ಕನ್ನಡಪ್ರಭ ವಾರ್ತೆ ಬೇಲೂರು ತಾಲೂಕಿನ ಉದೇವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೇಗರ್ಜೆ ಬಳಿಯ ಗುಡ್‌ಬೆಟ್ಟ ಎಸ್ಟೇಟ್ - ಬಾಳೇಗದ್ದೆ ವ್ಯಾಪ್ತಿಗೊಳಪಡುವ ಹಲವಾರು ಜಮೀನುಗಳಿಗೆ ಲಗ್ಗೆಯಿಟ್ಟ ಕಾಡಾನೆಗಳ ಗುಂಪು ಲಕ್ಷಾಂತರ ಮೌಲ್ಯದ ಅಡಿಕೆ, ಕಾಫಿ, ಬಾಳೆ ತುಳಿದು ಹಾಳುಮಾಡಿವೆ.
ರೈತ ವಿಜಯರಾಜು ಮಾತನಾಡಿ, ಕಳೆದ ಹದಿನೈದು ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆಗಳಿಂದ ಅಡಿಕೆ, ಕಾಫಿ ನಾಶವಾಗಿದೆ. ಗುಡ್ಬೆಟ್ಟ ಎಸ್ಟೇಟ್ ೪೦೦ ಎಕರೆ, ಬಾಳೆಗದ್ದೆ ಎಸ್ಟೇಟ್ ೨೦೦ ಎಕರೆ, ಪಕ್ಕದ ಮುತ್ತಣ್ಣನ ಕಾಡು ೩ ಎಕರೆಯ ಪ್ರದೇಶಗಳು ಆನೆಗಳು ವಿಶ್ರಾಂತಿ ಪಡೆಯುವ ಪ್ರಮುಖ ಸ್ಥಳಗಳಾಗಿದೆ. ಈ ಮೂಲಕ ಅಕ್ಕಪಕ್ಕದ ಸಣ್ಣಪುಟ್ಟ ರೈತರ ಜಮೀನಿಗೆ ಕಾಡಾನೆಗಳು ರಾತ್ರಿ ವೇಳೆ ಬಂದು ಬೆಳೆ ನಾಶ ಮಾಡುತ್ತಿರುವುದು ಸಾಮಾನ್ಯವಾಗಿದೆ. ಮಾಧ್ಯಮಗಳು ರೈತನ ಸಮಸ್ಯೆಗಳನ್ನು ಬಿತ್ತರಿಸುವುದರ ಮೂಲಕ ಸರ್ಕಾರದ ಗಮನ ಸೆಳೆದು ಬಡ ರೈತನ ಪರವಾಗಿ ನಿಲ್ಲಬೇಕಾದ ಅನಿವಾರ್ಯತೆಯಿದೆ ಎಂದರು.ಲಕ್ಷಾಂತರ ರು. ಬೆಳೆ ನಷ್ಟಗೊಂಡ ರೈತ ಗಿರೀಶ್ ಮಾತನಾಡಿ, ಅಡಿಕೆ ಗಿಡಗಳನ್ನು ನಾಟಿ ಮಾಡಿ ಐದಾರು ವರ್ಷಗಳು ಕಳೆದಿವೆ. ಹೊಂಬಾಳೆ ಮೂಡುವಂತಹ ಸಮಯದಲ್ಲಿ ಕಾಡಾನೆಗಳು ೧ ಎಕರೆಯಲ್ಲಿದ್ದ ಅಡಿಕೆ ಗಿಡಗಳನ್ನು ಮುರಿದು ಹಾಕಿದೆ. ಹೆಂಡತಿಯ ಒಡವೆಯನ್ನು ಖಾಸಗಿ ಬ್ಯಾಂಕಿನಲ್ಲಿಟ್ಟು ಪಡೆದ ಸಾಲದಿಂದ ಹತ್ತಾರು ಲಕ್ಷ ಖರ್ಚು ಮಾಡಿ ಬೆಳೆದ ಕಾಫಿ, ಅಡಿಕೆ ಗಿಡಗಳನ್ನು ರಾತ್ರಿ ೨೦ಕ್ಕೂ ಹೆಚ್ಚಿನ ಕಾಡಾನೆಗಳು ಬಂದು ನಾಶ ಮಾಡಿದೆ. ಮನೆಯಿಂದ ತೋಟಕ್ಕೆ ಬಂದರೆ ಜೀವಂತವಾಗಿ ಮನೆಗೆ ಹೋಗುತ್ತೇವೆ ಎಂಬ ಭರವಸೆಯಿಲ್ಲದೆ ಬದುಕುತ್ತಿದ್ದು ಕಾಡಾನೆಗಳ ಸಮಸ್ಯೆಯಿಂದ ಮುಕ್ತಿ ಸಿಗಲು ಸರ್ಕಾರದ ವತಿಯಿಂದ ಸೋಲಾರ್ ಬೇಲಿಯನ್ನು ಮಾಡಿಕೊಡಬೇಕು ಅಥವಾ ಕಾಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಬೇಕು ಎಂದು ಆಕ್ರೋಶ ಹೊರಹಾಕಿದರು. ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ತಾಲೂಕು ವಲಯಾರಣ್ಯಾಧಿಕಾರಿ ಹೇಮಂತ್ ಕುಮಾರ್ ಮಾತನಾಡಿ, ಕಡೇಗರ್ಜೆ ಸುತ್ತಮುತ್ತ ಹಲವು ಕಾಡಾನೆಗಳು ಸಂಚರಿಸುತ್ತಿರುವ ಮಾಹಿತಿ ಇದೆ. ಬೆಳೆ ನಷ್ಟಗೊಂಡ ರೈತರಿಗೆ ಇಲಾಖೆಯ ಮಾನದಂಡದ ಪ್ರಕಾರ ಪರಿಹಾರ ನೀಡುತ್ತಿದ್ದೇವೆ. ತಾತ್ಕಾಲಿಕವಾಗಿ ಒಂದೆಡೆ ಇರುವ ಕಾಡಾನೆಗಳನ್ನು ರಾತ್ರಿ ವೇಳೆ ಬೇರೆಡೆಗೆ ಆನೆ ಕಾರ‍್ಯ ಪಡೆ ತಂಡದವರು ಓಡಿಸುತ್ತಾರೆ. ಬೆಳೆ ನಷ್ಟದ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದು ಕಾಡಾನೆ ನಿಯಂತ್ರಣದ ಬಗ್ಗೆ ಚರ್ಚಿಸುತ್ತೇನೆ. ಇಲ್ಲಿಯವರೆಗೆ ೨೧ ಲಕ್ಷ ರು.ಗಳ ಪರಿಹಾರವನ್ನು ರೈತರಿಗೆ ನೀಡಲಾಗಿದೆ ಎಂದರು.
ಈ ವೇಳೆ ಕೆ.ಜೆ.ಸಿದ್ದಪ್ಪ, ರಾಜಪ್ಪ, ಮಂಜಪ್ಪ, ಮಲ್ಲೇಶ,ಕೆ. ಎಂ.ಸಿದ್ದಪ್ಪ,ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.