ಕನ್ನಡಪ್ರಭ ವಾರ್ತೆ ಶಿವಮೊಗ್ಗ
ತಾಲೂಕು ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಕಾಡಾನೆಗಳ ಉಪಟಳಕ್ಕೆ ರೈತರು ಸುಸ್ತಾಗಿದ್ದಾರೆ. ಹೊಲ-ಗದ್ದೆಗಳಿಗೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಮಕ್ಕಳಂತೆ ಸಾಕಿದ ಬೆಳೆಗಳನ್ನು ನಾಶ ಮಾಡುತ್ತಿವೆ. ಇದರ ನಡುವೆ ರೈತರು ಜಮೀನು ಕಡೆ ಹೋಗಲು ಭಯಪಡುವಂತಹ ಸ್ಥಿತಿ ಸೃಷ್ಟಿಯಾಗಿದೆ.ತಾಲೂಕಿನ ಪುರದಾಳು, ಮಲೇಶಂಕರ, ಸಿರಿಗೆರೆ ಸುತ್ತಮುತ್ತಲಿನ ಗ್ರಾಮಗಳ ರೈತರು ಆನೆ ದಾಳಿಯಿಂದ ಬೆಳೆ ಹಾನಿಯಾಗಿದೆ.
ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಪುರದಾಳು ಗ್ರಾಮದಲ್ಲಿ ಹಲವು ತಿಂಗಳುಗಳಿಂದ ಕಾಡಾನೆಗಳ ಹಿಂಡು ಹೊಲ, ತೋಟಗಳಿಗೆ ಲಗ್ಗೆ ಇಟ್ಟು ಭತ್ತ, ಅಡಕೆ, ಬಾಳೆ ಮತ್ತು ಮೆಕ್ಕೆಜೋಳವನ್ನು ನಾಶ ಮಾಡುತ್ತಿವೆ. ಕಳೆದ ಕೆಲವು ದಿನಗಳಿಂದ ಕಾಡಾನೆಗಳು ಗ್ರಾಮಗಳನ್ನು ಪ್ರವೇಶಿಸುತ್ತಿವೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪುರದಾಳು ಸುತ್ತಮುತ್ತ ಹಲವು ಕಡೆ ಕಾಡಾನೆಗಳು ಹೊಲಗಳಿಗೆ ದಾಂಗುಡಿ ಇಟ್ಟು, ಫಸಲಿಗೆ ಬಂದ ಬೆಳೆಯನ್ನು ನಾಶ ಮಾಡುತ್ತಿದ್ದು, ರೈತರು ಲಕ್ಷಾಂತರ ರುಪಾಯಿ ಬೆಳೆ ನಷ್ಟ ಅನುಭವಿಸುವಂತಾಗಿದೆ. ಅಲ್ಲದೇ ಕಳೆದ ಕೆಲ ತಿಂಗಳ ಹಿಂದೆ ಆಲದೇವರ ಹಸೂರಿನಲ್ಲಿ ಹನುಮಂತ ಎಂಬ ಕೂಲಿ ಕಾರ್ಮಿಕ ಆನೆ ದಾಳಿಯಿಂದ ಮೃತಪಟ್ಟಿದ್ದರು. ಸದ್ಯ ಘಟನೆ ಮಾಸುವ ಮುನ್ನವೇ ಕಾಡಾನೆಗಳು ಗ್ರಾಮದೊಳಗೆ ನುಗ್ಗುತ್ತಿವೆ. ಇದರಿಂದ ಜನರು ಜೀವವನ್ನು ಕೈಯಲ್ಲಿ ಹಿಡಿದು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಯವರ ಗಮನದಲ್ಲಿದ್ದರೂ ಕ್ರಮ ಕೈಗೊಳ್ಳದೇ ಮೀನಮೇಷ ಎಣಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಕಾಡಾನೆ ದಾಳಿಯಿಂದ ನಾಶವಾದ ಬೆಳೆ:ಪುರದಾಳು ಗ್ರಾಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರು ಹೆಚ್ಚು ವಾಸಿಸುತ್ತಿದ್ದಾರೆ. ಅಲ್ಪ ಪ್ರಮಾಣದಲ್ಲಿ ಜಮೀನು ಸಾಗುವಳಿ ಮಾಡಿಕೊಂಡು ತೆಂಗು, ಅಡಕೆ, ಭತ್ತ, ಬಾಳೆ, ಜೋಳ, ಕಬ್ಬು ಇತ್ಯಾದಿ ಬೆಳೆಗಳನ್ನು ಬೆಳೆಯುತ್ತ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವಾಗಲೇ ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಡಾನೆಗಳು ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡುತ್ತಿವೆ.
ಕಳೆದ ಕೆಲ ತಿಂಗಳ ಹಿಂದೆ ಕಾಡಾನೆಯೊಂದು ಕೃಷಿ ಕಾರ್ಮಿಕನನ್ನು ತುಳಿದು ಕೊಂದಿತ್ತು. ಅರಣ್ಯ ಇಲಾಖೆಯವರು ಕಾಡಂಚಿನಲ್ಲಿ ಸೋಲಾರ್ ಬೇಲಿ ಮಾಡಿ ಆನೆಗಳು ಊರಿನ ಕಡೆ ಬಾರದಂತೆ ತಡೆಯಬೇಕಿದೆ. ಹಿಂದೆ ತೋಟಗಳಿಗೆ ಮಾತ್ರ ನುಗ್ಗುತ್ತಿದ್ದ ಕಾಡಾನೆಗಳು ಈಗ ಮನೆ ಬಳಿ ಬರುತ್ತಿವೆ. ಆದರೆ ಅರಣ್ಯ ಇಲಾಖೆಯವರು ಕಾಡಾನೆ ಓಡಿಸುವ ಬಗ್ಗೆ ಮಾತನಾಡದೆ ನಮಗೆ ಪ್ರಶ್ನೆ ಮಾಡುತ್ತಿದ್ದಾರೆ. ಕಾಡಾನೆಗಳಿಂದ ನಮಗೆ, ನಮ್ಮ ಬೆಳೆಗಳಿಗೂ ರಕ್ಷಣೆ ನೀಡಿಬೇಕೆಂದು ರೈತರು ಆಗ್ರಹಿಸಿದ್ದಾರೆ.ಕಾಡಾನೆಗಳ ಸೆರೆಗೆ ರೈತರ ಆಗ್ರಹ
ಕಾಡಿನಲ್ಲಿ ಆನೆಗಳ ಸಂತತಿ ಹೆಚ್ಚಾಗಿದೆ. ಅಲ್ಲದೆ ಭದ್ರಾ ಅಭಯಾರಣ್ಯದಿಂದ ಕಾಡಾನೆಗಳು ಬರುತ್ತಿವೆ. ಸೋಲಾರ್ ಬೇಲಿಯ ಕುರಿತು ಪ್ರಸ್ತಾವನೆಯನ್ನು ಕಳೆದ ಎರಡು ತಿಂಗಳ ಹಿಂದೆ ಕಳುಹಿಸಲಾಗಿದೆ. ಅದಕ್ಕೆ ಕೇಂದ್ರ ಸರ್ಕಾರದ ಅನುದಾನ ಬರಬೇಕಾದ ಕಾರಣದಿಂದ ಸ್ವಲ್ಪ ತಡ ಆಗುತ್ತದೆ. ಅನುದಾನ ಬಂದ ತಕ್ಷಣ ನಾವು ಕಾರ್ಯಪ್ರವೃತ್ತರಾಗುತ್ತೇವೆ. ಕಾಡಾನೆ ಓಡಿಸಲು ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿದ್ದು ಅವುಗಳನ್ನು ಅದಷ್ಟು ಬೇಗ ಕಾಡಿಗೆ ಕಳುಹಿಸಲಾಗುವುದು. ಈ ಭಾಗದಲ್ಲಿ ಮೂರು ಹಿಂಡಿನಲ್ಲಿ ಕಾಡಾನೆಗಳಿವೆ. ಒಂದು ಒಂಟಿ ಸಲಗ ಇದೆ. ಉಳಿದ ಎರಡು ಗುಂಪಿನಲ್ಲಿ ಮೂರು ಆನೆಗಳಿವೆ. ಇವುಗಳು ಯಾವಾಗ ಎಲ್ಲೆಲ್ಲಿ ಇರುತ್ತವೆ ಎಂದು ಹೇಳಲು ಆಗುತ್ತಿಲ್ಲ. ಅದಷ್ಟು ಬೇಗ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಭರವಸೆ ನೀಡಿದರು.