ಲೋಪ ತೋರಿಸಿದರೆ ಸ್ಮಾರ್ಟ್‌ ಮೀಟರ್‌ ಟೆಂಡರ್‌ಗೆ ತಡೆ- ತನಿಖೆ ಆದೇಶ ಆಯ್ಕೆ ಮುಕ್ತ : ಜಾರ್ಜ್‌

KannadaprabhaNewsNetwork | Updated : Mar 27 2025, 06:40 AM IST

ಸಾರಾಂಶ

ಕೇಂದ್ರದ ಆರ್‌ಡಿಎಸ್‌ಎಸ್ ಯೋಜನೆ ರಾಜ್ಯದಲ್ಲಿ ಅಳವಡಿಸಿಕೊಳ್ಳದ ಕಾರಣ ಬೇರೆ ರಾಜ್ಯಗಳಿಗಿಂತ ಸ್ಮಾರ್ಟ್‌ ಮೀಟರ್‌ ದರ ರಾಜ್ಯದಲ್ಲಿ ಹೆಚ್ಚಿದೆ. ವಿದ್ಯುತ್ ಸ್ಮಾರ್ಟ್‌ ಮೀಟರ್ ಟೆಂಡರ್‌ನಲ್ಲಿ ಅಕ್ರಮವಾಗಿಲ್ಲ.

 ಬೆಂಗಳೂರು :  ಕೇಂದ್ರದ ಆರ್‌ಡಿಎಸ್‌ಎಸ್ ಯೋಜನೆ ರಾಜ್ಯದಲ್ಲಿ ಅಳವಡಿಸಿಕೊಳ್ಳದ ಕಾರಣ ಬೇರೆ ರಾಜ್ಯಗಳಿಗಿಂತ ಸ್ಮಾರ್ಟ್‌ ಮೀಟರ್‌ ದರ ರಾಜ್ಯದಲ್ಲಿ ಹೆಚ್ಚಿದೆ. ವಿದ್ಯುತ್ ಸ್ಮಾರ್ಟ್‌ ಮೀಟರ್ ಟೆಂಡರ್‌ನಲ್ಲಿ ಅಕ್ರಮವಾಗಿಲ್ಲ. ಒಂದೊಮ್ಮೆ ಕೆಟಿಪಿಪಿ ನಿಯಮ ಉಲ್ಲಂಘನೆಯಾಗಿರುವುದು ಸಾಬೀತು ಮಾಡಿದರೆ ಟೆಂಡರ್‌ಗೆ ತಡೆ ನೀಡಿ, ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ಆಯ್ಕೆಯಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಕೆಟಿಪಿಪಿ ಕಾಯ್ದೆಯ ಕೆಡಬ್ಲ್ಯು-4 ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. 10 ಕೋಟಿ ರು. ಮೇಲ್ಪಟ್ಟ ಕಾಮಗಾರಿಗಳನ್ನೂ ಟೆಂಡರ್‌ ಕರೆಯಲು ಹಣಕಾಸು ಇಲಾಖೆ ಅವಕಾಶ ಮಾಡಿಕೊಟ್ಟಿದೆ. ಹೀಗಾಗಿಯೇ ಈ ನಿಯಮದಡಿ ಟೆಂಡರ್‌ ಕರೆದಿದ್ದೇವೆ. ಇದರಲ್ಲಿ ಯಾವುದೇ ಲೋಪ ಆಗಿಲ್ಲ ಎಂದು ಸಮರ್ಥನೆ ನೀಡಿದರು.

ಬಹುತೇಕ ರಾಜ್ಯಗಳು ಆರ್‌ಡಿಎಸ್‌ಸ್‌ ಅಳವಡಿಸಿಕೊಂಡಿದ್ದು, ಅದರ ಮಾರ್ಗಸೂಚಿಯನ್ವಯ ಸ್ಮಾರ್ಟ್ ಮೀಟರ್ ಮತ್ತು ಸಾಫ್ಟ್‌ವೇರ್‌ ವೆಚ್ಚವೂ ಸೇರಿಸಿ ಟೆಂಡರ್ ಕರೆದಿದ್ದವು. ಹೀಗಾಗಿ ಸ್ಮಾರ್ಟ್ ಮೀಟರ್ ದರ ಹಾಗೂ ನಿರ್ವಹಣಾ ವೆಚ್ಚವನ್ನು ವಿದ್ಯುತ್‌ ದರದಲ್ಲೇ ಸಂಗ್ರಹಿಸುತ್ತಿವೆ. ಆದರೆ ಆರ್‌ಡಿಎಸ್ಎಸ್‌ ಅಳವಡಿಸಿಕೊಂಡರೆ ಎಲ್ಲಾ ಗ್ರಾಹಕರ ಮೀಟರ್‌ ಸ್ಮಾರ್ಟ್‌ ಮೀಟರ್‌ ಆಗಿ ಬದಲಿಸಬೇಕು ಎಂಬ ಕಾರಣಕ್ಕೆ ರಾಜ್ಯ ಒಪ್ಪಿಲ್ಲ. ಹೀಗಾಗಿ ಸ್ಮಾರ್ಟ್‌ ಮೀಟರ್‌ ಗ್ರಾಹಕರು ಒಂದೇ ಬಾರಿಗೆ ಹಣ ನೀಡಿ ಖದೀರಿಸಬೇಕು, ನಿರ್ವಹಣಾ ವೆಚ್ಚವನ್ನು ಮಾತ್ರ ಮಾಸಿಕ ಪಾವತಿಸಬೇಕು ಎಂದು ಹೇಳಿದರು.

10,000 ಕೋಟಿಗೂ ಹೆಚ್ಚು ಬಾಕಿ: ಆರ್‌ಡಿಎಸ್‌ಎಸ್‌ ಅಡಿ ಸೇರಿ ರಾಜ್ಯದಲ್ಲಿ ಎಸ್ಕಾಂಗಳಿಗೆ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳಿಂದ ಪಾವತಿಯಾಗಬೇಕಿರುವ ಬಾಕಿ ಹಣ ಪಾವತಿಸಬೇಕು ಎಂಬ ಷರತ್ತು ಇತ್ತು. ಎಸ್ಕಾಂಗಳಿಗೆ ಸರ್ಕಾರದಿಂದ 10,000 ಕೋಟಿಗಿಂತಲೂ ಹೆಚ್ಚು ಶುಲ್ಕ ಬಾಕಿಯಿದೆ. ಸರ್ಕಾರದಲ್ಲೇ ಹಣದ ಕೊರತೆ ಇದೆ.

ಕೇಂದ್ರವು ರಾಜ್ಯದಿಂದ 4.30 ಲಕ್ಷ ಕೋಟಿ ರು. ತೆರಿಗೆ ಸಂಗ್ರಹಿಸಿದರೂ ನೀಡುವುದು 50,000 ಕೋಟಿ ರು. ಮಾತ್ರ. ಹೀಗಿರುವಾಗಿ ಹಿಂದಿನ ಸರ್ಕಾರಗಳೆಲ್ಲವೂ ಬಾಕಿ ಉಳಿಸಿಕೊಂಡಿರುವ ಹಣ ಹೇಗೆ ಪಾವತಿಸಬೇಕು? ಹೀಗಾಗಿ ಆರ್‌ಡಿಎಸ್‌ಎಸ್‌ ಅಳವಡಿಸಿಕೊಂಡಿಲ್ಲ ಎಂದು ಕೆ.ಜೆ. ಜಾರ್ಜ್‌ ಸಮರ್ಥನೆ ನೀಡಿದರು.

ರಾಜಶ್ರೀ ಎಲೆಕ್ಟ್ರಿಕಲ್ಸ್‌ ಉಪಗುತ್ತಿಗೆ ನೀಡಿರುವ ಬಿಸಿಐಟಿ ಮೇಲೆ ಬೇರೆ ರಾಜ್ಯದಲ್ಲಿದ್ದ ನಿರ್ಬಂಧದ ಅವಧಿ ಮುಗಿದಿದೆ. ಬಳಿಕವಷ್ಟೇ ನಾವು ಟೆಂಡರ್‌ ನೀಡಿದ್ದೇವೆ. ಇಲ್ಲಿ ಅವರು ಸಿಸ್ಟಂ ಇಂಟಿಗ್ರೇಟ್‌ ಮಾಡುವ ಪ್ರಮುಖ ಕಂಪೆನಿಯಲ್ಲ. ರಾಜಶ್ರೀ ಕಂಪೆನಿಗೆ ಸೇವೆ ನೀಡುವವರಷ್ಟೇ. ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎನ್ನುವ ಇದೇ ಕಂಪೆನಿ 16 ರಾಜ್ಯಗಳಲ್ಲಿ ಸೇವೆ ನೀಡುತ್ತಿದೆ ಎಂದು ಜಾರ್ಜ್‌ ಹೇಳಿದರು.

ಇಂಧನ ಇಲಾಖೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್‌ಗುಪ್ತ, ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್‌ ಪಾಂಡೆ ಹಾಜರಿದ್ದರು.

ಸಚಿವ ಜಾರ್ಜ್‌ ಹೇಳಿದ್ದೇನು?

ಕೆಟಿಟಿಪಿ ಕಾಯ್ದೆಯ ಕೆಡಬ್ಲ್ಯೂ 4 ನಿಯಮಕ್ಕೆ ತಿದ್ದುಪಡಿ ತರಲಾಗಿದ್ದು ಅದರ ಅನ್ವಯವೇ ಸ್ಮಾರ್ಟ್‌ ಮೀಟರ್‌ ಟೆಂಡರ್‌ ಕರೆಯಲಾಗಿದೆ

ಈ ನಿಯಮ ಪಾಲನೆಯಲ್ಲಿ ಲೋಪ ಸಾಬೀತುಪಡಿಸಿದರೆ ಟೆಂಡರ್‌ಗೆ ತಡೆ ನೀಡಿ ತನಿಖೆಗೆ ಆದೇಶಿಸಲು ಸರ್ಕಾರಕ್ಕೆ ಅವಕಾಶ ಇದೆ

ಎಸ್ಕಾಂಗಳಿಗೆ ಸರ್ಕಾರ 10000 ಕೋಟಿ ಬಾಕಿ ಉಳಿಸಿಕೊಂಡ ಕಾರಣ ನಾವು ಕೇಂದ್ರದ ಆರ್‌ಡಿಎಸ್‌ಎಸ್ ಯೋಜನೆಗೆ ಸೇರಿಕೊಂಡಿಲ್ಲ

ಆರ್‌ಡಿಎಸ್‌ಎಸ್ ಯೋಜನೆಗೆ ಸೇರದ ಕಾರಣ ನಮ್ಮ ರಾಜ್ಯದಲ್ಲಿ ಮೀಟರ್‌ ದರ ಹೆಚ್ಚು. ಗ್ರಾಹಕರು ಪೂರ್ಣ ಹಣ ಕೊಟ್ಟು ಖರೀದಿಸಬೇಕು

Share this article