ಕನ್ನಡಪ್ರಭ ವಾರ್ತೆ ಹುಮನಾಬಾದ್
ಸೋಮವಾರ ಸಾಯಂಕಾಲ ದೇವಸ್ಥಾನದಿಂದ ಹೊರಟ ಪಲ್ಲಕಿ ಮೆರವಣಿಗೆ ಪಟ್ಟಣದ ಪ್ರಮುಖ ಮಾರ್ಗಗಳ ಮೂಲಕ ಬೆಳಗಿನ ಜಾವ ಥೇರ್ ಮೈದಾನಕ್ಕೆ ತಲುಪಿತು. ಬಳಿಕ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿದ ರಥ ನೋಡುಗರ ಕಣ್ಮನ ಸೆಳೆಯುವಂತಿತ್ತು ಸಿಂಗಾರಗೊಂಡಿದ್ದ ತನ್ನದೇ ಆದ ವೈಶಿಷ್ಟ್ಯ, ಪರಂಪರೆ ಹೊಂದಿರುವ ಲೋಹದ ರಥದಲ್ಲಿ ಹಿರೇಮಠ ಸಂಸ್ಥಾನ ಪೀಠಾಧಿಪತಿ ವೀರ ರೇಣುಕ ಗಂಗಾಧರ ಶಿವಾಚಾರ್ಯ ಆಸೀನರಾದ ಬಳಿಕ ರಥದ ಮುಂಭಾಗ ಇಡಲಾದ ಬಲಿಹರಣದ ನಂತರ, ಚಳಿಯಲ್ಲೂ ಕದಲದೇ ನಿಂತ ಲಕ್ಷಾಂತರ ಭಕ್ತರು ಹಳೇ ತಹಸೀಲ್ ಕಚೇರಿಯವರೆಗೆ ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆಯೇ ಭಕ್ತರು ರಥವನ್ನು ಎಳೆಯುವ ಮೂಲಕ ಬಾಳೆ ಹಣ್ಣನ್ನು, ಕಲ್ಲು ಸಕ್ಕರೆ, ಖಾರಿಕ, ನಾಣ್ಯಗಳನ್ನು ರಥದ ಕಳಸಕ್ಕೆ ಎಸೆದು ತಮ್ಮ ಹರಕೆಯನ್ನು ಸಮರ್ಪಿಸಿದರು.
ಅದಕ್ಕೂ ಮುನ್ನ ವಿವಿಧ ರಾಜ್ಯದಿಂದ ಆಗಮಿಸಿದ ಭಕ್ತರಿಗೆ ಮನೋರಂಜನೆಗಾಗಿ ಮದ್ದು ಸುಡುವ ಕಾರ್ಯಕ್ರಮ ವಿಶೇಷವಾಗಿತ್ತು. ವೀರಗಾಸೆ, ಡೊಳ್ಳು, ನಂದಿ ಕೋಲು, ಬ್ರಾಸ್ ಬ್ಯಾಂಡ್, ಕುದರೆ ಕುಣಿತ, ಬೀಳಗಿಯ ಢೋಲು, ಬೊಂಬೆ ಕುಣಿತ, ಕರಡಿ ಮಜಲು ವಾದ್ಯ, ಹಲಗೆ ಸೇರಿದಂತೆ ಜಾನಪದ ವಾದ್ಯ ತಂಡಗಳ ಕಲಾ ತಂಡ ಆಕರ್ಷಕ ಪ್ರದರ್ಶನಗಳು ರಥೋತ್ಸವಕ್ಕೆ ಮೆರಗು ನೀಡಿದವು. ಸ್ಥಳೀಯರು ಸೇರಿದಂತೆ ಅನೇಕ ಭಕ್ತರು ಸುತ್ತ ಮುತ್ತಲಿನ ಕಟ್ಟಡಗಳನ್ನು ಏರಿ ರಥೋತ್ಸವ ವೀಕ್ಷಿಸಿದರು.ರಥೋತ್ಸವಕ್ಕೆ ಬಿಗಿ ಪೊಲೀಸ್ ಬಂದೊಬಸ್ತ ಮಾಡಲಾಗಿತ್ತು. ಥೇರ್ ಮೈದಾನ, ದೇವಸ್ಥಾನ ಮುಂಭಾಗ ಹಾಗೂ ಪ್ರಮುಖ ವೃತ್ತಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಜ.10ರಂದು ಪಟ್ಟಣದ ಮುತ್ತೈದಿಯರಿಂದ ವೀರಭದ್ರೇಶ್ವರ ದೇವರಿಗೆ ಎಣ್ಣೆ ಹಚ್ಚುವ ಕಾರ್ಯಕ್ರಮದೊಂದಿಗೆ ಜಾತ್ರೆ ಪ್ರಾರಂಭಗೊಂಡಿತ್ತು.
ಜ.26 ರಂದು ಅಗ್ನಿ ಕುಂಡ ಪೂಜೆ, 27 ರಂದು ಕೊನೆಯ ಪಲ್ಲಕ್ಕಿ ಛತ್ರಪತಿ ಶಿವಾಜಿ ವೃತ್ತದ ಮೂಲಕ ತೆರಳಿ ಅಲ್ಲಿನ ಭಕ್ತರಿಗೆ ಶಾಲು ಹೊದಿಸಲು ಹಾಗೂ ದರ್ಶನ ಒದಗಿಸಲಾಯಿತು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರಣ್ಣ ಪಾಟೀಲ್, ಮಾಜಿ ಸಚಿವ ರಾಜಶೇಖರ ಪಾಟೀಲ್, ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್, ಭೀಮರಾವ ಪಾಟೀಲ್, ಮಲ್ಲಿಕಾರ್ಜುನ ಮಾಳಶಟ್ಟಿ, ಅಭಿಷೇಕ ಪಾಟೀಲ್, ರೇವಣಸಿದ್ದಪ್ಪ ಪಾಟೀಲ, ದತ್ತಕುಮಾರ ಚಿದ್ರಿ, ಮುಜರಾಯಿ ಇಲಾಖೆ ಅಧಿಕಾರಿ ತಹಶೀಲ್ದಾರ್ ಅಂಜುಮ್ ತಬಸ್ಸುಮ್ ಸೇರಿದಂತೆ ಅನೇಕ ಭಕ್ತರು ಇದ್ದರು.