- ಮದುವೆಯಾದ 45 ದಿನಕ್ಕೆ ಸಾವಿಗೆ ಶರಣಾದ ನವವಿವಾಹಿತ ಹರೀಶ್ । ವಿವಾಹ ಮಾಡಿಸಿದ್ದ ರುದ್ರೇಶ ವಿಷಸೇವನೆ
- ಗುಮ್ಮನೂರು ನಿವಾಸಿ, ಖಾಸಗಿ ಕಂಪನಿ ಎಚ್‌ಆರ್ ಆಗಿದ್ದ ನವವಿವಾಹಿತ ಹರೀಶ್
- ಮದುವೆಗೆ ಮುನ್ನ ಪ್ರೀತಿಸಿದ್ದ ಕುಮಾರನೊಂದಿಗೆ ಓಡಿಹೋದ ಪತ್ನಿ ಸರಸ್ವತಿ- - -
ಕನ್ನಡಪ್ರಭ ವಾರ್ತೆ ದಾವಣಗೆರೆನವವಿವಾಹಿತೆಯ ದುಡುಕಿನ ನಿರ್ಧಾರದಿಂದ ಒಂದೂವರೆ ತಿಂಗಳ ಹಿಂದೆ ಆಕೆ ಕೈಹಿಡಿದಿದ್ದ ಪತಿ ಹಾಗೂ ಮದುವೆ ಮಾಡಿಸಿದ್ದ ಆಕೆಯ ಸೋದರ ಮಾವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ವರದಿಯಾಗಿವೆ.
ತಾಲೂಕಿನ ಗುಮ್ಮನೂರು ಗ್ರಾಮದ ವಾಸಿ, ಖಾಸಗಿ ಕಂಪನಿಯಲ್ಲಿ ಎಚ್‌ಆರ್ ಆಗಿ ಕೆಲಸ ಮಾಡುತ್ತಿದ್ದ ಹರೀಶ್ (30) ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಈತನ ಸಾವಿನ ಸುದ್ದಿ ತಿಳಿದ ದಾವಣಗೆರೆ ಆನೆಕೊಂಡ ವಾಸಿ ರುದ್ರೇಶ (40) ಸಹ ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮದುವೆಗೆ ಮುನ್ನ ಬೇರೊಬ್ಬನ ಜತೆ ಪ್ರೀತಿ:
ಎರಡೂವರೆ ತಿಂಗಳ ಹಿಂದೆ ಗುಮ್ಮನೂರು ಹರೀಶ ಅವರಿಗೆ ಆನೆಕೊಂಡದ ರುದ್ರೇಶ ತಮ್ಮ ಸಹೋದರಿ ಮಗಳಾದ ಸರಸ್ವತಿಯನ್ನು ತೋರಿಸಿ, ಮದುವೆ ಮಾಡಿಸಿದ್ದರು. ಆದರೆ, ಮದುವೆಗೆ ಮುನ್ನ ಕುಮಾರ ಎಂಬಾತನನ್ನು ಸರಸ್ವತಿ ಪ್ರೀತಿಸುತ್ತಿದ್ದಳು. ಆದರೂ, ದಾವಣಗೆರೆಯಲ್ಲಿ ವಾಸಿಸುತ್ತಿದ್ದ ಹರೀಶನ ಜೊತೆಗೆ ವಿವಾಹವಾಗಿದ್ದರೂ, ನವದಂಪತಿ ಮೊದಲ ದಿನದಿಂದಲೂ ಖುಷಿಯಾಗಿರಲಿಲ್ಲ. ಸಾಲದ್ದಕ್ಕೆ ಸರಸ್ವತಿ ತನ್ನ ಪ್ರೇಮಿಯಾದ ಕುಮಾರನೊಂದಿಗೆ ಓಡಿಹೋಗಿದ್ದರಿಂದ ಮರ್ಯಾದೆಗೆ ಅಂಜಿದ ಪತಿ ಹರೀಶ ಸಾವಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.ಮೃತ ಹರೀಶ ಬರೆದಿದ್ದ ಡೆತ್ ನೋಟು ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪತ್ತೆಯಾಗಿದ್ದು, 45 ದಿನದ ಹಿಂದಷ್ಟೇ ತನ್ನ ಮದುವೆಯಾಯಿತು. ಅಲ್ಲಿಂದ ಈವರೆಗೂ ನೆಮ್ಮದಿಯೇ ಇಲ್ಲವಾಗಿದೆ. ಅನಗತ್ಯವಾಗಿ ಪತ್ನಿ ಸರಸ್ವತಿ ಕಿರುಕುಳ ನೀಡುತ್ತಿದ್ದಳು. ಬೇರೆ ಯುವಕನೊಂದಿಗೆ ಓಡಿಹೋದ ಆಕೆ ನನ್ನ ವಿರುದ್ಧ ಕಿರುಕುಳದ ಸುಳ್ಳು ಆರೋಪ ಮಾಡುತ್ತಿದ್ದಾಳೆ. ಪತ್ನಿ ಸರಸ್ವತಿ ಹಾಗೂ ಆಕೆಯ ಸಂಬಂಧಿಗಳಿಂದ ತಮಗೆ ಜೀವ ಬೆದರಿಕೆ ಇತ್ತು. ನಾನು ಯಾವುದೇ ತಪ್ಪು ಮಾಡಿಲ್ಲ. ನನಗೆ ಮಾನ ಮರ್ಯಾದೆ ಮುಖ್ಯ. ಆ ಕಾರಣದಿಂದ ಮರ್ಯಾದೆ ಉಳಿಸಿಕೊಳ್ಳಲು ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆಂದು ಹರೀಶ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾನೆ ಎನ್ನಲಾಗಿದೆ.
ಪತ್ನಿ ಪೋಷಕರು, ಚಿಕ್ಕಪ್ಪನಿಗೆ ಶಿಕ್ಷೆಯಾಗಲಿ:ತಾನು ಪ್ರೀತಿಸಿದವನೊಂದಿಗೆ ಓಡಿಹೋದರೂ ಸರಸ್ವತಿ ನನಗೆ ಕಿರುಕುಳ ನೀಡುತ್ತಿದ್ದಳು. ಪತ್ನಿ ಸರಸ್ವತಿ, ಆಕೆಯ ಪೋಷಕರು, ಚಿಕ್ಕಪ್ಪನಿಗೆ ಕಠಿಣ ಶಿಕ್ಷೆಯಾಗಬೇಕು. ಪತ್ನಿ ಮನೆಯವರ ಕಿರುಕುಳದಿಂದಲೇ ನನ್ನ ಅಪ್ಪ-ಅಮ್ಮ ಮನೆ ಬಿಡುವ ಯೋಚನೆ ಮಾಡಿದ್ದರು ಎಂದು ಹರೀಶ ಡೆತ್‌ನೋಟ್‌ನಲ್ಲಿ ವಿವರಿಸಿದ್ದಾರೆ. ಹರೀಶನ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟುವಂತಿತ್ತು.
ಸರಸ್ವತಿ ಸೋದರ ಮಾವ ಸಹ ಆತ್ಮಹತ್ಯೆ:ಹರೀಶನ ಆತ್ಮಹತ್ಯೆ ಬೆನ್ನಲ್ಲೇ ಸರಸ್ವತಿಯ ಮದುವೆ ಮಾಡಿಸಿದ್ದ ಸೋದರ ಮಾವ ರುದ್ರೇಶ ಸಹ ದಾವಣಗೆರೆಯ ಆನೆಕೊಂಡದ ತಮ್ಮ ಮನೆಯಲ್ಲಿ ವಿಷ ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣವೇ ರುದ್ರೇಶರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಹರೀಶನ ಜತೆ ಮದುವೆ ಮಾಡಿಸಿದ್ದರೂ, 4 ದಿನದ ಹಿಂದಷ್ಟೇ ಸರಸ್ವತಿಯು ಕುಮಾರ ಎಂಬಾತನ ಜೊತೆ ಓಡಿಹೋಗಿದ್ದರಿಂದ ರುದ್ರೇಶ್ ತೀವ್ರವಾಗಿ ನೊಂದಿದ್ದರು. ಇದಾದ ನಂತರ ಹರೀಶ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕೇಳಿ ರುದ್ರೇಶ ಸಹ ವಿಷ ಸೇವಿಸಿ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹರೀಶನ ಆತ್ಮಹತ್ಯೆ ಪ್ರಕರಣ, ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಆನೆಕೊಂಡ ರುದ್ರೇಶ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.- - -
(ಬಾಕ್ಸ್)* ಸಿಸಿ ಕ್ಯಾಮೆರಾದಲ್ಲಿ ಎಸ್ಕೇಪ್ ದೃಶ್ಯ ಸೆರೆ
- ಬಸವ ಧರ್ಮದ ಪ್ರಕಾರ ನನ್ನ ಅಂತ್ಯಕ್ರಿಯೆ ನೆರವೇರಿಸಿ ಎಂದು ಡೆತ್ ನೋಟ್- ಪತ್ನಿ, ಆಕೆ ಪಾಲಕರು, ಕುಟುಂಬ, ಪ್ರೇಮಿ ವಿರುದ್ಧ ಮೃತ ಹರೀಶ್ ಆರೋಪ
ಹರೀಶನ ಪತ್ನಿ ಸರಸ್ವತಿ ತನ್ನ ಪ್ರೇಮಿ ಕುಮಾರನ ಜೊತೆ ಕಾರಿನಲ್ಲಿ ಎಸ್ಕೇಪ್ ಆಗುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಕುಮಾರ ಪ್ರೇಯಸಿ ಸರಸ್ವತಿಯ ತಂಟೆಗೆ ಇನ್ನು ಬರಬೇಡ ಎಂದು ಪತಿ ಹರೀಶನಿಗೆ ಬೆದರಿಕೆ ಸಹ ಹಾಕಿದ್ದ. ಬೆದರಿಕೆ ಹಾಕಿದ್ದರಿಂದ ಹರೀಶ ದಿಕ್ಕೇ ತೋಚದಂತಾಗಿದ್ದ. ಈ ಘಟನೆಗಳಿಂದ ನೊಂದ ಹರೀಶ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಕುಟುಂಬಸ್ಥರು ದೂರಿದ್ದಾರೆ.ತನ್ನ ಸಾವಿಗೆ ಪತ್ನಿ, ಅತ್ತೆ, ಮಾವ, ಆಕೆಯ ಸಂಬಂಧಿಗಳು ಹಾಗೂ ಪತ್ನಿಯನ್ನು ಕರೆದೊಯ್ದ ಯುವಕ ಕುಮಾರನೇ ಕಾರಣ ಎಂಬುದಾಗಿ ಹರೀಶ ಡೆತ್ ನೋಟ್‌ನಲ್ಲಿ ಬರೆದಿಟ್ಟಿದ್ದಾನೆ. ಅಲ್ಲದೇ, ತನ್ನ ಅಂತ್ಯ ಸಂಸ್ಕಾರವನ್ನು ಬಸವ ಧರ್ಮ ಪ್ರಕಾರವಾಗಿ ನೆರವೇರಿಸುವಂತೆ ಕುಟುಂಬ ವರ್ಗಕ್ಕೆ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿ ಹರೀಶ ಮನವಿ ಮಾಡಿದ್ದಾನೆ.
- - --27ಕೆಡಿವಿಜಿ8: ಹರೀಶ, ರುದ್ರೇಶ
(ಮೃತರು)