ಚನ್ನರಾಯಪಟ್ಟಣದಲ್ಲಿ ಮಹಿಳೆ ಮೇಲೆ ಕಾಡುಕೋಣ ದಾಳಿ

KannadaprabhaNewsNetwork |  
Published : Oct 12, 2025, 01:00 AM IST
11ಎಚ್ಎಸ್ಎನ್13ಎ : ದಾಳಿಯಲ್ಲಿ ಗಾಯಗೊಂಡ ಮಹಿಳೆಗೆ ಚಿಕಿತ್ಸೆ ನೀಡುತ್ತಿರುವುದು. | Kannada Prabha

ಸಾರಾಂಶ

ವಿದ್ಯಾನಗರದಲ್ಲಿ ಕಾಣಿಸಿಕೊಂಡ ಕಾಡುಕೋಣ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. 54 ವರ್ಷದ ಶಾಂತಮ್ಮ ಗಂಭೀರವಾಗಿ ಗಾಯಗೊಂಡ ಮಹಿಳೆಯಾಗಿದ್ದು, ಶನಿವಾರ ಬೆಳಗ್ಗೆ 8 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ಶಾಂತಮ್ಮ ಎಂದಿನಂತೆ ಹಂದಿ ಮೇಯಿಸಲು ಬಂದಿದ್ದರು. ಇದೇ ವೇಳೆ ಹಂದಿಗಳಿರುವ ಜಾಗಕ್ಕೆ ಕಾಡುಕೋಣವೊಂದು ಬಂದಿದೆ. ಆದರೆ ಶಾಂತಮ್ಮ, ಎಮ್ಮೆ ಎಂದು ತಿಳಿದು, ಅದನ್ನು ಓಡಿಸಲು ಮುಂದಾದಾಗ ಆಕೆಯ ಮೇಲೆ ದಾಳಿ ನಡೆಸಿದ್ದು, ದಾಳಿಯಿಂದ ಶಾಂತಮ್ಮ ಅವರ ಎಡಗೈ ಮುರಿದಿದೆ. ಅಲ್ಲದೇ ಜೋರಾಗಿ ನೆಲಕ್ಕೆ ಬಿದ್ದ ಪರಿಣಾಮ ಹೊಟ್ಟೆ ಹಾಗೂ ಕೈ ಕಾಲಿಗೆ ಗಾಯವಾಗಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಮಲೆನಾಡು ಭಾಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಾಡುಕೋಣ(ಕಾಟಿ) ಪಟ್ಟಣದೊಳಗೆ ಕಾಣಿಸಿಕೊಂಡಿದ್ದು, ಜನರು ಭಯಭೀತರಾಗುವಂತಾಯಿತು.

ಪಟ್ಟಣದ ವಿದ್ಯಾನಗರದಲ್ಲಿ ಕಾಣಿಸಿಕೊಂಡ ಕಾಡುಕೋಣ ಮಹಿಳೆಯೊಬ್ಬರ ಮೇಲೆ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. 54 ವರ್ಷದ ಶಾಂತಮ್ಮ ಗಂಭೀರವಾಗಿ ಗಾಯಗೊಂಡ ಮಹಿಳೆಯಾಗಿದ್ದು, ಶನಿವಾರ ಬೆಳಗ್ಗೆ 8 ಗಂಟೆಯ ಸಮಯದಲ್ಲಿ ಘಟನೆ ನಡೆದಿದೆ. ಶಾಂತಮ್ಮ ಎಂದಿನಂತೆ ಹಂದಿ ಮೇಯಿಸಲು ಬಂದಿದ್ದರು. ಇದೇ ವೇಳೆ ಹಂದಿಗಳಿರುವ ಜಾಗಕ್ಕೆ ಕಾಡುಕೋಣವೊಂದು ಬಂದಿದೆ. ಆದರೆ ಶಾಂತಮ್ಮ, ಎಮ್ಮೆ ಎಂದು ತಿಳಿದು, ಅದನ್ನು ಓಡಿಸಲು ಮುಂದಾದಾಗ ಆಕೆಯ ಮೇಲೆ ದಾಳಿ ನಡೆಸಿದ್ದು, ದಾಳಿಯಿಂದ ಶಾಂತಮ್ಮ ಅವರ ಎಡಗೈ ಮುರಿದಿದೆ. ಅಲ್ಲದೇ ಜೋರಾಗಿ ನೆಲಕ್ಕೆ ಬಿದ್ದ ಪರಿಣಾಮ ಹೊಟ್ಟೆ ಹಾಗೂ ಕೈ ಕಾಲಿಗೆ ಗಾಯವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹಾಸನ ಡಿಎಫ್‌ಒ ಸೌರಭ್ ಕುಮಾರ್‌ ಮಾತನಾಡಿ, ಚನ್ನರಾಯಪಟ್ಟಣ ಎಂದರೇ ಬಯಲು ಸೀಮೆ. ಇಲ್ಲಿ ಸಾಮಾನ್ಯವಾಗಿ ಕಾಡುಪ್ರಾಣಿಗಳು ಬರುವುದಿಲ್ಲ. ಈ ಹಿಂದೆ ಶ್ರವಣಬೆಳಗೊಳ, ಉದಯಪುರ, ಬಾಗೂರು, ನುಗ್ಗೇಹಳ್ಳಿ ಭಾಗದಲ್ಲಿ ಚಿರತೆಗಳು ಕಾಣಿಸಿದ್ದವು. ಆದರೆ, ಇದೇ ಮೊದಲ ಬಾರಿಗೆ ಕಾಡುಕೋಣ ಬಂದಿರುವುದನ್ನು ನೋಡಿದರೆ ಬಹುಶಃ ಸಕಲೇಶಪುರ ಅಥವಾ ಚಿಕ್ಕಮಗಳೂರು ಭಾಗದಿಂದ ತನ್ನ ಗುಂಪಿನಿಂದ ತಪ್ಪಿಸಿಕೊಂಡು ಬಂದಿರಬಹುದು. ಸದ್ಯ ಓರ್ವ ಮಹಿಳೆಗೆ ದಾಳಿ ನಡೆದಿದ್ದು, 3 ಬೈಕ್ ಮತ್ತು ಒಂದು ಕಾರಿನ ಮೇಲೆ ದಾಳಿ ನಡೆಸಿದ್ದು, ವಾಹನಗಳನ್ನು ಜಖಂಗೊಳಿಸಿದೆ ಎಂದು ವಿವರಿಸಿದರು. ಸ್ಥಳೀಯ ನಿವಾಸಿ ಭಾರತಿ ಮಾತನಾಡಿ, ಬೆಳಗ್ಗೆ ಎದ್ದು ಹೊರಬಂದಾಗ ಜನರ ಕೂಗಾಟ ಕೇಳುತ್ತಿತ್ತು. ಏನು ಎಂದು ನೋಡಿದಾಗ, ನಮ್ಮ ಮನೆಯ ಪಕ್ಕದಲ್ಲಿಯೇ ಕಾಡುಕೋಣವೊಂದು ನಿಂತಿತ್ತು. ರಾತ್ರಿಯೇ ಪಟ್ಟಣದ ವಿವಿಧೆಡೆ ವಾಹನಗಳ ಮೇಲೆ ಮತ್ತು ಮಹಿಳೆಯ ಮೇಲೆ ದಾಳಿ ನಡೆಸಿದೆ ಎಂದು ಗೊತ್ತಾಯಿತು. ಸದ್ಯ ನಮ್ಮ ಮನೆಯ ಹಿತ್ತಲಿನಲ್ಲಿ ಮಲಗಿದೆ. ಅರಣ್ಯಾಧಿಕಾರಿಗಳು, ಪೊಲೀಸರು ಕ್ರಮ ವಹಿಸಿದ್ದಾರೆ. ದಾಳಿ ನಡೆಸಿದ ಅನತಿ ದೂರದಲ್ಲಿಯೇ ಖಾಸಗಿ ಶಾಲೆಯಿದ್ದು, ಸದ್ಯ ಹೆಚ್ಚಿನ ಪ್ರಾಣಾಪಾಯವಾಗುವುದು ತಪ್ಪಿದೆ ಎಂದರು. ಮುಂದೆ ಯಾವುದೇ ರೀತಿಯ ಮಾನವ-ಪ್ರಾಣಿ ಸಂಘರ್ಷವಾಗದಂತೆ ಅರಣ್ಯಾಧಿಕಾರಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಕಾಡುಕೋಣವನ್ನು ನೋಡಲು ಸುತ್ತಮುತ್ತಲಿನಿಂದ ಜನಸಂದಣಿ ಜಮಾಯಿಸಿದ್ದು, ಅವರನ್ನು ನಿಯಂತ್ರಿಸಲು ಅರಣ್ಯ ಪೊಲೀಸ್ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಕಾಡುಕೋಣವಿರುವ ಜಾಗಕ್ಕೆ ಹೋಗದಂತೆ ೨೦೦ ಮೀಟರ್‌ ಅಂತರದಲ್ಲಿ ಬಿಗಿ ಪೊಲೀಸ್ ಮತ್ತು ಅರಣ್ಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಮೈಸೂರಿನಿಂದ ಅರವಳಿಕೆ ತಜ್ಞರನ್ನು ಆಗಮಿಸಿ ಕಾರ್ಯಾಚರಣೆ ನಡೆಸಿ ಅರಣ್ಯಕ್ಕೆ ಸಾಗಿಸಲಾಯಿತು.

PREV

Recommended Stories

ಋತು ರಜೆ ಕೊಡದಿದ್ದರೆ ಕ್ರಮ : ಲಾಡ್‌
ಪ್ರೇಮಿ ಜೊತೆ ಓಡಿ ಹೋದ ಮಗಳ ತಿಥಿ ಮಾಡಿದ ಅಪ್ಪ