ಮಡಿಕೇರಿ: ಕಳೆದ 10 ದಿನದಲ್ಲಿ ಮೂವರು ಕಾಡಾನೆ ದಾಳಿಗೆ ಮೃತಪಟ್ಟಿದ್ದರೂ ಕೂಡ ಸರ್ಕಾರ ಯಾವುದೇ ಶಾಶ್ವತ ಕ್ರಮ ತೆಗೆದುಕೊಂಡಿಲ್ಲ. ಅಲ್ಲದೆ ಅರಣ್ಯ ಸಚಿವರು ಒಂದು ಬಾರಿಯೂ ಕೊಡಗಿಗೆ ಭೇಟಿ ನೀಡಿಲ್ಲ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿಯಿಂದ ಅರಣ್ಯ ಭವನದಲ್ಲಿ ಶುಕ್ರವಾರ ತೀವ್ರ ಪ್ರತಿಭಟನೆ ನಡೆಸಲಾಯಿತು.
ಹೆದ್ದಾರಿ ತಡೆದು ಆಕ್ರೋಶ: ಅರಣ್ಯ ಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ನಂತರ ಆಕ್ರೋಶಗೊಂಡ ಪ್ರತಿಭಟನಾ ನಿರತರು ರಾಷ್ಟ್ರೀಯ ಹೆದ್ದಾರಿ ೨೭೫ ಅನ್ನು ತಡೆದು ಪ್ರತಿಭಟನೆ ನಡೆಸಿದರು. ಈ ಸಂದರ್ಭ ಸರದಿ ಸಾಲಿನಲ್ಲಿ ವಾಹನಗಳು ನಿಂತಿತ್ತು. ಸುಮಾರು ೨೦ ನಿಮಿಷಗಳ ಕಾಲ ರಸ್ತೆತಡೆ ನಡೆಸಿದ ಪ್ರತಿಭಟನಾ ನಿರತರಿಗೆ ಪೊಲೀಸ್ ಇಲಾಖೆಯಿಂದ ರಾಷ್ಟ್ರೀಯ ಹೆದ್ದಾರಿ ತಡೆದು ಸಾರ್ವಜನಿಕರಿಗೆ ತೊಂದರೆಕೊಡುವಂತಿಲ್ಲ ಎಂಬ ಸಂದೇಶ ರವಾನೆಯಾಗುತ್ತಿದ್ದಂತೆ ಆನೆ ಮಾನವ ಸಂಘರ್ಷ ಕೂಡ ಸಾರ್ವಜನಿಕರಿಗಾಗಿ ಮಾಡಲಾಗುತ್ತಿದೆ. ಹತ್ತಿಕ್ಕುವ ಕೆಲಸ ಮಾಡಬೇಡಿ ಎಂದು ಹೇಳಿದರು. ನಂತರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಠಿ ಆಗಮಿಸಿದ ಹಿನ್ನೆಲೆ ಅವರನ್ನು ಮುತ್ತಿಗೆ ಹಾಕಿ ಕಾನೂನಿಗೆ ಗೌರವ ಕೊಟ್ಟು ನಾವು ಕಾನೂನು ಕೈಗೆತ್ತಿಕೊಂಡಿಲ್ಲ. ಜಾನುವಾರುಗಳ ಸಾವಾಗುತ್ತಿದ್ದರೂ ಯಾವುದೇ ಕ್ರಮವಾಗಿಲ್ಲ. ಅರಣ್ಯ ಇಲಾಖೆ ಏನು ಮಾಡುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು. ಪ್ರತಿಭಟನೆಯಲ್ಲಿ ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯ ಸರ್ಕಾರ ಹಲವಾರು ಸುತ್ತೋಲೆಗಳನ್ನು ಹೊರಡಿಸಿದೆ. ಇದರಲ್ಲಿ ಸಿ ಅ್ಯಂಡ್ ಡಿ ಲ್ಯಾಂಡ್ ವಿಚಾರಕ್ಕೆ ಸಂಬಂಧಿಸಿದಂತೆ ಅರಣ್ಯ ಸಚಿವರಿಗೆ ಯಾವುದೇ ಮಾಹಿತಿ ಇಲ್ಲ. ಆದರೂ ಸುತ್ತೋಲೆಗಳನ್ನು ಹೊರಡಿಸಿ ರೈತರನ್ನು ಬೀದಿಪಾಲು ಮಾಡಲು ಹೊರಟಿದ್ದಾರೆ. ಅರಣ್ಯ ಮಂತ್ರಿ ನಿಮಾನ್ಸ್‌ನಲ್ಲಿ ಇರಬೇಕಿತ್ತು. ಸಿ ಅ್ಯಂಡ್ ಡಿ ಲ್ಯಾಂಡ್ ಅನ್ನು ಅರಣ್ಯ ಮಾಡಬೇಕೆಂದು ಸುತ್ತೋಲೆ ಹೊರಡಿಸಿ ೧೫ ಸಾವಿರ ಕುಟುಂಬಗಳು ಇಂದು ಅತಂತ್ರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಜೂರಿನಲ್ಲಿ ಮರ ಕಳ್ಳತನದಲ್ಲಿ ಸಿಬ್ಬಂದಿಗಳೇ ಭಾಗಿಯಾಗಿದ್ದಾರೆ. ಜಿಲ್ಲೆಯಲ್ಲಿ ಜನ ವಿರೋಧಿ ಅಧಿಕಾರಿಗಳಾಗಿದ್ದಾರೆ ಎಂದು ಆರೋಪಿಸಿದ ಅವರು, ನಾವೇ ನೆಟ್ಟು ಬೆಳೆಸಿದ ಬಳಂಜಿ ಮರಕ್ಕೆ ಯಾರ ಅನುಮತಿ ಬೇಡ. ಆದರೆ, ಸರ್ಕಾರದ ಸುತ್ತೋಲೆ ಪಾಲಿಸಿದರೂ ಇಂದು ಅನುಮತಿ ಕೊಡುತ್ತಿಲ್ಲ ಎಂದು ದೂರಿದ ಅವರು, ಹೊರ ರಾಜ್ಯಗಳಿಂದ ಬಂದ ಅಧಿಕಾರಿಗಳಿಗೆ ಜಿಲ್ಲೆಯ ಬಗ್ಗೆ ಇಲ್ಲಿನ ಅಧಿಕಾರಿಗಳು ಮಾರ್ಗದರ್ಶನ ಮಾಡಬೇಕು. ಇಲ್ಲದಿದಲ್ಲಿ ಅಧಿಕಾರಿಗಳು ಹೋದ ಜಾಗದಲ್ಲಿ ಕಟ್ಟಿ ಹಾಕುವ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಮಲೆನಾಡು ಭಾಗದಲ್ಲಿ ಕಾಡುಪ್ರಾಣಿ ಹಾವಳಿ ಹೆಚ್ಚಾಗುತ್ತಿದೆ. ಆದರೆ ಇಂದು ನಾವುಗಳು ವ್ಯವಸ್ಥೆ ಬಗ್ಗೆ ಯೋಚನೆ ಮಾಡಬೇಕಾಗಿದೆ. ಆರು ತಿಂಗಳೊಳಗೆ ಆನೆ ದಾಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಜಿಲ್ಲೆಯ ಶಾಸಕರು ಹೇಳಿದ್ದರು. ಇದುವರೆಗೆ ಏನು ಕಾರ್ಯಕ್ರಮ ಹಾಕಿದ್ದೀರಿ. ಕಾಡಾನೆ ಹಾವಳಿ ತಡೆಗೆ ರೈಲ್ವೆ ಬ್ಯಾರಿಕೇಡ್ ಬೇಲಿ ಅಳವಡಿಕೆಗೆ ಎಷ್ಟು ಹಣ ವ್ಯಯ ಮಾಡಲಾಗಿದೆ. ಇದುವರೆಗೆ ಎಷ್ಟು ಕಾಮಗಾರಿಯಾಗಿದೆ. ಇನ್ನೆಷ್ಟು ಬಾಕಿಯಿದೆ ಎಂಬ ಮಾಹಿತಿ ನೀಡುವಂತಾಗಬೇಕು ಎಂದು ಆಗ್ರಹಿಸಿದರು. ಬೆಳೆ ಪರಿಹಾರ ಎಲ್ಲರಿಗೂ ಕೊಟ್ಟಿದ್ದೇವೆ ಎಂದು ಹೇಳುತ್ತಾರೆ. ಮಾಹಿತಿ ಕೊಡಿ ಎಂದರೆ ದಾಖಲೆ ನೋಡಬೇಕು ಎನ್ನುತ್ತಾರೆ ಅಧಿಕಾರಿಗಳು. ಜನಪ್ರತಿನಿಧಿಗಳು ಆನೆ ಮಾನವ ಸಂಘರ್ಷಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎನ್ನುತ್ತಾರೆ. ಆದರೆ, ದಾಳಿ ಮುಂದುವರೆಯುತ್ತಿದೆ. ಆನೆ ದಾಳಿಯಿಂದ ಮೃತಪಟ್ಟವರಿಗೆ ಪರಿಹಾರಕ್ಕೆ ೨೦ ಲಕ್ಷ ರು.ಇನ್ನೂ ಬಂದಿಲ್ಲ. ಕೊಡಗಿನ ಜನ ಮುಟ್ಟಾಳರಲ್ಲ. ಇನ್ನಾದರೂ ವಾಸ್ತಾವಾಂಶವನ್ನು ಹೇಳಿ. ಶಾಶ್ವತ ಪರಿಹಾರ ಕಂಡುಕೊಳ್ಳುವಂತಾಬೇಕು ಎಂದು ಆಗ್ರಹಿಸಿದ ಅವರು, ಇಂದು ಮಾನವನ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂದರು. ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕಾಡು ಪ್ರಾಣಿಗಳಿಂದ ದಿನನಿತ್ಯ ಜೀವ ಹಾನಿಯಾಗುತ್ತಿದೆ. ಅರಣ್ಯ ಇಲಾಖೆ ಮತ್ತು ಸರ್ಕಾರಕ್ಕೆ ಇದರ ಬಿಸಿ ಇನ್ನು ತಟ್ಟಿಲ್ಲ. ಬೆಳೆ ಹಾನಿಯಾಗುತ್ತಿದೆ. ಆನೆಗಳು ಪಟ್ಟಣಕ್ಕೆ ಬರುತ್ತಿದೆ. ಆದರೂ ಕ್ರಮ ಆಗುತ್ತಿಲ್ಲ. ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಬುಬೂ ನೀಡುತ್ತಾರೆ. ಅಧಿಕಾರಿಗಳ ಪ್ರಕಾರ ಮತ್ತಷ್ಟು ಪ್ರಾಣ ಹಾನಿ ಸಂಭವಿಸಲಿ ಎಂಬುದು ಇವರ ಉದ್ದೇಶವೇ ಎಂದು ಪ್ರಶ್ನಿಸಿದ ಅವರು, ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯರಾದ ಎಸ್.ಜಿ. ಮೇದಪ್ಪ, ಸುನಿಲ್ ಸುಬ್ರಮಣಿ, ವಿಧಾನ ಪರಿಷತ್ತು ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲೀರ ಚಲನ್, ಮಹೇಶ್ ಜೈನಿ, ಲೋಕೇಶ್, ಉಪಾಧ್ಯಕ್ಷರಾದ ಕುಂಞಂಡ ಅರುಣ್ ಭೀಮಯ್ಯ, ಗುಮ್ಮಟಿರ ಕಿಲನ್ ಗಣಪತಿ, ಜಿಲ್ಲಾ ವಕ್ತಾರ ತಳೂರು ಕಿಶೋರ್ ಕುಮಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಬಿಜೆಪಿ ಎಸ್‌ಟಿ ಮೋರ್ಚಾದ ಜಿಲ್ಲಾಧ್ಯಕ್ಷ ಎಂ.ಎಂ.ಪರಮೇಶ್ವರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಬೆಳೆಗಾರರು ಪಾಲ್ಗೊಂಡಿದ್ದರು.....ಬಾಕ್ಸ್...ಶಾಶ್ವತ ಕ್ರಮಕ್ಕೆ ಮನವಿ!: ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಠಿ, ಆನೆ ಸೆರೆಗೆ ಕ್ರಮ ವಹಿಸಲಾಗುವುದು. ಆನೆ ಮಾನವ ಸಂಘರ್ಷ ಕುರಿತು ಶಾಶ್ವತ ಪರಿಹಾರಕ್ಕೆ ಮನವಿ ಸಲ್ಲಿಸಿದ್ದಾರೆ. ಈ ಹಿನ್ನೆಲೆ ೧೫ ದಿನದೊಳಗೆ ಸಭೆ ನಡೆಸಲಾಗುವುದು. ಇತ್ತೀಚೆಗೆ ಆನೆ ದಾಳಿ ನಡೆದ ಮದೆನಾಡು ಗ್ರಾಮದಲ್ಲಿ ಮೂರು ತಂಡವಿದೆ. ಮೂರು ಕಡೆಯಿಂದ ಮಾನಿಟರ್ ಮಾಡಲಾಗುತ್ತಿದೆ. ಗುಹ್ಯ ಗ್ರಾಮದಲ್ಲಿದ್ದ ಆನೆ ಅಮ್ಮತ್ತಿ ಕಡೆ ಹೋಗಿದೆ. ದುಬಾರೆ ವ್ಯಾಪ್ತಿಯಲ್ಲಿ ಒಂದು ತಂಡ ಕಾರ್ಯನಿರ್ವಹಿಸುತ್ತಿದೆ. ಕುಶಾಲನಗರ ವ್ಯಾಪ್ತಿಯಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿವರಿಸಿದರು.
*೧೨೦ ಕೋಟಿ ರು. ಅನುದಾನದಲ್ಲಿ ಒಂದು ರು. ಕೂಡ ಖರ್ಚು ಮಾಡಿಲ್ಲ. ೧೪೪೪ ಕೋಟಿ ರು. ಖರ್ಚಾಗಿದೆ ಎಂದು ಬಜೆಟ್‌ನಲ್ಲಿ ಹೇಳಿದ್ದಾರೆ. ಹೊಸದಾಗಿ ಒಂದು ಕಂದಕ ತೆಗೆದಿಲ್ಲ. ನಿರ್ಮಾಣ ಮಾಡುವ ಬದಲಾಗಿ ನಿರ್ನಾಮ ಮಾಡಿದ್ದಾರೆ. ಈ ಬಾರಿಯ ಸಿದ್ದರಾಮಯ್ಯ ಬಜೆಟ್ ಬೊಗಳೆ ಬಜೆಟ್ ಆಗಿದೆ. -ಕೆ.ಜಿ. ಬೋಪಯ್ಯ, ಮಾಜಿ ಸ್ಪೀಕರ್ *ಕಾಡಾನೆ ದಾಳಿಯಿಂದ ಹತ್ತು ದಿನದಲ್ಲಿ ಮೂವರು ಮೃತಪಟ್ಟಿದ್ದರೂ ಕೂಡ ಕೊಡಗಿಗೆ ಅರಣ್ಯ ಮಂತ್ರಿ ಈಶ್ವರ್ ಖಂಡ್ರೆ ಭೇಟಿ ಕೊಟಿಲ್ಲ. ಅರಣ್ಯಾಧಿಕಾರಿಗಳು ಎಸಿ ರೂಂನಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಆನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ಅರಣ್ಯಾಧಿಕಾರಿಗಳು ಬೋಗಸ್ ಚೆಕ್ ನೀಡಿದ್ದಾರೆ. -ಸುನಿಲ್ ಸುಬ್ರಮಣಿ, ಮಾಜಿ ಎಂಎಲ್ಸಿ