ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಕಟಾವಿಗೆ ಬಂದಿದ್ದ ಬೆಳೆ ನಾಶ
ಗ್ರಾಮದ ಬಸಪ್ಪ ಎಂಬ ರೈತ ತನ್ನ ಹೊಲದಲ್ಲಿ ಹಾಕಿದ್ದ ಟೊಮೆಟೊ ಇನ್ನೇನು ಕಟಾವಿಗೆ ಬಂದಿದ್ದು,ಕಳೆದ ಸೋಮವಾರ ರಾತ್ರಿ ಐದು ಆನೆಗಳು ದಿಡೀರನೆ ಆಗಮಿಸಿ ಬೆಳೆಯನ್ನು ತುಳಿದು ನಾಶ ಮಾಡಿ ಹೋಗಿದೆ.ಇದರಿಂದ ಬಸಪ್ಪಗೆ ಸುಮಾರು ೫೦ ಸಾವಿರ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಕಳೆದ ಹಲವು ತಿಂಗಳುಗಳಿಂದ ಈ ಭಾಗದಲ್ಲಿ ಕಾಡಾನೆಗಳು ಎಲ್ಲಿಯೂ ಕಾಣಸಿಕೊಳ್ಳದೆ ರೈತರನ್ನು ನೆಮ್ಮದಿಯಾಗಿ ಉಸಿರಾಡುವಂತೆ ಮಾಡಿತ್ತು. ಆನೆಗಳು ಕಾಣಸಿಕೊಳ್ಳದಿದ್ದರೂ ಆಗಾಗ ಕಾಡು ಹಂದಿಗಳು ಮಾತ್ರ ಜಮೀನುಗಳಿಗೆ ನುಗ್ಗಿ ರಾಗಿ, ಭತ್ತದ ಬೆಳೆಗಳನ್ನು ನಾಶ ಮಾಡುತ್ತಿದ್ದವು.ಒಂದು ಹೋದರೆ ಮತ್ತೊಂದು ಬಂತು ಎಂಬಂತಾಗಿದ್ದು ರೈತರು ತಲೆ ಮೇಲೆ ಕೈಹೊತ್ತು ಕೂಳಿತುಕೊಳ್ಳುವಂತಾಗಿದೆ. ಕಾಡುಹಂದಿಗಳ ಕಾಟದ ಜತೆಗೆ ಈಗ ಮತ್ತೆ ಆನೆಗಳ ಕಾಟ ಆರಂಭವಾಗಿದೆ. ತಮಿಳುನಾಡಿನಿಂದ ಆಹಾರಕ್ಕಾಗಿ ಲಗ್ಗೆ ಹಾಕಿವೆ. ಆನೆಗಳು ಕಾಣಿಸಿಕೊಂಡಿರುವುದರಿಂದ ಒಂದು ಕಡೆ ರೈತರಿಗೆ ತಲೆ ಬಿಸಿಯಾಗುವಂತೆ ಮಾಡಿದ್ದರೆ ಮತ್ತೊಂದು ಕಡೆ ಅರಣ್ಯ ಇಲಾಖೆ ಅಧಿಕಾರಿಗಳಿಗೂ ನಿದ್ದೆ ಕೆಡಿಸಿದೆ.ಅಧಿಕಾರಿಗಳ ಕಾರ್ಯಾಚರಣೆ
ಮಂಗಳವಾರ ವಲಯ ಅರಣ್ಯಾಧಿಕಾರಿ ಶ್ರೀಲಕ್ಷ್ಮಿ ನೇತೃತ್ವದಲ್ಲಿ ಸಿಬ್ಬಂದಿ ಆನೆಗಳ ಜಾಡು ಪತ್ತೆ ಮಾಡಿ ಮತ್ತೆ ತಮಿಳುನಾಡಿನತ್ತ ಹಿಮ್ಮಟ್ಟಿಸಲು ಶ್ರಮಿಸುತ್ತಿದ್ದಾರೆ. ಈಗಾಗಲೇ ಆನೆಗಳು ತಮಿಳುನಾಡಿನಿಂದ ರಾಜ್ಯದತ್ತ ಬಾರದಂತೆ ಸುತ್ತಲೂ ಸೋಲಾರ್ ಫೆನ್ಷಿಂಗ್ ಅಳವಡಿಸಲಾಗಿದೆ. ಆದರೂ ಹೇಗೆ ಬಂದವು ಎಂಬುದು ಅರಣ್ಯ ಇಲಾಖೆ ಅಧಿಕಾರಿಗಳನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ.ಆನೆಗಳ ತಡೆಗಟ್ಟಲು ಕಾವಲು
ಮಂಗಳವಾರ ರಾತ್ರಿ ಮತ್ತೆ ಆನೆಗಳು ಗ್ರಾಮಗಳತ್ತ ಬಾರದಂತೆ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಅಲ್ಲದೆ ಇಲಾಖೆ ಗ್ರಾಮಸ್ಥರಿಗೂ ಸಹ ರಾತ್ರಿಯ ವೇಳೆ ಯಾರೂ ಸಹ ಮನೆಗಳಿಂದ ಹೊರಗಡೆ ಹಾಗೂ ತಮ್ಮ ಜಮೀನುಗಳು ಕಡೆ ಬಾರದಂತೆ ಜಾಗೃತಿ ಮೂಡಿಸುತ್ತಿದ್ದಾರೆ.ಬಸಪ್ಪ ಎಂಬುವ ರೈತನ ಭತ್ತ ಬೆಳೆ ನಾಶವಾಗಿದ್ದು ಅದಕ್ಕೆ ಸೂಕ್ತ ಪರಿಹಾರ ಕೊಡಿಸುವ ಭರವಸೆಯನ್ನು ನೀಡಿದ್ದಾರೆ.