ಕನ್ನಡಪ್ರಭ ವಾರ್ತೆ ತುಮಕೂರು

ಕೊತಬಾಲ ಗ್ರಾಪಂ ಪಿಡಿಒ ಮುಕ್ತಂಹುಸೇನ ಕರಡಿಗುಡ್ಡ ಅವರ ಆತ್ಮಹತ್ಯೆ ಪ್ರಕರಣದ ಸಮಗ್ರ ತನಿಖೆ ನಡೆಸುವಂತೆ ಹಾಗೂ ರಾಜ್ಯದ ಎಲ್ಲಾ ಪಿಡಿಒಗಳಿಗೆ ಸೇವಾ ರಕ್ಷಣೆ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ವತಿಯಿಂದ ಜಿ.ಪಂ. ಉಪಕಾರ್ಯದರ್ಶಿ ಈಶ್ವರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.

ನಗರದ ಜಿ.ಪಂ. ಕಚೇರಿಯಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ್ ಆರ್. ಹಾಗೂ ಜಿಲ್ಲಾಧ್ಯಕ್ಷ ಸುಬ್ಬರಾಜ್ ಅರಸ್ ವಿ.ಆರ್. ರವರ ನೇತೃತ್ವದಲ್ಲಿ ಈಶ್ವರಪ್ಪರವರನ್ನು ಭೇಟಿ ಮಾಡಿದ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಪಿಡಿಒಗಳು ತಮ್ಮ ಬೇಡಿಕೆಯುಳ್ಳ ಮನವಿ ಪತ್ರವನ್ನು ಸಲ್ಲಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಿಗೆ ಕಳುಹಿಸಿಕೊಡುವಂತೆ ಮನವಿ ಮಾಡಿದರು.

ಅಸೂಟಿ ಮತ್ತು ಕೊತಬಾಲ ಎರಡು ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಯಾಗಿ (ಹೆಚ್ಚುವರಿ ಪ್ರಭಾರ ಸೇರಿ) ಕರ್ತವ್ಯ ನಿರ್ವಹಿಸುತ್ತಿದ್ದ ಮುಕ್ತಂಹುಸೇನ ಕರಡಿಗುಡ್ಡ ಅವರು ಅತಿಯಾದ ಕೆಲಸದ ಒತ್ತಡ, ಹಿಂದಿನ ಪ್ರಕರಣವೊಂದರ ಮೇಲಿದ್ದ ಲೋಕಾಯುಕ್ತ ತನಿಖೆ ಹಾಗೂ ವೇತನವಿಲ್ಲದೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಡೀ ರಾಜ್ಯದ ಪಿಡಿಒ ಸಮುದಾಯವನ್ನು ತೀವ್ರ ಆಘಾತಕ್ಕೀಡು ಮಾಡಿದೆ. ಈ ಪ್ರಕರಣ ಕೇವಲ ಒಬ್ಬ ಅಧಿಕಾರಿಯ ದುರಂತವಲ್ಲ, ಬದಲಾಗಿ ಇಡೀ ರಾಜ್ಯದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಎದುರಿಸುತ್ತಿರುವ ನೈಜ ಮತ್ತು ಭೀಕರ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಗ್ರಾಮೀಣಾಭಿವೃದ್ಧಿಯ ಆಧಾರ ಸ್ತಂಭವಾಗಿರುವ ಪಿಡಿಒಗಳು ಇಂದು ತೀವ್ರವಾದ ಕೆಲಸದ ಒತ್ತಡದಲ್ಲಿ ನಲುಗಿ ಹೋಗುತ್ತಿದ್ದಾರೆ ಎಂದು ತಮ್ಮ ಸಮಸ್ಯೆಯನ್ನು ಪಿಡಿಒಗಳು ಹೇಳಿಕೊಂಡರು.

ಸರ್ಕಾರಕ್ಕೆ ವರದಿ ಇಲ್ಲ:


ಗ್ರಾಮೀಣಾಭಿವೃದ್ಧಿ ಮತ್ತು ವಂಚಾಯತ್ ರಾಜ್ ಇಲಾಖೆಯ ನೌಕರರ ಮೇಲೆ ನಡೆಯುತ್ತಿರುವ ನಿರಂತರ ಒತ್ತಡಗಳು ಹಾಗೂ ಸಂಭವಿಸುತ್ತಿರುವ ಅಕಾಲಿಕ ಸಾವುಗಳ ಕುರಿತು ಅಧ್ಯಯನ ಮಾಡಲು ಕಳೆದ ಒಂದು ವರ್ಷದ ಹಿಂದೆ ಮೀನಾಕ್ಷಿ ಸುಂದರಂ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಆದರೆ ಈ ಸಮಿತಿಯು ಇದುವರೆಗೂ ಸರ್ಕಾರಕ್ಕೆ ವರದಿ ಸಲ್ಲಿಸಿಲ್ಲ. ನೌಕರರ ಜೀವದ ಜತೆ ಚೆಲ್ಲಾಟವಾಡುತ್ತಿರುವ ಇಂತಹ ವ್ಯವಸ್ಥಿತ ಒತ್ತಡಗಳನ್ನು ತಡೆಯಲು ಈ ವರದಿ ಅತ್ಯಂತ ಅವಶ್ಯಕವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪಿಡಿಒ ಮುಕ್ತಂಹುಸೇನ ಕರಡಿಗುಡ್ಡ ಅವರ ಆತ್ಮಹತ್ಯೆ ಪ್ರಕರಣದ ಬಗ್ಗೆ ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯಾಗಬೇಕು. ಅವರ ಕುಟುಂಬಕ್ಕೆ ಇಲಾಖೆಯಿಂದ ಸಿಗಬೇಕಾದ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು, ಬಾಕಿ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಮತ್ತು ಅವರ ಕುಟುಂಬದ ಓರ್ವ ಸದಸ್ಯರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗರಾಜ್ ಆರ್. ಹಾಗೂ ಜಿಲ್ಲಾಧ್ಯಕ್ಷ ಸುಬ್ಬರಾಜ್ ಅರಸ್ ವಿ.ಆರ್., ಉಪಾಧ್ಯಕ್ಷರಾದ ತೇಜಸ್ವಿನಿ, ತೀರ್ಥ, ಖಜಾಂಜಿ ಮಂಜುನಾಥ್ ಎಸ್.ಎಸ್., ರಾಜ್ಯ ಪರಿಷತ್ ಸದಸ್ಯ ವೆಂಕಟೇಶ್ ಡಿ.ವಿ., ಸಂಘಟನಾ ಕಾರ್ಯದರ್ಶಿಗಳಾದ ಚಂದ್ರಹಾಸ ಎಸ್.ಎಲ್., ಎ. ಕೋಕಿಲ, ಕ್ರೀಡಾ ಕಾರ್ಯದರ್ಶಿ ಸುನೀಲ್‌ಕುಮಾರ್ ಎನ್., ಸಾಂಸ್ಕೃತಿಕ ಕಾರ್ಯದರ್ಶಿ ವಿಜಯಲಕ್ಷ್ಮಿ ಆರ್. ಪಾಟೀಲ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಪಿಡಿಒಗಳು ಭಾಗವಹಿಸಿದ್ದರು.

ಯಾವುದೇ ಅಧಿಕಾರಿಯ ಮೇಲೆ ಇಲಾಖಾ ವಿಚಾರಣೆ ಅಥವಾ ಲೋಕಾಯುಕ್ತ ಪ್ರಕರಣ ದಾಖಲಾಗಿದ್ದರೆ ಅದನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ವಿಚಾರಣೆ ನೆಪದಲ್ಲಿ ತಿಂಗಳುಗಟ್ಟಲೆ ಅಮಾನತಿನಲ್ಲಿಟ್ಟು, ಸ್ಥಳ ನಿಯುಕ್ತಿಗೊಳಿಸದೆ, ವೇತನವೂ ನೀಡದೆ ಅಧಿಕಾರಿಗಳನ್ನು ಮತ್ತು ಅವರ ಕುಟುಂಬವನ್ನು ಉಪವಾಸ ಕೆಡವುವ ವ್ಯವಸ್ಥೆ ಬದಲಾಗಬೇಕು. ವಿಚಾರಣಾ ಅವಧಿಯಲ್ಲಿ ನಿಯಮಾನುಸಾರ ಜೀವನಾಧಾರ ಭತ್ಯೆಯನ್ನು ಕಡ್ಡಾಯವಾಗಿ ಹಾಗೂ ಸಕಾಲದಲ್ಲಿ ಪಾವತಿಸಬೇಕು ಎಂದು ಪಿಡಿಒಗಳು ಮನವಿ ಮಾಡಿದರು.