ದೊಗ್ಗನಾಳ್-ಕಾಲ್ಕೆರೆ ಮುಖ್ಯ ರಸ್ತೆ ಹೇಳತೀರದಷ್ಟು ಹಾಳಾಗಿ ಹೋಗಿರುವುದರಿಂದ ಅದೇ ರಸ್ತೆಯಲ್ಲಿ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡುತ್ತಿರುವ ನಾಗರಿಕರು.
ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಹಲವು ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ತಮ್ಮ ನೆನಪುಗಳನ್ನು ಬಿತ್ತಿ ಹೋಗಿರುವ ತಾಲೂಕಿನ
ದೊಗ್ಗನಾಳ್-ಕಾಲ್ಕೆರೆ ಮುಖ್ಯ ರಸ್ತೆ ಹೇಳತೀರದಷ್ಟು ಹಾಳಾಗಿ ಹೋಗಿರುವುದರಿಂದ ಪ್ರಯಾಣಿಕರು ನಿತ್ಯವೂ ಹಿಡಿ ಶಾಪ ಹಾಕುವಂತಾಗಿದೆ.
ರಸ್ತೆಯು ಸಾಗಿದಷ್ಟೂ ದೂರ ಬರೀ ಗುಂಡಿ-ತಗ್ಗುಗಳ ದರ್ಶನವೇ ಆಗುತ್ತಿದೆ. ಇಂತಹ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿರಲಿ, ಬಸ್ ಮತ್ತು ಕಾರುಗಳು ಚಲಿಸಿ ಮುಂದೆ ಸಾಗಲು ಪ್ರಯಾಸ ಪಡಬೇಕಾದ ಪರಿಸ್ಥಿತಿ ಇದೆ.
ಕಳೆದ ಹಲವು ವರ್ಷಗಳಿಂದ ರಸ್ತೆಗೆ ಕನಿಷ್ಠ ದುರಸ್ತಿ ಭಾಗ್ಯವೂ ದೊರೆಯದ ಕಾರಣ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ರೈತರು ಸಂಚರಿಸಲು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿಯಿಂದ ದೊಗ್ಗನಾಳ್, ದುಮ್ಮಿ ಗೊಲ್ಲರಹಟ್ಟಿ, ಕಾಲ್ಕೆರೆ, ಲಂಬಾಣಿ ಹಟ್ಟಿ, ಪಾಂಡುಮಟ್ಟಿ, ಕಂಚಿನಹಾಳು ಗ್ರಾಮಗಳಿಗೆ ಪ್ರತಿದಿನ ಸರ್ಕಾರಿ ಖಾಸಗಿ ಬಸ್ಸುಗಳು, ಅಟೋ, ದ್ವಿಚಕ್ರ ವಾಹನ ಸಂಚರಿಸುತ್ತವೆ. ರಸ್ತೆ ಅಧ್ವಾನಗೊಂಡಿರುವುದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಬೈಕ್ ಸವಾರರು, ಸೈಕಲ್ ಸವಾರರು ಹಾಗೂ ಎತ್ತಿನ ಬಂಡಿಗಳ ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಅಲ್ಲದೆ, ರೈತರು ತಮ್ಮ ಹೊಲ-ತೋಟಗಳಿಗೆ ಕೃಷಿ ಉತ್ಪನ್ನಗಳನ್ನು ಸಾಗಿಸಲು ಹರಸಾಹಸ ಪಡುವಂತಾಗಿದೆ.
ಭಕ್ತರಿಗೂ ತಪ್ಪದ ಸಂಕಷ್ಟ:
ದೊಗ್ಗನಾಳ್ ಗ್ರಾಮದ ಶ್ರೀಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಮುಖ್ಯರಸ್ತೆಯಿಂದ ಶ್ರೀಜುಂಜಪ್ಪ ಸ್ವಾಮಿ ದೇವಸ್ಥಾನಕ್ಕೆ ಇದೇ ಮಾರ್ಗವಾಗಿ ಪ್ರತಿನಿತ್ಯ ನೂರಾರು ಭಕ್ತಾದಿಗಳು ಸಂಚರಿಸುತ್ತಾರೆ. ಮುಂಬರುವ ಡಿಸೆಂಬರ್ 26ರ ವೇಳೆ ಶ್ರೀ ಜುಂಜಪ್ಪ ಸ್ವಾಮಿಯ ಮಹಾ ಜಾತ್ರಾ ಮಹೋತ್ಸವ ನಡೆಯಲಿದ್ದು, ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿದೆ. ಜಾತ್ರೆಗೂ ಮುನ್ನ ರಸ್ತೆಯನ್ನು ಸರಿಪಡಿಸದಿದ್ದರೆ ಭಕ್ತರಿಗೆ ತೀವ್ರ ತೊಂದರೆಯಾಗಲಿದೆ. ಹಾಗಾಗಿ, ತಕ್ಷಣವೇ ರಸ್ತೆ ನಿರ್ಮಾಣಕ್ಕೆ ಕ್ರಮವಹಿಸಲು ಜಿಲ್ಲಾಡಳಿತ ಮುಂದಾಗಬೇಕೇಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಶಾಸಕರ ವಿರುದ್ಧ ಆಕ್ರೋಶ:
ಕ್ಷೇತ್ರದಲ್ಲಿ ರಸ್ತೆ ರಾಜ ಎಂದೇ ಹೆಸರುವಾಸಿಯಾಗಿರುವ ಶಾಸಕ ಡಾ. ಎಂ. ಚಂದ್ರಪ್ಪ ಕೇವಲ ಚುನಾವಣೆ ಬಂದಾಗ ಮಾತ್ರ ಹಳ್ಳಿಗಳ ಕಡೆ ಮುಖ ಮಾಡುತ್ತಾರೆ. ವರ್ಷಗಳಿಂದ ಹದಗೆಟ್ಟಿರುವ ಈ ಗ್ರಾಮೀಣ ರಸ್ತೆಗಳು ಅವರ ಕಣ್ಣಿಗೆ ಬಿದ್ದಿಲ್ಲವೇ? ರಸ್ತೆ ದುರಸ್ತಿಗೆ ಆಗ್ರಹಿಸಿ ಕಳೆದ ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಶಾಸಕರಿಗೆ ಮನವಿ ಪತ್ರಗಳನ್ನು ಸಲ್ಲಿಸುತ್ತಲೇ ಬಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು, ಡಿಸೆಂಬರ್ ಅಂತ್ಯದ ಜುಂಜಪ್ಪ ಸ್ವಾಮಿ ಜಾತ್ರೆಗೂ ಮುನ್ನ ಈ ರಸ್ತೆಯನ್ನು ಸಂಪೂರ್ಣವಾಗಿ ದುರಸ್ತಿಪಡಿಸಬೇಕೇಂದು ದುಮ್ಮಿಗೊಲ್ಲರಹಟ್ಟಿ ಕಾಲ್ಕೆರೆ ಗ್ರಾಮಸ್ಥರಾದ ದೋತಿ ಗೋವಿಂದಪ್ಪ, ಗ್ರಾ.ಪ.ಮಾಜಿ ಸದಸ್ಯ ನಾಗರಾಜ, ಪ್ರಕಾಶ್. ಬಸವರಾಜಪ್ಪ ಒತ್ತಾಯಿಸಿದರು.
ರಸ್ತೆ ದುರಸ್ಥಿಗೆ ದುಮ್ಮಿ ಚಿತ್ತಪ್ಪ ಒತ್ತಾಯ:
ದುಮ್ಮಿ ಗೊಲ್ಲರಹಟ್ಟಿ ಕಾಲ್ಕೆರೆ ರಸ್ತೆ ತುಂಬಾ ಕಿತ್ತುಹೊಗಿದೆ. ವಾಹನಗಳ ಸಂಚಾರಕ್ಕೆ ತೊಂದರೆ ಅಗಿದೆ. ಹೀಗಾಗಿ ಜಿಲ್ಲಾಡಳಿತ ರಸ್ತೆ ಅಭಿವೃದ್ಧಿ ಗೆ ಕ್ರಮವಹಿಸಿ ತಕ್ಷಣವೇ ರಸ್ತೆ ನಿರ್ಮಾಣ ಮಾಡಬೇಕೆಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ದುಮ್ಮಿ ಚಿತ್ತಪ್ಪ ಯಾದವ್ ತೀವ್ರವಾಗಿ ಒತ್ತಾಯಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.