ಕಾಡಾನೆ ಹಿಂಡು ದಾಳಿ: ಹೊಸಕೋಟೆಯಲ್ಲಿ ವ್ಯಾಪಕ ಬೆಳೆ ಹಾನಿ

KannadaprabhaNewsNetwork |  
Published : Nov 27, 2024, 01:03 AM IST
ಚಿತ್ರ : 26ಎಂಡಿಕೆ2 : ಕಾಡಾನೆಗಳ ಹಾವಳಿಯಿಂದ  ಸೂಫಿ ಹಾಜಿ ಅವರ ತೋಟದಲ್ಲಿ ಅಡಿಕೆ ಬೆಳೆ ನಾಶಗೊಂಡಿರುವುದು. | Kannada Prabha

ಸಾರಾಂಶ

ಬಿಳುಗುಂದ ಗ್ರಾ. ಪಂ. ವ್ಯಾಪ್ತಿಯ ಹೊಸಕೋಟೆ ಗ್ರಾಮದ ಕಾಫಿ ತೋಟಗಳಿಗೆ ಸೋಮವಾರ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು ಬೆಳೆಗಳನ್ನು ಸಂಪೂರ್ಣ ನಾಶ ಮಾಡಿದೆ. ಇದರಿಂದ ಫಸಲಿಗೆ ಬಂದಿದ್ದ ಲಕ್ಷಾಂತರ ರು. ಮೌಲ್ಯದ ಕಾಫಿ, ಅಡಕೆ, ಬಾಳೆ, ತೆಂಗು ಬೆಳೆಗಳು ಕಾಡಾನೆಗಳ ದಾಳಿಗೆ ತುತ್ತಾಗಿದ್ದು, ಬೆಳಗಾರರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ.

ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ

ಬಿಳುಗುಂದ ಗ್ರಾ. ಪಂ. ವ್ಯಾಪ್ತಿಯ ಹೊಸಕೋಟೆ ಗ್ರಾಮದ ಕಾಫಿ ತೋಟಗಳಿಗೆ ಸೋಮವಾರ ರಾತ್ರಿ ನುಗ್ಗಿದ ಕಾಡಾನೆಗಳ ಹಿಂಡು ಬೆಳೆಗಳನ್ನು ಸಂಪೂರ್ಣ ನಾಶ ಮಾಡಿದೆ. ಇದರಿಂದ ಫಸಲಿಗೆ ಬಂದಿದ್ದ ಲಕ್ಷಾಂತರ ರು. ಮೌಲ್ಯದ ಕಾಫಿ, ಅಡಕೆ, ಬಾಳೆ, ತೆಂಗು ಬೆಳೆಗಳು ಕಾಡಾನೆಗಳ ದಾಳಿಗೆ ತುತ್ತಾಗಿದ್ದು, ಬೆಳಗಾರರಿಗೆ ಅಪಾರ ಪ್ರಮಾಣದ ನಷ್ಟವಾಗಿದೆ ಎಂದು ಹೊಸಕೋಟೆ ಗ್ರಾಮದ ಬೆಳೆಗಾರರು ದೂರಿದ್ದಾರೆ.

ಗ್ರಾಮದಂಚಿನ ಕಾಡು ಮತ್ತು ಪಾಳುಬಿಟ್ಟ ಕಾಫಿ ತೋಟಗಳಿಂದ ಬರುತ್ತಿರುವ ಕಾಡಾನೆಗಳು ಈ ಭಾಗದಲ್ಲಿ ರೈತರ ಬೆಳೆಗಳ ಮೇಲೆ ನಿರಂತರ ದಾಳಿ ನಡೆಸುತ್ತಿವೆ. ಇದರಿಂದ ಬೆಳೆಗಾರರು ತೀವ್ರವಾಗಿ ಕಂಗಾಲಾಗಿದ್ದಾರೆ. ಆನೆ ಹಾವಳಿ ತಡೆಗೆ ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯ ಬೆಳಗಾರರು ಆರೋಪಿಸಿದ್ದಾರೆ.

ಒಂದೆಡೆ ಬೆಳಗಾರರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳ ಮೂಲಕ ಹೋರಾಡುತ್ತಿದ್ದರೆ, ಮತ್ತೊಂದೆಡೆ ಕಾಡುಪ್ರಾಣಿಗಳಿಂದ ತಮ್ಮ ಬೆಳೆ ರಕ್ಷಿಸಲು ಪ್ರತಿದಿನ ತಮ್ಮ ಪ್ರಾಣದ ಹಂಗನ್ನು ತೊರೆದು ಕಾವಲು ಕಾಯಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ವರ್ಷವಿಡೀ ಕಷ್ಟಪಟ್ಟು ದುಡಿದ ಫಲವಾಗಿ ದೊರೆಯುವ ವಿವಿಧ ಬೆಳೆಗಳ ಫಸಲನ್ನು ಉಳಿಸಿಕೊಳ್ಳುವುದೇ ಬೆಳೆಗಾರರಿಗೆ ದೊಡ್ಡ ಸವಾಲಾಗಿದೆ. ಇದಕ್ಕೆ ಕಾಡಾನೆಗಳ ನಿರಂತರ ಹಾವಳಿಯೇ ಪ್ರಮುಖ ಕಾರಣ ಎಂದು ಹೊಸಕೋಟೆಯ ತೋಟ ಮಾಲೀಕ ಡಿ. ಎಚ್. ಸೂಫಿ ಹಾಜಿ ಆಪಾದಿಸಿದ್ದಾರೆ.

ನಲವತ್ತೋಕ್ಲು ಸಮೀಪದ ಹೊಸಕೋಟೆ ಮತ್ತು ಬಿಳುಗುಂದ ಗ್ರಾಮ ವ್ಯಾಪ್ತಿಯ ಹಲವು ಪ್ರದೇಶಗಳಲ್ಲಿ ಕಳೆದ ಹಲವು ತಿಂಗಳುಗಳಿಂದ ಕಾಡಾನೆಗಳ ಹಾವಳಿ ಮಿತಿಮೀರಿದೆ. 8-12 ಆನೆಗಳಿರುವ ಹಿಂಡು ಸುತ್ತಮುತ್ತಲಿನ ಪಾಳುಬಿಟ್ಟ ತೋಟಗಳಲ್ಲಿ ಹಗಲಿನಲ್ಲಿ ಬೀಡುಬಿಟ್ಟು ಕತ್ತಲೆಯಾಗುತ್ತಿದ್ದಂತೆ ತೋಟಗಳಿಗೆ ಲಗ್ಗೆ ಇಡುತ್ತಿದೆ. ಇಲ್ಲಿನ ಬೆಳಗಾರರ ವಿವಿಧ ಬೆಳೆಗಳು ಫಸಲಿಗೆ ಬರುತ್ತಿದ್ದಂತೆಯೇ ಕಾಡಾನೆಗಳ ಹಾವಳಿ ಹೆಚ್ಚತೊಡಗುತ್ತದೆ. ರಾತ್ರಿ ಸಮಯದಲ್ಲಿ ಕಾಡಾನೆಗಳಿಗೆ ತೋಟಗಳಲ್ಲಿ ನುಗ್ಗಿ ದಾಳಿ ಮಾಡಿ ಫಸಲನ್ನು ನಾಶ ಮಾಡುತ್ತಿರುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ದೂರಿದ್ದಾರೆ.ಆನೆಗಳು ತೋಟಗಳಿಗೆ ನುಗ್ಗದಂತೆ ಎಷ್ಟೇ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡರೂ ಕಾಡಾನೆಗಳ ಹಾವಳಿ ಮಾತ್ರ ಕಡಿಮೆಯಾಗುತ್ತಿಲ್ಲ. ಕಾಡಾನೆಗಳ ಹಾವಳಿ ದಿನೇ ದಿನೇ ಹೆಚ್ಚುತಿದ್ದರೂ ಇಲ್ಲಿನ ಬೆಳೆಗಾರರ ಸಮಸ್ಯೆಯನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕಳೆದ ಮೂರು ದಿನಗಳಿಂದ ನಿರಂತರವಾಗಿ ಮುಂಜಾನೆ ಸಮಯದಲ್ಲಿ ತಮ್ಮ ತೋಟಕ್ಕೆ ನುಗ್ಗಿರುವ ಕಾಡಾನೆಗಳ ಹಿಂಡು ಫಸಲಿಗೆ ಬಂದ 135ಕ್ಕೂ ಹೆಚ್ಚಿನ ಅಡಕೆ ಮರ ಧ್ವಂಸಗೊಳಿಸಿದೆ. ಮುಖ್ಯವಾಗಿ ಅಡಕೆ, ತೆಂಗು, ಬಾಳೆ ಸೇರಿದಂತೆ ಇತರೆ ಬೆಳೆಗಳನ್ನು ತುಳಿದು ತಿಂದು ನಾಶ ಗೊಳಿಸುವ ಕಾಡಾನೆಗಳ ಈ ದಾಂದಲೆಯನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಕಾಡಾನೆಗಳು ತೋಟದಲ್ಲಿ ಪಸಲನ್ನು ನಾಶಗೊಳಿಸಿದ ದೃಶ್ಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರೆ ದಾಳಿಯ ಗಂಭೀರತೆ ಅರಿವಾಗುತ್ತದೆ. ಆದರೆ ಕಾಡಾನೆಗಳು ಎಷ್ಟೇ ದಾಳಿ ನಡೆಸಿದರೂ ಅರಣ್ಯ ಅಧಿಕಾರಿಗಳು ಇತ್ತ ಸುಳಿಯುತ್ತಿಲ್ಲ ಎಂದು ಸೂಫಿ ಹಾಜಿ ಆರೋಪಿಸಿದ್ಾರೆ.

ಕಾಫಿ ಫಸಲೂ ಮಣ್ಣುಪಾಲು:

ಕಾಡಾನೆಗಳು ಕಾಫಿ ತೋಟಗಳಲ್ಲಿ ದಾಳಿ ನಡೆಸುವುದರಿಂದ ಫಸಲಿರುವ ಕಾಫಿ ಗಿಡದ ರೆಕ್ಕೆಗಳಿಗೆ ತೀವ್ರ ಹಾನಿಯಾಗುತ್ತಿದೆ. ಇದರಿಂದ ಕೊಯ್ಲಿಗೆ ಸಿದ್ಧಗೊಳ್ಳುತ್ತಿರುವ ಕಾಫಿ ನೆಲ ನೆಲಕ್ಕುರುಳುತ್ತಿದೆ. ತೋಟದಲ್ಲಿ ಆನೆಗಳು ಮನಸೋ ಇಚ್ಛೆ ಸಂಚರಿಸುವುದರಿಂದ ಇತ್ತೀಚಿಗೆ ನೆಟ್ಟಿರುವ ವಿವಿಧ ಗಿಡಗಳು ನಾಶಗೊಂಡು ನೆಲಕಚ್ಚಿದೆ. ಕಾಡಾನೆಗಳ ನಿರಂತರ ಹಾವಳಿ ತೋಟ ಕೆಲಸಗಳ ಮೇಲು ಪರಿಣಾಮ ಬೀರಿದ್ದು, ಕಾರ್ಮಿಕರು ಪ್ರಾಣಭಯದಿಂದ ತೋಟ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಇದೆಲ್ಲವೂ ಬೆಳಗಾರರ ಆರ್ಥಿಕ ವ್ಯವಸ್ಥೆಗೆ ತೀವ್ರ ದಕ್ಕೆ ಉಂಟು ಮಾಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟ ಅನುಭವಿಸುತ್ತಿರುವ ಬೆಳೆಗಾರರಿಗೆ ಕೂಡಲೇ ಸೂಕ್ತ ಪರಿಹಾರ ನೀಡಬೇಕು. ಕಾಡಾನೆಗಳ ನಿರಂತರ ಉಪಟಳವನ್ನು ನಿಯಂತ್ರಿಸಲು ಅರಣ್ಯ ಇಲಾಖೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಸೂಫಿ ಹಾಜಿ ಗ್ರಾಮದ ಬೆಳೆಗಾರರ ಪರವಾಗಿ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.

PREV

Recommended Stories

ಗ್ರಾಪಂ ವ್ಯಾಪ್ತಿ ಎಲ್ಲಾ ಆಸ್ತಿ ತೆರಿಗೆಗೆ ನಿಯಮ ಪ್ರಕಟ
ತರಬೇತಿ ನೀಡಿದಾಕ್ಷಣ ಯುವನಿಧಿ ನಿಲ್ಲಲ್ಲ : ಸಿಎಂ