ಯಾವ ಪುರುಷಾರ್ಥಕ್ಕೆ ಬಿಜೆಪಿಗೆ ಮತ ಹಾಕ್ಬೇಕು: ಸಲಿಂ ಅಹಮದ್

KannadaprabhaNewsNetwork | Published : Apr 16, 2024 1:02 AM

ಸಾರಾಂಶ

ಯಾವ ಪುರುಷಾರ್ಥಕ್ಕೆ ಬಿಜೆಪಿಗೆ ಮತ ಹಾಕಬೇಕು ಹೇಳಿ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲಿಂ ಅಹಮದ್ ಪ್ರಶ್ನಿಸಿದರು. ನಗರದ ನೆಹರೂ ಮೈದಾನದಲ್ಲಿ ಸೋಮವಾರ ಲೋಕಸಭಾ ಚುನಾವಣೆ ಪ್ರಯುಕ್ತ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಹಿರಿಯೂರು: ಯಾವ ಪುರುಷಾರ್ಥಕ್ಕೆ ಬಿಜೆಪಿಗೆ ಮತ ಹಾಕಬೇಕು ಹೇಳಿ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಸಲಿಂ ಅಹಮದ್ ಪ್ರಶ್ನಿಸಿದರು. ನಗರದ ನೆಹರೂ ಮೈದಾನದಲ್ಲಿ ಸೋಮವಾರ ಲೋಕಸಭಾ ಚುನಾವಣೆ ಪ್ರಯುಕ್ತ ನಡೆದ ಪಕ್ಷದ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಸಮಾಜದ ಎಲ್ಲಾ ವರ್ಗಗಳ ಹಿತ ಕಾಯುವಂತಹ ಪಕ್ಷ ಕಾಂಗ್ರೆಸ್ ಪಕ್ಷವಾಗಿದ್ದು, ತ್ಯಾಗ ಬಲಿದಾನಗಳ ಭದ್ರ ಬುನಾದಿ ಮೇಲೆ ನಿಂತಿರುವ ಪಕ್ಷ ನಮ್ಮದು. ಪಕ್ಷದ ಹಿರಿಯ ನಾಯಕರ ಸಾವಿರಾರು ಜನೋಪಯೋಗಿ ಕಾರ್ಯಕ್ರಮಗಳು ಈಗಲೂ ಕಣ್ಮುಂದೆ ಇವೆ. ಉಳುವವನೆ ಭೂಮಿಯ ಒಡೆಯ, ಬ್ಯಾಂಕ್‌ಗಳ ರಾಷ್ಟ್ರೀಕರಣದಂತಹ ಮಹತ್ವದ ಕಾರ್ಯಗಳ ಕರ್ತೃ ಇಂದಿರಾ ಗಾಂಧಿ. 18 ವರ್ಷದವರಿಗೆ ಅಧಿಕಾರ ನೀಡುವ ರಾಜೀವ್ ಗಾಂಧಿಯವರ ಆಲೋಚನೆಗೆ ವಿರೋಧ ವ್ಯಕ್ತವಾದರೂ ಸಹ ಯುವಕರೇ ಭವಿಷ್ಯದ ಭಾರತ ಕಟ್ಟುವವರು ಎಂದು 18 ವರ್ಷದವರಿಗೆ ಅಧಿಕಾರ ಕೊಟ್ಟದ್ದು, ಸಂಪರ್ಕ ಸಾಧನಗಳ ಕ್ರಾಂತಿಗೆ ಮೂಲ ಕಾರಣ ರಾಜೀವ್ ಗಾಂಧಿ.

ಇದೀಗ ದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ರಾಹುಲ್ ಗಾಂಧಿಯವರು ಪ್ರಧಾನಿಯಾಗಲಿದ್ದಾರೆ. ಬರೀ ಸುಳ್ಳು ಹೇಳುವ ಬಿಜೆಪಿ ಪಕ್ಷಕ್ಕೆ ಯಾವ ಪುರುಷಾರ್ಥಕ್ಕೆ ಮತ ನೀಡಬೇಕು ಎಂದು ನೀವೇ ಪ್ರಶ್ನಿಸಿಕೊಳ್ಳಿ. ಸುಳ್ಳಿಗೆ ಆಸ್ಕರ್ ಕೊಡೋದಾದರೆ ನರೇಂದ್ರ ಮೋದಿಯವರಿಗೆ ಕೊಡಬೇಕು. ರಾಮರಾಜ್ಯದ ಹೆಸರೇಳಿ ರಾವಣ ರಾಜ್ಯ ಮಾಡಿಟ್ಟಿದ್ದಾರೆ. ಸ್ವರ್ಗ ತೋರಿಸುವ ಆಸೆ ಹುಟ್ಟಿಸಿ ಜನರಿಗೆ ನರಕ ದರ್ಶನ ಮಾಡಿಸಿದ್ದಾರೆ. ಆದ್ದರಿಂದ ಅತೀ ಹೆಚ್ಚಿನ ಮತಗಳ ಅಂತರದಿಂದ ಚಂದ್ರಪ್ಪನವರನ್ನು ಗೆಲ್ಲಿಸುವ ಜವಾಬ್ದಾರಿ ನಿಮ್ಮೆಲ್ಲರ ಮೇಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ, ಬಿಜೆಪಿಯವರದು ಸುಳ್ಳು ಪ್ರಚಾರ ಸುಳ್ಳು ಆಶ್ವಾಸನೆಯಷ್ಟೇ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಆಗ 15 ಲಕ್ಷ ರು. ಅಕೌಂಟ್‌ಗೆ ಹಾಕುವ, 2 ಕೋಟಿ ಉದ್ಯೋಗ ಸೃಷ್ಟಿಸುವ ಆಸೆ ಹುಟ್ಟಿಸಿ ಗೆದ್ದರು. ಈಗ ಆಯೋಧ್ಯೆ ತೋರಿಸಿ ಮತ ಕೇಳುತ್ತಿದ್ದಾರೆ. ಬಿಜೆಪಿ ಅವರು ರಾಮನನ್ನು ಸೀತೆ, ಲಕ್ಷ್ಮಣ, ಆಂಜನೇಯ ಇಲ್ಲದಂತೆ ಒಬ್ಬಂಟಿ ಮಾಡಿದ್ದಾರೆ. ಬ್ಲಾಕ್ ಮೇಲ್ ಮಾಡಿ ಹಿಂಸೆ ಕೊಟ್ಟು ರಾಜಕಾರಣ ಮಾಡುವ ಬಿಜೆಪಿಯನ್ನು ಸೋಲಿಸಿ. ಗೋವಿಂದ ಕಾರಜೋಳರನ್ನು ಅವರ ಜಿಲ್ಲೆಯ ಜನರೇ ತಿರಸ್ಕರಿಸಿದ್ದಾರೆ. ಈಗ ನಮ್ಮ ಜಿಲ್ಲೆಗೆ ಬಂದಿದ್ದಾರೆ. ಇಲ್ಲೂ ಸಹ ಸೋಲಿನ ಅನುಭವ ಅವರಿಗಾಗಲಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಗ್ಯಾರಂಟಿ ಯೋಜನೆಯಿಂದ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದಿದ್ದಾರೆ. ಅವರ ಹೇಳಿಕೆಯನ್ನು ಮಹಿಳೆಯರು ಖಂಡಿಸಬೇಕು ಎಂದರು.

ಅಭ್ಯರ್ಥಿ ಚಂದ್ರಪ್ಪ ಮಾತನಾಡಿ, ಸುಳ್ಳನ್ನೇ ಪದೇ ಪದೇ ಹೇಳಿ ನಿಜ ಎಂದು ಬಿಜೆಪಿಗರು ನಂಬಿಸುತ್ತಾರೆ. ಅವರ ಮೋಸ 10 ವರ್ಷಕ್ಕೆ ಅಂತ್ಯವಾಗಬೇಕು. ಸಂವಿಧಾನ ಉಳಿವಿಗೆ ಹೋರಾಡೋ ಕಾಂಗ್ರೆಸ್ ಒಂದು ಕಡೆ, ಸಂವಿಧಾನ ಮುಗಿಸಲೇಬೇಕು ಎಂಬ ಬಿಜೆಪಿ ಇನ್ನೊಂದು ಕಡೆ ಇವೆ. ಯೋಚಿಸಿ ಮತ ನೀಡಿ. ಬಡವರು ಹೊಟ್ಟೆ ತುಂಬಾ ಊಟ ಮಾಡೋದನ್ನು ಸಹ ಬಿಜೆಪಿ ಸಹಿಸಲ್ಲ. ಮತದ ಮುಖಾಂತರ ಬಿಜೆಪಿಗರಿಗೆ ಉತ್ತರ ಕೊಡಿ. ಜಾತಿವಾದಿ ಸರ್ಕಾರ ಓಡಿಸಿ ಸಂವಿಧಾನ ಉಳಿಸುವ ಕಾಂಗ್ರೆಸ್ ಗೆ ಮತ ನೀಡಿ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಕೆಪಿಸಿಸಿ ವಿಜಯ ಕುಮಾರ್, ರಾಮಪ್ಪ, ವಿಧಾನ ಪರಿಷತ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಖಾದಿ ರಮೇಶ್, ಈರಲಿಂಗೇಗೌಡ, ಬಿ.ಎಚ್.ಮಂಜುನಾಥ್, ಶಶಿಕಲಾ ಸುರೇಶ್ ಬಾಬು, ಎ.ಮಂಜುನಾಥ್, ಟಿ.ಚಂದ್ರಶೇಖರ್, ಗೀತಾ ನಂದಿನಿ ಗೌಡ, ಸಾದತ್ ಉಲ್ಲಾ, ವಕೀಲ ಶಿವಕುಮಾರ್, ಬ್ರಿಜೇಶ್ ಯಾದವ್, ರಂಗಸ್ವಾಮಿ, ಗೀತಾ ನಾಗಕುಮಾರ್, ಜಿ.ಎಲ್.ಮೂರ್ತಿ, ಕಾರೆಹಳ್ಳಿ ಉಲ್ಲಾಸ್, ಬಿ.ಎನ್.ಪ್ರಕಾಶ್, ಶಿವರಂಜಿನಿ, ಸುರೇಖಾ ಮಣಿ, ವಿ.ಶಿವಕುಮಾರ್, ಜ್ಞಾನೇಶ್ ಇದ್ದರು.

Share this article