ಕನ್ನಡಪ್ರಭ ವಾರ್ತೆ ಖಾನಾಪುರ
ಬೆಳೆಹಾನಿ ಮಾಡುತ್ತಿರುವ ಗಜಪಡೆ ನೀಲಾವಡೆ ಗ್ರಾಮದ ಬಳಿ ಆಗಮಿಸಿ ಐದಾರು ವಾರಗಳು ಕಳೆದಿವೆ. ಈ ಸಂದರ್ಭದಲ್ಲಿ ಗಜಪಡೆಯಲ್ಲಿದ್ದ ಒಂದು ಹೆಣ್ಣಾನೆಗೆ ಪ್ರಸವವಾಗಿ ಮರಿಯಾನೆ ಜನಿಸಿದೆ. ತಮ್ಮೊಡನೆ ಮರಿ ಇರುವ ಕಾರಣ ಆನೆಗಳ ಹಿಂಡು ನೀಲಾವಡೆ ಪ್ರದೇಶವನ್ನು ಬಿಟ್ಟು ಬೇರೆಡೆ ಕದಲುತ್ತಿಲ್ಲ. ಹಗಲು ಹೊತ್ತು ಮರಿಯಾನೆಯ ರಕ್ಷಣೆ ಮಾಡುವ ಆನೆಗಳು ರಾತ್ರಿ ಕೃಷಿ ಜಮೀನುಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿವೆ. ಆನೆಗಳನ್ನು ಬೇರೆಡೆ ಸಾಗಿಸುವಲ್ಲಿ ಅರಣ್ಯ ಇಲಾಖೆ ಪ್ರಯತ್ನಗಳೂ ವಿಫಲವಾಗಿವೆ. ಆನೆಗಳ ಕಾಟಕ್ಕೆ ಈ ಭಾಗದ ರೈತರು ಹಿಂಗಾರು ಬೆಳೆ ಬೆಳೆಯಲು ಹಿಂದೇಟು ಹಾಕುತ್ತಿದ್ದಾರೆ ಎಂದು ನೀಲಾವಡೆ ಗ್ರಾಪಂ ಸದಸ್ಯ ವಿನಾಯಕ ಮುತಗೇಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆನೆಗಳನ್ನು ಬೇರೆಡೆ ಸಾಗಿಸಲು ಅರಣ್ಯ ಇಲಾಖೆ ಪ್ರಯತ್ನ ನಡೆದಿದೆ. ಇತ್ತ ರೈತರ ಬೆಳೆಹಾನಿಗೆ ಪರಿಹಾರ ನೀಡುವ ಕೆಲಸವೂ ಪ್ರಗತಿಯಲ್ಲಿದೆ. ರೈತರು ಆತಂಕ ಪಡದೇ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಖಾನಾಪುರ ಎಸಿಎಫ್ ಸುನೀತಾ ನಿಂಬರಗಿ ಕೋರಿದ್ದಾರೆ.