ಕನ್ನಡಪ್ರಭ ವಾರ್ತೆ ಹಲಗೂರು
ಗ್ರಾಮದ ಚಂದ್ರಮ್ಮರಿಗೆ ಸೇರಿದ ಎರಡು ಎಕರೆ ಜಮೀನಿನಲ್ಲಿ ಭತ್ತ, ತೆಂಗು ಬೆಳೆದಿದ್ದು, ಒಳ್ಳೆಯ ಫಸಲು ಬಂದಿತ್ತು. ಸೋಮವಾರ ತಡರಾತ್ರಿ ಕಾಡಾನೆಗಳ ದಾಳಿಯಿಂದ ಫಸಲು ಹಾನಿಗೊಳಗಾಗಿದೆ. ಹತ್ತಕ್ಕೂ ಹೆಚ್ಚು ತೆಂಗಿನ ಸಸಿಗಳು ನಾಶವಾಗಿವೆ.
ಹಾಗೇ ಸಿದ್ದರಾಮಯ್ಯ ಅವರಿಗೆ ಸೇರಿದ 1 ಎಕರೆ ಜಮೀನಿನ ಸುತ್ತ ಅಳವಡಿಸಿದ್ದ ಕಬ್ಬಿಣದ ಗೇಟ್ ಮುರಿದು ಒಳ ನುಗ್ಗಿರುವ ಕಾಡಾನೆಗಳು ರಾಗಿ, ಅವರೆ ಫಸಲನ್ನು ತುಳಿದು ಹಾಳು ಮಾಡಿವೆ. ಮೋಟಾರ್ ಪಂಪ್‌ನ ಸ್ಟಾರ್ಟರ್ ಅನ್ನು ಹಾನಿಗೊಳಿಸಿದೆ.ರೈತ ಮಹಿಳೆ ಚಂದ್ರಮ್ಮ ಮಾತನಾಡಿ, ಕಾಡಾನೆ ದಾಳಿಯಿಂದಾಗಿ ಕೆಲ ದಿನಗಳಲ್ಲಿ ನಮ್ಮ ಕೈ ಸೇರಬೇಕಿದ್ದ ಭತ್ತದ ಫಸಲು ಹಾನಿಯಾಗಿ ಅಪಾರ ನಷ್ಟ ಉಂಟಾಗಿದೆ. ನಷ್ಟಕ್ಕೀಡಾದ ಫಸಲಿಗೆ ಸೂಕ್ತ ಪರಿಹಾರ ನೀಡಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು. ಕಾಡು ಪ್ರಾಣಿಗಳು ಕಾಡಿನಿಂದ ಜನವಸತಿ ಪ್ರದೇಶದತ್ತ ಬರದಂತೆ ತಡೆಗಟ್ಟಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಬ್ಯಾಂಕ್‌ನಲ್ಲಿ ಸಾಲ ಮಾಡಿ ವ್ಯವಸಾಯ ಮಾಡಿದ್ದು, ಭತ್ತ ಮಾರಿ ಸಾಲ ಮರುಪಾವತಿ ಮಾಡಬಹುದು ಎಂದು ಗುರಿ ಇಟ್ಟುಕೊಂಡಿದ್ದೆ. ಆದರೆ, ಕಾಡಾನೆ ದಾಳಿಯಿಂದ ದಿಕ್ಕು ತೋಚದಂತಾಗಿದೆ ಎಂದು ಚಂದ್ರಮ್ಮ ಕಣ್ಣೀರಾದರು.ರೈತ ಸಿದ್ದರಾಮಯ್ಯ ಮಾತನಾಡಿ, ಕಾಡು ಪ್ರಾಣಿಗಳ ದಾಳಿಯಿಂದ ಫಸಲು ರಕ್ಷಿಸಿಕೊಳ್ಳುವ ಜೊತೆಗೆ ನಮ್ಮ ಜೀವ ರಕ್ಷಣೆ ಮಾಡಿಕೊಳ್ಳಬೇಕಾದ ಆತಂಕ ಎದುರಿಸುವಂತಾಗಿದೆ. ದಿನನಿತ್ಯ ಕಾಡು ಪ್ರಾಣಿಗಳಾದ ಜಿಂಕೆ, ಹಂದಿ ದಾಳಿಯಿಂದ ಫಸಲನ್ನು ಉಳಿಸಿಕೊಳ್ಳಲು ರಾತ್ರಿಯಿಡೀ ಜಮೀನಿನಲ್ಲಿ ಉಳಿಯಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ನೋವು ತೋಡಿಕೊಂಡರು.