ಗದಗ ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ವ್ಯಾಪಕ ಅಕ್ರಮ: ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Jul 05, 2026, 02:00 AM IST
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿದರು.  | Kannada Prabha

ಸಾರಾಂಶ

ಗದಗ ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾರೀ ಗೊಂದಲ ಹಾಗೂ ಅಕ್ರಮಗಳು ನಡೆಯುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಗದಗ: ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾರೀ ಗೊಂದಲ ಹಾಗೂ ಅಕ್ರಮಗಳು ನಡೆಯುತ್ತಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ​ಮತದಾರರ ಪಟ್ಟಿ ಪರಿಷ್ಕರಣೆಗಾಗಿ ಬಿಎಲ್‌ಒಗಳು ಮನೆ ಮನೆಗೆ ತೆರಳಿ ಮ್ಯಾಪಿಂಗ್ ಮುಗಿದ ನಂತರ ಫಾರ್ಮ್‌ಗಳನ್ನು ನೀಡಿ, ಅವುಗಳನ್ನು ಭರ್ತಿ ಮಾಡಿ ಸ್ಕ್ಯಾನ್ ಮಾಡಬೇಕೆಂಬ ಆದೇಶವಿದೆ. ಆದರೆ, ಕಳೆದ ನಾಲ್ಕು ದಿನಗಳಿಂದ ಹಲವೆಡೆ ಬಿಎಲ್‌ಒಗಳು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಈ ಬಗ್ಗೆ ಫೋನ್ ಮಾಡಿ ಕೇಳಿದರೆ, ನಮಗೆ ಬೇರೆ ಕೆಲಸವಿದೆ, ಅದನ್ನು ಮುಗಿಸಿಕೊಂಡು ಬರುತ್ತೇವೆ ಎಂದು ಉತ್ತರ ನೀಡುತ್ತಿದ್ದಾರೆ ಎಂದರು.

ತಹಸೀಲ್ದಾರ್‌ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 20ರಿಂದ 25 ಬಿಎಲ್‌ಒಗಳು ಗೈರು ಹಾಜರಾಗುತ್ತಿದ್ದಾರೆ. ​ನಿಯಮಾವಳಿಗಳ ಪ್ರಕಾರ ನಡೆಯಬೇಕಾದ ಪ್ರಕ್ರಿಯೆಯನ್ನು ಗಾಳಿಗೆ ತೂರಲಾಗಿದ್ದು, ಮಸೀದಿಗಳು ಹಾಗೂ ಕೆಲವು ಖಾಸಗಿ ಜಾಗಗಳಲ್ಲಿ ಗುಂಪು ಗುಂಪಾಗಿ ಕುಳಿತು ಬಂಚ್‌ಗಟ್ಟಲೆ ಫಾರ್ಮ್‌ಗಳನ್ನು ಭರ್ತಿ ಮಾಡಲಾಗುತ್ತಿದೆ. ಕೆಲವು ದೇವಸ್ಥಾನ ಮತ್ತು ಕಲ್ಯಾಣ ಮಂಟಪಗಳಲ್ಲೂ ಈ ರೀತಿಯ ಅಕ್ರಮಗಳು ನಡೆಯುತ್ತಿವೆ. ಇದನ್ನು ಕೇಳುವವರೇ ಇಲ್ಲದಂತಾಗಿದೆ. ರಾಜ್ಯ ಸರ್ಕಾರವು ಎಸ್‌ಐಆರ್ ಪ್ರಕ್ರಿಯೆ ದಾರಿ ತಪ್ಪಿಸಲು ಈ ರೀತಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

​ಶಿಗ್ಗಾಂವಿ ತಾಲೂಕಿನ ಬಂಕಾಪುರದ ಎರಡು ಮಸೀದಿಗಳಲ್ಲಿ ಈ ರೀತಿ ನಿಯಮಬಾಹಿರವಾಗಿ ಫಾರ್ಮ್‌ಗಳನ್ನು ಭರ್ತಿ ಮಾಡುತ್ತಿರುವುದರ ವಿರುದ್ಧ ಈಗಾಗಲೇ ಅಧಿಕೃತವಾಗಿ ದೂರು ನೀಡಲಾಗಿದೆ. ರೋಣ ತಾಲೂಕಿನಲ್ಲಿಯೂ ಈ ರೀತಿಯ ಅಕ್ರಮ ನಡೆದಿದೆ. ಬಿಎಲ್‌ಒಗಳಿಗೆ ಸರಿಯಾದ ತರಬೇತಿ ಇಲ್ಲದ ಕಾರಣ, ಹಲವರಿಗೆ ಸ್ಕ್ಯಾನ್ ಮಾಡಲು ಸಹ ಬರುತ್ತಿಲ್ಲ. ಒಂದು ಬೂತ್‌ನ ಕನಿಷ್ಠ 1000 ಮತದಾರರ ಪರಿಶೀಲನೆ ನಡೆಸಲು ಒಂದು ತಿಂಗಳ ಅವಧಿಯಲ್ಲಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಕಳಕಪ್ಪ ಬಂಡಿ, ಬಿಜೆಪಿ ಜಿಲ್ಲಾಧ್ಯಕ್ಷರಾದ ರಾಜು ಕುರಡಗಿ, ಎಂ.ಎಸ್. ಕರಿಗೌಡ್ರ ಉಪಸ್ಥಿತರಿದ್ದರು.

ಅಕ್ರಮ ಪರಿಶೀಲನೆ: ಮತದಾರರ ಪಟ್ಟಿಯಲ್ಲಿ ಒಂದೇ ಹೆಸರಿನ ದ್ವಿಪ್ರತಿ ತ್ರಿಪ್ರತಿ ಹಾಗೂ ನಾಲ್ಕೈದು ಕಡೆ ಒಂದೇ ಹೆಸರಿರುವ ಪ್ರಕರಣಗಳು ದಾಖಲೆಯ ಸಮೇತ ಬೆಳಕಿಗೆ ಬಂದಿವೆ. ರೋಣ ಕ್ಷೇತ್ರದಲ್ಲಿ ಒಟ್ಟು 3804 ಮತಗಳು ನಕಲಿಯಾಗಿವೆ. ಒಬ್ಬನೇ ವ್ಯಕ್ತಿಯ ಹೆಸರು ನಾಲ್ಕರಿಂದ ಐದು ಕಡೆ ಇರುವುದು ಪತ್ತೆಯಾಗಿದೆ. ಗದಗ ಕ್ಷೇತ್ರದಲ್ಲೂ ಸಹ ಇದೇ ರೀತಿಯ 2305 ಡಬಲ್ ಹಾಗೂ ತ್ರಿಬಲ್ ಮತಗಳು ಪತ್ತೆಯಾಗಿವೆ. ​ಇವು ಕೇವಲ ನಮಗೆ ಮೇಲ್ನೋಟಕ್ಕೆ ಕಂಡುಬಂದಿರುವ ಅಂಕಿ-ಅಂಶಗಳಾಗಿದ್ದು, ಇನ್ನು ಎಷ್ಟು ಅಕ್ರಮಗಳು ನಡೆದಿವೆ ಎಂಬುದನ್ನು ಪರಿಶೀಲಿಸಬೇಕಾಗಿದೆ ಎಂದು ಹಾವೇರಿ ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೂರು ಬೂತ್‌ಗಳಲ್ಲಿ ಎಚ್.ಕೆ. ಪಾಟೀಲ ಹೆಸರು: ಬಸವರಾಜ ಬೊಮ್ಮಾಯಿ ಆರೋಪ
5 ದಿನಗಳಲ್ಲಿ ಗದಗ ಜಿಲ್ಲೆಯಲ್ಲಿ 5.18 ಲಕ್ಷ ಎನ್ಯುಮರೇಷನ್ ಫಾರ್ಮ್‌ ವಿತರಣೆ!