ತಾಲೂಕಿನ ಉಳವಿ ಹೋಬಳಿ ಸುತ್ತಮುತ್ತ ಕಾಡಾನೆ ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಸೊರಬ: ತಾಲೂಕಿನ ಉಳವಿ ಹೋಬಳಿ ಸುತ್ತಮುತ್ತ ಕಾಡಾನೆ ಸಂಚರಿಸುತ್ತಿದ್ದು, ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ತಾಲೂಕಿನ ಬರಗಿ ಗ್ರಾಮದಿಂದ ಭದ್ರಾಪುರ ಡಾಂಬರು ರಸ್ತೆಯನ್ನು ದಾಟುತ್ತಿರುವ ಆನೆಯೊಂದು ಗುರುವಾರ ಬೆಳಿಗ್ಗೆ ೧೧ ಗಂಟೆಯ ಸುಮಾರಿಗೆ ಗ್ರಾಮಸ್ಥರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಾನಹಳ್ಳಿ, ಮೈಸಾವಿ, ಕಣ್ಣೂರು ಸುತ್ತಮುತ್ತಲಿನ ಗ್ರಾಮಗಳ ರೈತರ ಜಮೀನುಗಳಲ್ಲಿ ಸಂಚರಿಸುತ್ತದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ರೈತರ ಜಮೀನಿನಲ್ಲಿ ಆನೆ ಸಂಚರಿಸಿರುವ ಬಗ್ಗೆ ಹೆಜ್ಜೆ ಗುರುತುಗಳು ಮತ್ತು ಲದ್ದಿ ಲಭ್ಯವಾಗಿದ್ದು, ಉಳವಿ ಹೋಬಳಿ ಗ್ರಾಮಸ್ಥರು ಕಾಡಿನಲ್ಲಿ ಸಂಚರಿಸುತ್ತಿರುವ ಆನೆಗಳು ಗ್ರಾಮದೊಳಗೆ ನುಗ್ಗಿ ಪ್ರಾಣ ಹಾನಿ ಮಾಡಬಹುದು ಎನ್ನುವ ಭಯದ ವಾತಾವರಣದಲ್ಲಿದ್ದಾರೆ. ಆದರೆ ತೋಟ, ಜಮೀನುಗಳಲ್ಲಿ ಯಾವುದೇ ರೀತಿಯ ಹಾನಿ ಮಾಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಕಳೆದ ೩ ದಿನಗಳ ಹಿಂದೆ ಉಳವಿ ಹೋಬಳಿ ಕೆಲವು ಗ್ರಾಮಗಳಲ್ಲಿ ಎರಡು ಆನೆ ಮತ್ತು ಒಂದು ಮರಿಯಾನೆ ಸಂಚರಿಸುತ್ತಿವೆ ಎಂದು ಗ್ರಾಮಸ್ಥರು ಪತ್ರಿಕೆಗೆ ತಿಳಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಆನೆಗಳ ಕಾರ್ಯಾಚರಣೆಯಲ್ಲಿದ್ದಾರೆ.
ಬರಗಿ, ಭದ್ರಾಪುರ, ಕಾನಹಳ್ಳಿ, ಮೈಸಾವಿ ಗ್ರಾಮದ ರೈತರು ಮತ್ತು ಸಾರ್ವಜನಿಕರು ರಸ್ತೆಯಲ್ಲಿ ಸಂಚರಿಸುವಾಗ ಜಾಗೃತರಾಗಿರಬೇಕು ಮತ್ತು ರೈತರು ಹೊಲ-ಗದ್ದೆಗಳಲ್ಲಿ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ನಿಸರಾಣಿ ಗ್ರಾ.ಪಂ. ವತಿಯಿಂದ ಧ್ವನಿವರ್ಧಕದ ಮೂಲಕ ಮನವಿ ಮಾಡಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.