಿಸುತ್ತೇವೆ ಎಂದು ತಿರುಗೇಟು ನೀಡಿದರು.

ಸಂವಿಧಾನ ಅಪಾಯದಲ್ಲಿದೆ. ಪ್ರಜಾ ಪ್ರಭುತ್ವ ಉಳಿಯಬೇಕಾದರೆ‌ ಕಾಂಗ್ರೆಸ್ ಅಧಿಕಾರಕ್ಕೆ ಬರಲೇಬೇಕು. ಅವಕಾಶದಿಂದ ವಂಚಿತರಾದವರಿಗೆ ನ್ಯಾಯ ಕೊಡಿಸಬೇಕಾದರೆ ನೀವೆಲ್ಲ ಕಾಂಗ್ರೆಸ್ ಗೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಕುರುಬ, ಗೊಂಡಕುರುಬ, ಕೋಲಿ ಸಮಾಜವನ್ನು ಎಸ್‌ಟಿ‌ ಸೇರಿಸಲು ಕೇಂದ್ರಕ್ಕೆ ಪ್ರಸ್ತಾವ ಕಳಿಸಲಾಗಿದೆ. ಜಾಧವ್ ಈ ಬಗ್ಗೆ ಧ್ವನಿ ಎತ್ತಿದ್ದಾರ? ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಈ‌ ಸಮುದಾಯಗಳನ್ನು ಎಸ್ ಟಿ‌ ಸೇರಿಸುವುದಾಗಿ ಭರವಸೆ ನೀಡಿದರು.

Share this article