ಕಾಡಂಚಿನ ಕೃಷಿ ಜಮೀನಿಗೆ ವನ್ಯಪ್ರಾಣಿ ಉಪಟಳ

KannadaprabhaNewsNetwork |  
Published : Aug 17, 2025, 02:35 AM ISTUpdated : Aug 17, 2025, 02:44 AM IST
16ಎಚ್.ಎಲ್.ವೈ-2: ತಾಲೂಕಿನ ಕಾಡಂಚಿನ ಗ್ರಾಮಗಳಾದ ಹಂದಲಿ ಹಾಗೂ ಕುಮ್ಕಾನಟ್ಟಿಯ ಕೃಷಿ ಜಮೀನಿಗಳಿಗೆ ಲಗ್ಗೆಯಿಟ್ಟ ಹಂದಿಗಳ ದಾಳಿಗೆ ಮೆಕ್ಕೆಜೋಳ ನಾಶವಾಗಿದೆ. | Kannada Prabha

ಸಾರಾಂಶ

ಬಹುತೇಕ ಕಾಡಂಚಿನ ಕೃಷಿ ಜಮೀನಿಗಳಿಗೆ ವನ್ಯಜೀವಿಗಳ ಹಾವಳಿ ತೀರಾ ಹೆಚ್ಚಾಗುತ್ತಿದೆ.

ಹಳಿಯಾಳ: ತಾಲೂಕಿನ ಬಹುತೇಕ ಕಾಡಂಚಿನ ಕೃಷಿ ಜಮೀನಿಗಳಿಗೆ ವನ್ಯಜೀವಿಗಳ ಹಾವಳಿ ತೀರಾ ಹೆಚ್ಚಾಗುತ್ತಿದೆ. ವನ್ಯಜೀವಿಗಳ ಕಾಟದಿಂದ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದಾರೆ.

ಸದ್ಯ ಹಂದಲಿ, ಕುಮ್ಕಾನಟ್ಟಿ, ಗಡಿಯಾಳ ಗ್ರಾಮಗಳ ಕೃಷಿ ಜಮೀನಿನಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗಿರುವುದು ಕಂಡು ಬಂದಿದೆ. ಕಾಡುಹಂದಿಗಳು ಹಿಂಡು ಹಿಂಡಾಗಿ ಬಂದು ನಡೆಸುತ್ತಿರುವ ದಾಳಿಗೆ ಮೆಕ್ಕೆಜೋಳ, ಕಬ್ಬು ಬೆಳೆ ನಾಶವಾಗುತ್ತಿದೆ. ಇದರಿಂದ ಲಕ್ಷಾಂತರ ನಷ್ಟವಾಗಿದೆ ಎಂದು ಸಂತ್ರಸ್ತ ರೈತರು ನೋವಿನಿಂದ ಅಳಲು ತೋಡಿಕೊಳ್ಳುತ್ತಿದ್ದಾರೆ. ಪ್ರಸಕ್ತ ಹಂಗಾಮಿನಲ್ಲಿ ಮಳೆಯ ಕೊರತೆಯಿಂದಾಗಿ ಈ ಬಾರಿ ಬೆಳೆಯು ಕೈಗೆಟುಕುವ ಆತಂಕದಲ್ಲಿರುವ ರೈತರಿಗೆ ಈಗ ವನ್ಯಪ್ರಾಣಿಗಳ ದಾಳಿಯು ನೋವಿನ ಮೇಲೆ ಬರೆ ಎಳೆದಂತಾಗಿದೆ.

ಸಾಲ ಮಾಡಿ ಬೆಳೆಯುವ ಬೆಳೆ ಕಾಡು ಪ್ರಾಣಿಗಳ ಪಾಲಾಗುತ್ತಿದೆ. ಅರಣ್ಯ ಇಲಾಖೆಯವರು ಕಾಡಂಚಿನ ಸುತ್ತ ರಕ್ಷಣಾ ಬೇಲಿಗಳನ್ನು ಹಾಕಿ ಕಾಡುಪ್ರಾಣಿಗಳು ಹೊಲಗದ್ದೆಗಳಿಗೆ ಬಾರದಂತೆ ತಡೆಯಬೇಕು ಎಂದು ಭೂಪತಿ ಬಂಗಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರಮಪಟ್ಟು ಬೆಳೆಸಿದ ಮೆಕ್ಕೆಜೋಳ, ಕಬ್ಬನ್ನು ಹಂದಿಗಳ ಹಿಂಡು ಬಂದು ಹಾಳು ಮಾಡುತ್ತಿದೆ. ರಾತ್ರಿ ಪೂರ್ತಿ ಹೊಲದಲ್ಲಿಯೇ ಇರಬೇಕಾದ ಪರಿಸ್ಥಿತಿ ಬಂದಿದೆ ಎಂದು ಹಂದಲಿ ಗ್ರಾಮದ ಸಂತೃಸ್ಥ ರೈತ ಮನೋಜ ಗುಂಡುಪ್ಕರ ಅಳಲು ತೋಡಿಕೊಂಡಿದ್ದಾರೆ.

ತಾಲೂಕಿನಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯೇ ಆಗಲಿಲ್ಲ. ಹೀಗಿರುವಾಗ ಬೆಳೆದು ಬಂದ ಬೆಳೆಯು ಕಾಡು ಪ್ರಾಣಿಗಳ ದಾಳಿಗೆ ತುತ್ತಾಗುತ್ತಿರುವುದು ರೈತ ವರ್ಗವನ್ನು ಚಿಂತೆಗೀಡು ಮಾಡಿದೆ.

ಕಾಡು ಪ್ರಾಣಿಗಳಿಂದ ಬೆಳೆ ಹಾಳಾಗಿದ್ದರೆ ರೈತರು ಅರ್ಜಿ ಸಲ್ಲಿಸಬೇಕು. ಆದರೆ ಅದು ಅತಿಕ್ರಮಣ ಜಮೀನು ಆಗಬಾರದು. ಪಹಣಿ ಪತ್ರ ಹೊಂದಿರುವ ಕೃಷಿ ಭೂಮಿಯಲ್ಲಿ ಬೆಳೆ ನಷ್ಟ ಉಂಟಾದರೆ ಅರಣ್ಯ ಇಲಾಖೆಯು ಅರ್ಜಿಯನ್ನು ಪರಿಶೀಲಿಸಿ ಪರಿಹಾರ ನೀಡಲಿದೆ ಎನ್ನುತ್ತಾರೆ ಹಳಿಯಾಳ ವಲಯ ಅರಣ್ಯಾಧಿಕಾರಿ ಬಸವರಾಜ್ ಎಂ.

PREV

Recommended Stories

ಬೆಳಗಾವಿಯಲ್ಲಿ ಕತ್ತಿ ವರ್ಸಸ್ ಜಾರಕಿಹೊಳಿ ಡಿಸಿಸಿ ಸಮರ
₹150 ಕೋಟಿ ದೋಚಿದ್ದ ಸೈಬರ್‌ ವಂಚಕ ದಾವಣಗೆರೆಯಲ್ಲಿ ಸೆರೆ