ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ನೀರಾವರಿ ಇಲಾಖೆಯಲ್ಲಿನ ವ್ಯಾಪಕ ಭ್ರಷ್ಟಾಚಾರ ಮತ್ತು ಕಳಪೆ ಕಾಮಗಾರಿ ಖಂಡಿಸಿ ರೈತಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಹೇಮಾವತಿ ಜಲಾಶಯ ವ್ಯಾಪ್ತಿ ಎಚ್.ಎಲ್.ಬಿಸಿ ನಂ03 ಉಪ ವಿಭಾಗೀಯ ಕಚೇರಿಗೆ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ರೈತರು ಮತ್ತು ಕನ್ನಡ ಪರ ಹೋರಾಟಗಾರರು ಭ್ರಷ್ಟ ಎಂಜಿನಿಯರುಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ತಾಲೂಕು ಕುಂದೂರು ಗ್ರಾಮ ವ್ಯಾಪ್ತಿ ಆರಂಭಗೊಂಡು ಮಲ್ಲೇನಹಳ್ಳಿಯವರೆಗೆ ಹಾದುಹೋಗಿರುವ ಹೇಮಾವತಿ ವಿತರಣಾ ನಾಲೆ ಅಧುನೀಕರಣ ಕಾಮಗಾರಿ ಅತ್ಯಂತ ಕಳಪೆಯಾಗಿದೆ. 55 ಕೋಟಿ ರು.ಈ ಕಾಮಗಾರಿ ನಿಯಮಾನುಸಾರ ನಡೆಯುತ್ತಿಲ್ಲ ಎಂದು ಕಿಡಿಕಾರಿದರು.ಗುತ್ತಿಗೆದಾರರು ಮತ್ತು ಎಂಜಿನಿಯರು ಪರಸ್ಪರ ಶಾಮೀಲಾಗಿ ಕಳಪೆ ಕಾಮಗಾರಿ ನಡೆಸಿದ್ದಾರೆ. ಗುಣಮಟ್ಟದ ಕಬ್ಬಿಣ ಬಳಕೆ, ನಿಗ್ರಾವಲ್ ಮಣ್ಣನ್ನು ಬಳಸುತ್ತಿಲ್ಲ. ಈಗಾಗಲೇ ಲೈನಿಂಗ್ ಕಿತ್ತು ಹೋಗುತ್ತಿದೆ. ಕಾಮಗಾರಿ ಹೆಸರಿನಲ್ಲಿ ರೈತರ ತೆರಿಗೆ ಹಣವನ್ನು ಲೂಟಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪಟ್ಟಣದ ತೇಗನಹಳ್ಳಿ ಎಲ್ಲೆಯಲ್ಲಿ ಕಾಳೇಗವಡನ ಕಟ್ಟೆ ಎಂಬ ಕೆರೆಗೆ ಪುರ ಗ್ರಾಮದ ಪ್ರಭಾವಿ ಗುತ್ತಿಗೆದಾರ ಬೇಲಿ ಹಾಕಿ ಸಾರ್ವಜನಿಕರು ತಿರುಗಾಡದಂತೆ ಹಾಗೂ ಕೆರೆ ನೀರನ್ನು ಬಳಕೆ ಮಾಡುವುದಕ್ಕೆ ತಡೆಯೊಡ್ಡಿದ್ದಾನೆ ಎಂದು ದೂರಿದರು.ಸಾರ್ವಜನಿಕರ ಕೆರೆಯನ್ನು ತನ್ನ ವಶಕ್ಕೆ ಪಡೆದುಕೊಂಡು ರೆಸಾರ್ಟ್ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದಾನೆ. ಇದನ್ನು ತೆರವುಗೊಳಿಸಲು ಎಂಜಿನಿಯರು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೇಮಾವತಿ ಜಲಾಶಯ ವ್ಯಾಪ್ತಿ ನಾಲೆಗಳಿಗೆ ಈಗಾಗಲೇ ನೀರು ಬಿಟ್ಟಿದ್ದು ರೈತರು ಕೃಷಿ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ. ಆದರೆ, ನೀರು ನಿಲ್ಲಿಸಿ ಕಾಲುವೆಗಳ ಹೂಳೆತ್ತೆವ ಮತ್ತು ಜಂಗಲ್ ಕಟ್ ಮಾಡುವ ಕೆಲಸಕ್ಕೆ ಇಲಾಖೆ ಮುಂದಾಗಿದೆ. ಬೇಸಿಗೆ ಕಾಲದಲ್ಲಿ ಅಗತ್ಯ ಯೋಜನೆ ರೂಪಿಸಿ ನಾಲೆಗಳ ಹೂಳೆತ್ತದೆ ಈಗ ಕಾಮಗಾರಿ ಆರಂಭಿಸಿರುವುದು ಸರಿಯಲ್ಲ ಎಂದು ಧಿಕ್ಕಾರ ಕೂಗಿದರು.ಸ್ಥಳಕ್ಕೆ ಆಗಮಿಸಿದ ಹೇಮಾವತಿ ಜಲಾಶಯ ಯೋಜನೆ ಅಧೀಕ್ಷಕ ಎಂಜಿನಿಯರ್ ಎಂ.ಎನ್.ಕಿಶೋರ್ ಹೋರಾಟಗಾರರ ಅಹವಾಲು ಆಲಿಸಿ ಲೋಪಗಳನ್ನು ಸರಿಪಡಿಸುವ ಭರವಸೆ ನೀಡಿದರು.
ಸರ್ಕಾರಿ ಕೆರೆ ಒತ್ತುವರಿ ಸ್ಥಳಕ್ಕೆ ಎಂಜಿನಿಯರ್ ಭೇಟಿ ನೀಡಿ ಪರಿಶೀಲಿಸುವಂತೆ ಹೋರಾಟಗಾರರು ಪಟ್ಟು ಹಿಡಿದರು. ನಂತರ ಅಧೀಕ್ಷಕ ಎಂಜಿನಿಯರ್ ಕಿಶೋರ್ ಸ್ಥಳ ರೈತರೊಂದಿಗೆ ತೆರಳಿದರು. ಆದರೆ, ಖಾಸಗಿ ವ್ಯಕ್ತಿ ಬೆಂಬಲಿಗರು ಕೆರೆ ಬಳಿ ಅಧಿಕಾರಿ ತೆರಳಲು ಅಡ್ಡಿಪಡಿಸಿದರು. ನಂತರ ಪೊಲೀಸರ ನೆರವು ಪಡೆದು ಒಳಪ್ರವೇಶಿಸಬೇಕಾಯಿತು.ಕೆರೆ ಅತಿಕ್ರಮಣ ಹಾಗೂನಾಲೆ ಕಳಪೆ ಕಾಮಗಾರಿಗಳನ್ನು ಪರಿಶೀಲಿಸಿದ ಅಧೀಕ್ಷಕ ಎಂಜಿನಿಯರ್ ಕಾಮಗಾರಿ ಬಿಲ್ ತಡೆಹಿಡಿಯುವಂತೆ ಸ್ಥಳದಲ್ಲಿದ್ದ ಕಾರ್ಯಪಾಲಕ ಅಭಿಯಂತರ ಆನಂದ್ ಅವರಿಗೆ ಆದೇಶಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ತಾಲೂಕು ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ಕೆ.ಆರ್.ಜಯರಾಂ, ಎಲ್.ಬಿ.ಜಗದೀಶ್, ಮರುವನಹಳ್ಳಿ ಶಂಕರ್, ಕರೋಟಿ ತಮ್ಮಯ್ಯ, ಬೂಕನಕೆರೆ ನಾಗರಾಜು, ಮಡುವಿನಕೋಡಿ ಪ್ರಕಶ್, ಹೊನ್ನೇಗೌಡ, ಕರವೇ ಜಿಲ್ಲಾ ಅಧ್ಯಕ್ಷ ಡಿ.ಎಸ್.ವೇಣು, ತಾಲೂಕು ಅಧ್ಯಕ್ಷ ಶ್ರೀನಿವಾಸ್, ಕರವೇ ಪದವೀಧರರ ಘಟಕದ ಅಧ್ಯಕ್ಷ ಸಿ.ಬಿ.ಚೇತನ್ ಕುಮಾರ್, ಶಿವಪ್ರಸಾದ್, ಗೋಪಿ, ಆನಂದ, ಅನಿಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.