ಬ್ಯಾಡಗಿ ಸೇರಿದಂತೆ ಸುತ್ತಮುತ್ತಲಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಜಮೀನಿನಲ್ಲಿ ಕಾಡುಹಂದಿಗಳು ಸೇರಿದಂತೆ ಕೆಲ ಪ್ರಾಣಿಗಳು ಬೆಳೆ ಹಾಗೂ ತೋಟಗಳಿಗೆ ಹಾನಿಯನ್ನುಂಟು ಮಾಡುತ್ತಿವೆ.
ಬ್ಯಾಡಗಿ: ಕಾಡುಹಂದಿಗಳು ಗೋವಿನಜೋಳ ಹೊಲಗಳ ಮೇಲೆ ದಾಳಿ ನಡೆಸಿದ್ದು, ಅಪಾರ ಬೆಳೆಹಾನಿಯಾಗಿದ್ದು, ಪ್ರತಿ ಎಕರೆಗೆ ₹25 ಸಾವಿರ ಪರಿಹಾರ ಕೊಡಿಸುವಂತೆ ಆಗ್ರಹಿಸಿ ಪಟ್ಟಣದ ಕೆಲ ರೈತರು ತಾಲೂಕು ಪಂಚಾಯಿತಿ ಸಭಾಂಗಣದ ಪ್ರಗತಿ ಪರಿಶೀಲನಾ ಸಭೆಯ ನಡೆಯುತ್ತಿರುವ ಸ್ಥಳಕ್ಕೆ ಬಂದು ಪ್ರತಿಭಟನೆ ನಡೆಸಿದರು.ಈ ವೇಳೆ ಮಾತನಾಡಿದ ಶಿವಕುಮಾರ ಕಲ್ಲಾಪುರ ಬ್ಯಾಡಗಿ ಸೇರಿದಂತೆ ಸುತ್ತ ಮುತ್ತಲಿನ ಅರಣ್ಯ ಪ್ರದೇಶಕ್ಕೆ ಹೊಂದಿ ಕೊಂಡ ಜಮೀನಿನಲ್ಲಿ ಕಾಡುಹಂದಿಗಳು ಸೇರಿದಂತೆ ಕೆಲ ಪ್ರಾಣಿಗಳು ಬೆಳೆ ಹಾಗೂ ತೋಟಗಳಿಗೆ ಹಾನಿಯನ್ನುಂಟು ಮಾಡುತ್ತಿವೆ. ಈ ಕುರಿತು ಕಳೆದ 2 ವರ್ಷಗಳಿಂದ ಅರಣ್ಯ ಪ್ರದೇಶದ ಸುತ್ತಲೂ ಬೇಲಿಯನ್ನು ಅಳವಡಿಸಿ, ಇಲ್ಲವೆ ಕಾಲುವೆ ತೆಗೆಯಿರಿ ಎಂದು ಒತ್ತಾಯಿಸಿದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದರು.
ಎಕರೆಗೆ ಹತ್ತಾರು ಸಾವಿರ ರು. ಖರ್ಚು ಮಾಡಿ ಬಿತ್ತಿದ ಬೆಳೆಯೂ ಇಲ್ಲ. ಖರ್ಚಾದ ಹಣವೂ ಇಲ್ಲ ಎನ್ನುವಂತಾಗಿದೆ. ರೈತರು ಅತಿವೃಷ್ಟಿಯ ಮಧ್ಯೆ ಬಿತ್ತಿದ ಬೆಳೆಯು ಬಾರದಂತಾಗಿ ಚಿಂತಾಕ್ರಾಂತರಾಗಿ ಮುಂದೇನು? ಎಂಬುದು ತಿಳಿಯದಂತಾಗಿದೆ. ಈ ಮಧ್ಯೆ ಕಾಡುಪ್ರಾಣಿಗಳ ಕಾಟದಿಂದ ಇನ್ನಷ್ಟು ಸಂಕಟ ಪಡುವಂತಾಗಿದೆ. ಈ ಕುರಿತು ಹಲವು ಬಾರಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನ್ಯಾಯ ಸಿಗದಿದ್ದಲ್ಲಿ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.ಕೃಷಿಕ ಈಶ್ವರ ಮಠದ ಮಾತನಾಡಿ, ಅರಣ್ಯ ಸುತ್ತಲೂ ನಮ್ಮ ಜಮೀನಿದ್ದು, ಕಾಡುಪ್ರಾಣಿಗಳು, ಹಕ್ಕಿ ಪಕ್ಷಿಗಳು, ಮೊಲ, ಚಿರತೆ, ನರಿಗಳ ಕಾಟಕ್ಕೆ ರೈತ ಜೀವನ ಬೇಸರವಾಗಿದೆ. ಬಿತ್ತನೆ ಬೀಜ, ಗೊಬ್ಬರ ಸಾಲ ಮಾಡಿ ಬೀಜ ಬಿತ್ತಿದ್ದು, ಹೊಲಕ್ಕೆ ಹೋದರೆ ಸಂಕಟವಾಗುತ್ತಿದೆ. ಕಾಡುಹಂದಿಗಳು ಜಮೀನು ಹಾಳು ಮಾಡಿವೆ. ಈ ಕುರಿತು ಅರಣ್ಯಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೂ ನಮಗೆ ಮೇಲಧಿಕಾರಿಗಳಿಂದ ಪರಿಹಾರಕ್ಕೆ ಆದೇಶ ಬಂದಿಲ್ಲ. ನಾವು ಯಾವುದೇ ನಿರ್ಧಾರ ಕೈಗೊಳ್ಳಲು ಬರುವುದಿಲ್ಲವೆಂದು ವಲಯ ಅರಣ್ಯಾಧಿಕಾರಿಗಳು ಕೈಚೆಲ್ಲುತ್ತಿದ್ದಾರೆ. ಹೀಗಾದ್ರೆ ರೈತರ ಗತಿಯೇನು? 2 ವರ್ಷಗಳಿಂದ ಕಾಡುಪ್ರಾಣಿಗಳು ಹಾನಿ ಮಾಡುತ್ತಿದ್ದು, ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.
ಅರಣ್ಯ ಇಲಾಖೆಯಲ್ಲಿ ಪರಿಹಾರ ನೀಡಲು ಅನುದಾನವಿದ್ದರೂ ಅಧಿಕಾರಿಗಳು ಜವಾಬ್ದಾರಿ ಕೈಗೊತ್ತಿಲ್ಲವೆಂದು ಆರೋಪಿಸಿದರು. ಅರಣ್ಯ ಇಲಾಖೆ ಪರಿಹಾರ ವಿತರಿಸಿ, ಇಲ್ಲವೆ ಪ್ರತಿವರ್ಷ ನಮ್ಮ ಹೊಲ ಕಾಡುಪ್ರಾಣಿಗಳಿಗೆ ಬಿಟ್ಟು ಕೊಡುತ್ತೇವೆ. ಎಕರೆಗೆ ₹25 ಸಾವಿರ ಕಾಯಂ ಪರಿಹಾರ ಘೋಷಿಸಿ ಎಂದು ಆಗ್ರಹಿಸಿದರು.
ಘಟನಾ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ಚಮನಲಿ ಪರಿಹಾರಕ್ಕೆ ಅರ್ಜಿ ಕೊಡಿ. ಮೇಲಧಿಕಾರಿಗಳಿಗೆ ಕಳಿಸಿ ಅವರ ನಿರ್ದೇಶನದಂತೆ ರೈತರಿಗೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈ ಬಿಟ್ಟರು.
ಈ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಮಲ್ಲಿಕಾರ್ಜುನ, ವ್ಯವಸ್ಥಾಪಕ ಪ್ರಕಾಶ ಹಿರೇಮಠ, ಚನ್ನಪ್ಪ ಬಣಕಾರ, ನಿಂಗನಗೌಡ್ರ ಪಾಟೀಲ, ಸೋಮಣ್ಣ ಕೊಪ್ಪದ, ಅಶೋಕ ಬಣಕಾರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.