ಯರಗೋಳ್ ಡ್ಯಾಂ ಸುತ್ತಮುತ್ತ ಕಾಡಾನೆಗಳ ಹಾವಳಿ

KannadaprabhaNewsNetwork |  
Published : Mar 26, 2025, 01:37 AM IST
25ಕೆಬಿಪಿಟಿ.1.ಬಂಗಾರಪೇಟೆ ತಾಲೂಕಿನ ಯರಗೋಳ್ ಡ್ಯಾಂ ಬಳಿ ಆನೆಗಳ ದಾಳಿಗೆ ರಾಗಿ ಬೆಳೆ ನಾಶವಾಗಿರುವುದು. | Kannada Prabha

ಸಾರಾಂಶ

ಯರಗೋಳ್ ಅಣೆ ಕಟ್ಟು ಬಳಿಯಿರುವ ರಾಮಕೃಷ್ಣಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ರೈತರು ಬೆಳೆದಿರುವ ರಾಗಿ, ಟೊಮೆಟೋ, ತರಕಾರಿ ಬೆಳೆಗಳನ್ನು ರಾತ್ರಿಯ ವೇಳೆ ದಾಳಿ ಮಾಡಿ ಹಿಗ್ಗಾಮುಗ್ಗ ತುಳಿದು ಕೈಗೆ ಬಂದು ತುತ್ತು ಬಾಯಿಗೆ ಬಾರದಂತೆ ಮಾಡಿದೆ. ಆದರೂ ಮಾಲೂರು ಅರಣ್ಯಾಧಿಕಾರಿಗಳು ಮೌನವಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಗಡಿ ಭಾಗದಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದೆ. ಕಳೆದ ವಾರದಿಂದ ಎರಡು ಕಾಡಾನೆಗಳು ಬೀಡುಬಿಟ್ಟಿದ್ದು, ರಾಗಿ ಬೆಳೆ ಸೇರಿದಂತೆ ಇತರೆ ವಾಣಿಜ್ಯ ಬೆಳೆಗಳನ್ನು ತುಳಿದು ನಾಶ ಮಾಡಿ ಅನ್ನದಾತರಿಗೆ ನಷ್ಟ ಉಂಟು ಮಾಡಿದ್ದರೂ ಅರಣ್ಯ ಇಲಾಖೆ ಮಾತ್ರ ಅನ್ನದಾತರ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲ. ತಿಂಗಳ ಹಿಂದೆ ದೋಣಿಮಡಗು ಗ್ರಾಪಂ ವ್ಯಾಪ್ತಿಯಲ್ಲಿದ್ದ ಒಂಟಿ ಸಲಗ ರೈತ ಮಹಿಳೆಯನ್ನು ಬಲಿ ಪಡೆದಿತ್ತು, ಈಗ ಬೂದಿಕೋಟೆ ಹೋಬಳಿಯ ರಾಮಕೃಷ್ಣಪುರ ಗ್ರಾಮದ ಸುತ್ತಮುತ್ತ ಎರಡು ಆನೆಗಳು ಬೀಡು ಬಿಟ್ಟಿದ್ದು ವಾರದಿಂದ ರೈತರ ಅಪಾರ ಪ್ರಮಾಣದ ಬೆಳೆಗಳನ್ನು ನಾಶಗೊಳಿಸಿ ರೈತರನ್ನು ಕಣ್ಣೀರಿನಲ್ಲಿ ತೇಲುವಂತೆ ಮಾಡಿದೆ.

ರಾಗಿ, ಟೊಮೆಟೋ, ತರಕಾರಿ ನಾಶ

ಯರಗೋಳ್ ಅಣೆ ಕಟ್ಟು ಬಳಿಯಿರುವ ರಾಮಕೃಷ್ಣಪುರ ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ರೈತರು ಬೆಳೆದಿರುವ ರಾಗಿ, ಟೊಮೆಟೋ, ತರಕಾರಿ ಬೆಳೆಗಳನ್ನು ರಾತ್ರಿಯ ವೇಳೆ ದಾಳಿ ಮಾಡಿ ಹಿಗ್ಗಾಮುಗ್ಗ ತುಳಿದು ಕೈಗೆ ಬಂದು ತುತ್ತು ಬಾಯಿಗೆ ಬಾರದಂತೆ ಮಾಡಿದೆ. ಮಾಲೂರು ಅರಣ್ಯ ಇಲಾಖೆಯ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದರೂ ಸಹ ಮಾಲೂರು ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಒಮ್ಮೆಯೂ ಗ್ರಾಮಗಳತ್ತ ದಾವಿಸಿ ರೈತರ ಸಮಸ್ಯೆಗಳನ್ನು ಆಲಿಸಿಲ್ಲ,

ಈ ಪ್ರದೇಶದಲ್ಲಿ ಅರಣ್ಯ ಇಲಾಖೆ ಆನೆಗಳನ್ನೂ ಹಿಮ್ಮಟ್ಟಿಸುವ ಕೆಲಸವನ್ನೂ ಮಾಡುತ್ತಿಲ್ಲ ಎಂಬುದು ಇಲ್ಲಿನ ರೈತರ ಆರೋಪವಾಗಿದೆ. ರೈತರು ಆನೆಗಳ ಹಾವಳಿಗೆ ಹೆದರಿ ಕೃಷಿಯಲ್ಲಿ ತೊಡಗಲು ಹಿಂಜರಿಯುವಂತಾಗಿದೆ ಎಂದು ಆನೆ ಹಾವಳಿಯಿಂದ ೩ ಎಕರೆಯ ರಾಗಿ ಬೆಳೆಯನ್ನು ಕಳೆದುಕೊಂಡಿರುವ ಗೋವಿಂದಪ್ಪ ‘ಕನ್ನಡಪ್ರಭ’ಗೆ ತಮ್ಮ ಅಳಲು ತೋಡಿಕೊಂಡರು.

ಮಾಲೂರು ಅರಣ್ಯಾಧಿಕಾರಿಗಳ ಮೌನ

ಹಲವು ದಶಕಗಳಿಂದಲೂ ತಮಿಳುನಾಡಿನ ಅರಣ್ಯಪ್ರದೇಶದಿಂದ ಆಹಾರ ಹಾಗೂ ನೀರನ್ನು ಹುಡುಕಿಕೊಂಡು ರಾಜ್ಯದ ಕಾಡಿಗೆ ಬಂದು ಇಲ್ಲೆ ಸಂತಾನಾಭಿವೃದ್ಧಿ ನೆಲೆ ನಿಲ್ಲುತ್ತವೆ. ಆನೆಗಳನ್ನು ಓಡಿಸಲು ಯತ್ನಿಸುವ ಜನರ ಮೇಲೆ ಪ್ರತಿ ದಾಳಿ ಮಾಡಿ ಹಲವು ರೈತರ ಪ್ರಾಣ ಬಲಿ ಪಡೆದಿವೆ. ಬಂಗಾರಪೇಟೆ ಅರಣ್ಯ ಇಲಾಖೆ ಅಧಿಕಾರಿಗಳು ಹಗಲು ರಾತ್ರಿ ಕಾರ್ಯಚರಣೆ ಮಾಡಿ ಆನೆಗಳನ್ನು ತಮಿಳುನಾಡಿನತ್ತ ಮುಖ ಮಾಡುವಂತೆ ಯಶಸ್ವಿಯಾಗಿದ್ದಾರೆ, ಅಲ್ಲದೆ ಗಡಿಯಲ್ಲಿ ಕಾವಲು ಕಾಯುತ್ತಿದ್ದಾರೆ, ಆದರೆ ಮಾಲೂರು ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಯಾವುದೇ ಕಾರ್ಯಚರಣೆ ಮಾಡದೆ ಮೌನಕ್ಕೆ ಜಾರಿದ್ದಾರೆಂದು ರೈತರು ಆರೋಪಿಸಿದ್ದಾರೆ.ಸೋಲಾರ್ ಫೆನ್ಸಿಂಗ್ ಅಳವಡಿಸಿದ್ದರೂ ಸಹ ಆನೆಗಳು ಫೆನ್ಸಿಂಗ್ ಕಂಬಳನ್ನೂ ನೆಲಕ್ಕೆ ಉರುಳಿಸಿ ಗ್ರಾಮಗಳತ್ತ ನಿತ್ಯ ದಾವಿಸುತ್ತಿರುವುದು ರೈತರ ನಿದ್ದೆ ಕೆಡಿಸಿದೆ. ಕಷ್ಟಪಟ್ಟು ಬೆಳಿಸಿದ ಬೆಳೆ ಕಣ್ಣಮುಂದೆಯೇ ಆನೆಗಳಿಗೆ ಆಹುತಿಯಾಗುತ್ತಿದ್ದರೂ ರೈತರು ಅಸಹಾಯಕರಾಗಿದ್ದಾರೆ. ಮಾಲೂರು ಅರಣ್ಯ ಅಧಿಕಾರಿಗಳು ಆನೆಗಳನ್ನು ಹಿಮ್ಮಟ್ಟಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ