ಶೀಘ್ರದಲ್ಲೇ ಪೇಟೆ ಬೀದಿ(ಎಂ.ಸಿ.ರಸ್ತೆ) ಅಗಲೀಕರಣ ಕಾಮಗಾರಿ ಆರಂಭ: ಶಾಸಕ ಕೆ.ಎಂ.ಉದಯ್

KannadaprabhaNewsNetwork | Published : Jul 10, 2024 12:32 AM

ಸಾರಾಂಶ

ಮದ್ದೂರು ಪಟ್ಟಣದ ಪೇಟೆ ಬೀದಿ (ಎಂ.ಸಿ.ರಸ್ತೆ) ಈ ಹಿಂದೆ ವ್ಯಾಪಾರ ವಹಿವಾಟು ಜನಸಂಖ್ಯೆ, ವಾಹನಗಳು ಸೇರಿದಂತೆ ಇತ್ಯಾದಿ ಅಂಶಗಳ ಆಧಾರದ ಮೇಲೆ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈಗ ಎಲ್ಲವೂ ಅಭಿವೃದ್ಧಿ ಜೊತೆಗೆ ಹೆಚ್ಚಳವಾಗಿದೆ. ಹೀಗಾಗಿ ಮೂಲ ಸೌಲಭ್ಯ ಕಲ್ಪಿಸಲು ತೊಂದರೆಯಾಗಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗಿರುವ ಪಟ್ಟಣದ ಪೇಟೆಬೀದಿ (ಎಂ.ಸಿ.ರಸ್ತೆ) ಅಗಲೀಕರಣ ಕಾಮಗಾರಿಯನ್ನು ಶೀಘ್ರದಲ್ಲೆ ಕೈಗೊಳ್ಳಲಾಗುವುದು ಎಂದು ಶಾಸಕ ಕೆ.ಎಂ.ಉದಯ್ ಮಂಗಳವಾರ ಹೇಳಿದರು.

ಪಟ್ಟಣದ ಪುರಸಭೆ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಉಪ ವಿಭಾಗಧಿಕಾರಿ ಶಿವಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪೇಟೆ ಬೀದಿ ಅಗಲೀಕರಣ ಸಂಬಂಧ ಸದಸ್ಯರಾದ ಎಂ.ಬಿ.ಸಚಿನ್, ಪ್ರಸನ್ನಕುಮಾರ್, ಪಿ.ಸಿದ್ದರಾಜು, ಸೇರಿದಂತೆ ಹಲವರು ಪ್ರಸ್ತಾಪಿದಾಗ ಇದಕ್ಕೆ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸೇರಿದಂತೆ ಎಲ್ಲ ಸದಸ್ಯರು ಅಗಲೀಕರಣಕ್ಕೆ ಪಕ್ಷಾತೀತವಾಗಿ ಬೆಂಬಲ ಸೂಚಿಸಿದರು.

ಪೇಟೆ ಬೀದಿ ಈ ಹಿಂದೆ ವ್ಯಾಪಾರ ವಹಿವಾಟು ಜನಸಂಖ್ಯೆ, ವಾಹನಗಳು ಸೇರಿದಂತೆ ಇತ್ಯಾದಿ ಅಂಶಗಳ ಆಧಾರದ ಮೇಲೆ ರಸ್ತೆ ನಿರ್ಮಾಣ ಮಾಡಲಾಗಿತ್ತು. ಈಗ ಎಲ್ಲವೂ ಅಭಿವೃದ್ಧಿ ಜೊತೆಗೆ ಹೆಚ್ಚಳವಾಗಿದೆ. ಹೀಗಾಗಿ ಮೂಲ ಸೌಲಭ್ಯ ಕಲ್ಪಿಸಲು ತೊಂದರೆಯಾಗಿದೆ. ಪಟ್ಟಣದ ಅಭಿವೃದ್ಧಿ ದೃಷ್ಟಿಯಿಂದ ಕೂಡಲೇ ಪೇಟೆಬೀದಿ ರಸ್ತೆ ಅಗಲೀಕರಣ ಕೈಗೊಂಡು 100ರಿಂದ 120 ಅಡಿಗೆ ವಿಸ್ತರಣೆ ಮಾಡಬೇಕು ಎಂದು ಸದಸ್ಯರು ಆಗ್ರಹಿಸಿದರು.

ಜೆಡಿಎಸ್ ಸದಸ್ಯೆ ಪ್ರಿಯಾಂಕ ಅಪ್ಪುಗೌಡ ಮಾತನಾಡಿ, ಪೇಟೆಬೀದಿ ಅಗಲೀಕರಣ ವೇಳೆ ಎಸ್.ಬಿ.ಎಂ.ರಸ್ತೆಯ ಮೂಲಕ ಮೈಸೂರು- ಬೆಂಗಳೂರು ಸರ್ವೀಸ್ ಸಂಪರ್ಕ ರಸ್ತೆ ಹಾಗೂ ಸಾರ್ವಜನಿಕ ಆಸ್ಪತ್ರೆ ಪಕ್ಕದ ರಸ್ತೆಯಿಂದ ಸರ್ವೀಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕೂಡ ಅಗಲೀಕರಣ ಕಾಮಗಾರಿ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದರು.

ಈ ಸಂಬಂಧ ಸದಸ್ಯರೊಂದಿಗೆ ಚರ್ಚೆ ನಡೆಸಿದ ಶಾಸಕ ಕೆ.ಎಂ.ಉದಯ್, ಪೇಟೆಬೀದಿಯ ಅಗಲೀಕರಣ ಸಂಬಂಧ ಹಲವು ವರ್ಷಗಳ ಹಿಂದೆಯೇ ಈ ತೀರ್ಮಾನಿಸಲಾಗಿತ್ತು. ರಾಜಕೀಯ ಕಾರಣಗಳಿಂದಾಗಿ ಅಗಲೀಕರಣ ಕಾರ್ಯ ನೆನೆಗುದಿಗೆ ಬಿದ್ದಿದೆ. ಸಾರ್ವಜನಿಕರ ದೃಷ್ಠಿಯಿಂದ ಈಗ ಅಗಲೀಕರಣ ಮಾಡುವುದು ಅನಿವಾರ್ಯವಾಗಿದೆ ಎಂದರು.

ಅಗಲೀಕರಣ ಸಂಬಂಧ ಈಗಾಗಲೇ 100 ಕೋಟಿ ರು. ಅನುದಾನ ಕೋರಿ ಸರ್ಕಾರಕ್ಕೆ ಪ್ರಾಸ್ತಾವನೆ ಸಲ್ಲಿಸಲಾಗಿದೆ. ಸರ್ವೇಕಾರ್ಯದ ನಂತರ ಸಂಸತ್ ಚುನಾವಣೆಯ ನೀತಿ ಸಂಹಿತೆ ಜಾರಿ ಕಾರಣ ಅಗಲೀಕರಣ ಕಾರ್ಯ ವಿಳಂಬವಾಗಿದೆ. ಈ ಸಂಬಂಧ ರಸ್ತೆ 100 ಅಥವಾ 120 ಅಡಿಗೆ ವಿಸ್ತರಣಾ ಮಾಡಬಹುದ ಎಂಬುವುದನ್ನು ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಭರವಸೆ ನೀಡಿದರು.

ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಕೋಟ್ಯಂತರ ರು. ಬೆಲೆ ಬಾಳುವ 5 ಗುಂಟೆ ಗ್ರಾಮ ಠಾಣಾ ನಿವೇಶ ಮತ್ತು ಹೊಂಬಾಳಮ್ಮ ದೇವಸ್ಥಾನಕ್ಕೆ ಸೇರಿದ 1 ಗುಂಟೆ ನಿವೇಶನ ಸೇರಿದಂತೆ ಒಟ್ಟು 6 ಗುಂಟೆ ನಿವೇಶವನ್ನು ಪುರಸಭೆ ಹಿಂದಿನ ಅಧಿಕಾರಿಗಳು 3.500 ರು. ಕಂದಾಯ ಕಟ್ಟಿಸಿಕೊಂಡು ಪ್ರಭಾವಿಗಳಿಗೆ ಇ-ಸ್ವತ್ತು ಮಾಡಿಕೊಂಡಿದ್ದಾರೆ ಎಂದು ಸದಸ್ಯ ಸಚಿನ್ ಸೇರಿದಂತೆ ಹಲವರು ಗಂಭೀರ ಆರೋಪ ಮಾಡಿದರು.

ಸಚಿನ್ ಆರೋಪಕ್ಕೆ ಉತ್ತರ ನೀಡಿದ ಉಪ ವಿಭಾಗಧಿಕಾರಿ ಶಿವಮೂರ್ತಿ, ಅಕ್ರಮ ಖಾತೆ ಸಂಬಂಧ ಪರಿಶೀಲನೆ ಮಾಡಿ ತಪ್ಪಿತಸ್ಥ ಅಧಿಕಾರಿಗಳು ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.

ಶಾಸಕ ಕೆ.ಎಂ.ಉದಯ್ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಪುರಸಭೆಗೆ ಸೇರಿದ ನಿವೇಶಗಳನ್ನು ಸರ್ವೇ ಮಾಡಿ ಗುರುತಿಸಿ ನಾಮಫಲಕಗಳನ್ನು ಹಾಕಬೇಕು ಎಂದು ತಾಕೀತು ಮಾಡಿದರು.

ಪುರಸಭೆ ನೀರು ಸರಬಾಜು ವಿಭಾಗಕ್ಕೆ ಸಬ್ ಮಸ್ರಿಬಲ್ಪಂಪ್ ಪಂಪ್ಸೆಟ್ ನಿರ್ವಹಣೆಗೆ, ಒಳಚರಂಡಿ ನಿರ್ವಹಣೆ ಮತ್ತು ದುರಸ್ತಿ, 1ರಿಂದ 23 ವಾರ್ಡ್ ಗಳ ಬೀದಿ ದೀಪಗಳ ನಿರ್ವಹಣೆ ಜತೆಗೆ ಸ್ವಚ್ಛ ಭಾರತ್ ಮಿಷನ್ ಅಭಿಯಾನದಡಿ ಆತಗೂರು ಹೋಬಳಿ ಹೂತಗೆರೆ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು.

ಸಭೆಯಲ್ಲಿ ಪುರಸಭಾ ಮುಖ್ಯಾಧಿಕಾರಿ ಕರಿಬಸವಯ್ಯ, ಸದಸ್ಯರಾದ ಎಸ್.ಮಹೇಶ್, ಎಂ.ಐ.ಪ್ರವೀಣ್, ಕೋಕಿಲ, ವನಿತಾ, ಪ್ರಮೀಳ, ಆದಿಲ್ ಆಲಿ ಆಖನ್, ಮನೋಜ್, ಸರ್ವಮಂಗಳ ಸೇರಿದಂತೆ ಇತರರು ಇದ್ದರು.

Share this article