ಪತಿ ಕೊಂದ ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

KannadaprabhaNewsNetwork |  
Published : Sep 16, 2025, 12:03 AM IST

ಸಾರಾಂಶ

ಚಿಕ್ಕಮಗಳೂರು, ಪತಿಯನ್ನು ಹತ್ಯೆಗೈದ ಆರೋಪದಲ್ಲಿ ಪತ್ನಿ ಹಾಗೂ ಆಕೆ ಪ್ರಿಯಕರನಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹60 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಪತಿಯನ್ನು ಹತ್ಯೆಗೈದ ಆರೋಪದಲ್ಲಿ ಪತ್ನಿ ಹಾಗೂ ಆಕೆ ಪ್ರಿಯಕರನಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹60 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ.

ಸಖರಾಯಪಟ್ಟಣ ಸಮೀಪದ ದೊಡ್ಡಿಹಟ್ಟಿಯಲ್ಲಿ ಹುಲಿಕೆರೆ ವಾಸಿ ಪ್ರದೀಪ ಪತ್ನಿ ರಾಗಿಣಿ, ಇಬ್ಬರು ಮಕ್ಕಳೊಂದಿಗೆ ವಾಸ ವಾಗಿದ್ದ. ಶ್ರೀನಿವಾಸ ಎಂಬಾತನೊಂದಿಗೆ ಪ್ರದೀಪ ಗಾರೆ ಕೆಲಸ ಮಾಡಿಕೊಂಡಿದ್ದ. ಈ ನಡುವೆ ಶ್ರೀನಿವಾಸನಿಗೆ ರಾಗಿಣಿಯ ಪರಿಚಯವಾಗಿದ್ದು, ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿತ್ತೆನ್ನಲಾಗಿದೆ. ಈ ವಿಚಾರ ಪ್ರದೀಪನಿಗೆ ಗೊತ್ತಾದ ಬಳಿಕ ಪ್ರದೀಪ ಗಲಾಟೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ರಾಗಿಣಿ ಹಾಗೂ ಶ್ರೀನಿವಾಸ ಸೇರಿ ಪ್ರದೀಪನನ್ನು ಮುಗಿಸಲು ಸಂಚು ರೂಪಿಸಿದ್ದರು. 2020 ರ ನವೆಂಬರ್ 20 ರಂದು ಸಂಜೆ 7.30ರ ಸುಮಾರಿಗೆ ಮಕ್ಕಳನ್ನು ಪಕ್ಕದ ಮನೆಗೆ ಟಿವಿ ನೋಡಲು ಕಳುಹಿಸಿ ರಾತ್ರಿ 9.30 ರ ಸುಮಾರಿಗೆ ರಾಗಿಣಿ, ಶ್ರೀನಿವಾಸ ಪ್ರದೀಪ ಮಾತನಾಡುತ್ತಾ ಕುಳಿತಿದ್ದ ಸಂದರ್ಭದಲ್ಲಿ ರಾಗಿಣಿ ಹಾಗೂ ಶ್ರೀನಿವಾಸ್ ಸೇರಿ ವೇಲ್‌ನಿಂದ ಪ್ರದೀಪನ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದರು. ಸ್ಥಳದಲ್ಲಿ ಬಿದ್ದಿದ್ದ ರಕ್ತವನ್ನು ಪ್ರದೀಪ ಧರಿಸಿದ್ದ ಬಟ್ಟೆ ಹಾಗೂ ಮನೆಯಲ್ಲಿದ್ದ ಇನ್ನೊಂದು ಬಟ್ಟೆಯನ್ನು ಬಳಸಿ ಒರೆಸಿದ್ದು, ಪ್ರದೀಪನ ಸಾವನ್ನು ಸಹಜವೆಂದು ಬಿಂಬಿಸಲು ಪ್ರಯತ್ನಿಸಿ, ಶವವನ್ನು ಕೊಠಡಿ ಮಂಚದ ಮೇಲೆ ಮಲಗಿಸಿದ್ದರು. ಬಳಿಕ ಆತನನ್ನು ಹತ್ಯೆ ಮಾಡಲು ಬಳಸಿದ ಬಟ್ಟೆಗಳನ್ನು ಶ್ರೀನಿವಾಸ ಚೆಟ್ಟಿಪಾಳ್ಯ ಗೇಟ್‌ನ ಕೂಡುಹಳ್ಳಿ ಸೇತುವೆ ಕೆಳಕ್ಕೆ ಎಸೆದಿದ್ದ ಎನ್ನಲಾಗಿದೆ. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಅಂದಿನ ಕಡೂರು ಪೊಲೀಸ್ ವೃತ್ತ ನಿರೀಕ್ಷಕ ಡಿ.ಎಸ್. ಮಂಜುನಾಥ್, ಕೊಲೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕಡೂರು ಎಎಸ್‌ಐ ದೇವೇಂದ್ರಕುಮಾರ್ ನ್ಯಾಯಾಲಯಕ್ಕೆ ಸಾಕ್ಷಿದಾರರನ್ನು ಹಾಜರುಪಡಿಸುವಲ್ಲಿ ಯಶಸ್ವಿಯಾಗಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಸಿ.ಭಾನುಮತಿ ಇಬ್ಬರು ಆರೋಪಿಗಳಿಗೆ ಭಾರತೀಯ ದಂಡ ಸಂಹಿತೆ ಕಲಂ 302 ಐಪಿಸಿ ಪ್ರಕಾರ ಕಠಿಣ ಜೀವಾವಧಿ ಶಿಕ್ಷೆ ಹಾಗೂ ₹60 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ತೆರಲು ತಪ್ಪಿ ದಲ್ಲಿ ಮತ್ತೆ 6 ತಿಂಗಳು ಶಿಕ್ಷೆ ಅನುಭವಿಸುವಂತೆಯೂ ತೀರ್ಪಿನಲ್ಲಿ ತಿಳಿಸಲಾಗಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಎಚ್.ಎಸ್.ಲೋಹಿತಾಶ್ವಾಚಾರ್ ವಾದ ಮಂಡಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲೇಖಕ ತನ್ನನ್ನು ತಾನು ವಿಮರ್ಶೆಗೊಳಪಡಿಸಿಕೊಳ್ಳಬೇಕು
ಕುಂದಾನಗರಿಯಲ್ಲಿ ಬೆಳಗಾವಿ ಉತ್ಸವ