ರಾಮನಗರ: ರೈತರ ಕಷ್ಟ ರೈತ ಮತ್ತು ರೈತನ ಮಕ್ಕಳಿಗೆ ಮಾತ್ರ ಗೊತ್ತೇ ಹೊರತು ತೋರಿಕೆಗೆ ಮಣ್ಣಿನ ಮಕ್ಕಳು ಎನಿಸಿಕೊಂಡವರಿಗಲ್ಲ. ನಾನು ರೈತನ ಮಗನಾಗಿ ಸಾಗುವಳಿ ಚೀಟಿ ಗಾಗಿ ಅರ್ಜಿ ಸಲ್ಲಿಸಿರುವ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಮಣ್ಣಿನ ಮಕ್ಕಳೇಕೆ ಆ ಅರ್ಜಿಗಳನ್ನು ವಿಲೇವಾರಿ ಮಾಡಲಿಲ್ಲ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಪರೋಕ್ಷವಾಗಿ ಶಾಸಕ ಇಕ್ಬಾಲ್ ಹುಸೇನ್ ಟೀಕಿಸಿದರು.
ನಾನೂ ರೈತನ ಮಗ. ರೈತರು ಭೂಮಿ ಮೇಲೆ ಎಷ್ಟೊಂದು ಪ್ರೀತಿ ಮಮತೆ ಹೊಂದಿದ್ದಾರೆ ಎಂಬುದು ರೈತನ ಮಗನಾಗಿ ನನಗೆ ಗೊತ್ತು. ಭೂಮಿ ಬೆಲೆ ಗಗನಕ್ಕೇರಿದೆ. 25- 30 ವರ್ಷಗಳ ಹಿಂದೆಯೇ ಆ ರೈತರಿಗೆಲ್ಲ ಸಾಗುವಳಿ ಚೀಟಿ ಕೊಡಬಹುದಾಗಿತ್ತು. ಈಗಿನಂತೆ ಆಗ ಕಾನೂನು ಸಡಿಲವಾಗಿರಲಿಲ್ಲ.
ಈಗ ರೈತರಿಗೆ ಸಾಗುವಳಿ ಭೂಮಿ ನೀಡಬೇಕಾದರೆ ನಗರಸಭೆ ವ್ಯಾಪ್ತಿಯಿಂದ 5 ಕಿ.ಮೀ, ಬಿಬಿಎಂಪಿ ವ್ಯಾಪ್ತಿಯಿಂದ 18 ಕಿ.ಮೀ ಹಾಗೂ ಪುರಸಭೆಯಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಇರಬಾರದೆಂಬ ನಿಯಮಗಳಿವೆ. ಈ ಎಲ್ಲ ಕಾನೂನುಗಳು ಹಿಂದೆ ಇರಲಿಲ್ಲ. 25 ವರ್ಷ ಶಾಸಕರಾಗಿದ್ದವರು ಇದರ ಬಗ್ಗೆ ಕಾಳಜಿ ವಹಿಸದಿರುವ ಕಾರಣದಿಂದಲೇ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಹೇಳಿದರು.ರಾಮನಗರ ತಾಲೂಕಿನ ಕಸಬಾ - ಕೈಲಾಂಚ ಹೋಬಳಿಯಲ್ಲಿ ನಮೂನೆ 50, 53 ಹಾಗೂ 57ರ ಅರ್ಜಿಗಳು ಸೇರಿ ಒಟ್ಟು 1800 ಸಾಗುವಳಿ ಅರ್ಜಿಗಳು ಬಾಕಿ ಉಳಿದಿವೆ. ಈಗ ನಮೂನೆ 50 ಮತ್ತು 53 ಅರ್ಜಿಗಳನ್ನು ಮಾತ್ರ ವಿಲೇವಾರಿಗೆ ಕೈಗೆತ್ತಿಕೊಂಡಿದ್ದೇವೆ. ಹರೀಸಂದ್ರದಲ್ಲಿ ಸಾಕಷ್ಟು ಗೋಮಾಳ ಲಭ್ಯವಿದೆ. ಇಲ್ಲಿ ನಮೂನೆ 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದ ರೈತರಿಗೆ ಭೂಮಿ ಮಂಜೂರು ಮಾಡುವ ವಿಫುಲ ಅವಕಾಶಗಳಿವೆ ಎಂದರು.
ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್ ,ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯರಾದ ಕೆ.ರವಿ, ತಿಮ್ಮಯ್ಯ, ಅಮೃತಾ, ತಹಸೀಲ್ದಾರ್ ತೇಜಸ್ವಿನಿ, ರಾಜಸ್ವ ನಿರೀಕ್ಷಕ ನಾಗರಾಜು, ಕಂದಾಯ ಅಧಿಕಾರಿ ಮುಬಾರಕ್ , ಮುಖಂಡರಾದ ಶೇಖರ್ ಮಾರೇಗೌಡ, ವೀರಭದ್ರ ಸ್ವಾಮಿ, ಪುಟ್ಟೇಗೌಡ, ಮಂಚೇಗೌಡ, ಮಹದೇವು, ಸತೀಶ್, ಚಂದ್ರಣ್ಣ, ರಾಮು, ಅರುಣ್ , ಪಾದರಹಳ್ಳಿ ರಾಜು, ವಸಂತ ಮತ್ತಿತರರು ಹಾಜರಿದ್ದರು.
ಕಾಂಗ್ರೆಸ್ ಸರ್ಕಾರದ ಜನಪರ ಆಡಳಿತಕ್ಕೆ ಸಿಕ್ಕ ಗೆಲುವು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ಆಡಳಿತವನ್ನು ಜನರು ಸ್ವೀಕರಿಸಿದ್ದಾರೆ ಎಂಬುದಕ್ಕೆ ಉಪಚುನಾವಣೆಗಳ ಫಲಿತಾಂಶವೇ ಸಾಕ್ಷಿ ಎಂದರು.
ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರ ಉಪಚುನಾವಣೆಗಳಲ್ಲಿ ಗೆಲುವ ಸಾಧಿಸುವ ವಿಶ್ವಾಸವಿತ್ತು. ನಮ್ಮಗಳ ನಿರೀಕ್ಷೆಯಂತೆ ಎರಡು ಕ್ಷೇತ್ರಗಳ ಮತದಾರರು ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
4ಕೆಆರ್ ಎಂಎನ್ 1.ಜೆಪಿಜಿ