ಟೌನ್‌ಶಿಪ್ ಕೈ ಬಿಡದಿದ್ದರೆ ಹೋರಾಟ: ಎ.ಮಂಜುನಾಥ್

KannadaprabhaNewsNetwork |  
Published : Mar 23, 2025, 01:31 AM IST
22ಕೆಆರ್ ಎಂಎನ್ 4.ಜೆಪಿಜಿಜೆಡಿಎಸ್ ಜಿಲ್ಲಾಧ್ಯಕ್ಷ ಎ.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಜಿಬಿಡಿಎ) ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಟೌನ್ ಶಿಪ್ ಯೋಜನೆ ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ರೈತರಿಂದಲೇ ಛೀಮಾರಿ ಹಾಕಿಸಿ ಚಪ್ಪಲಿ, ಪೊರಕೆಯಲ್ಲಿ ಹೊಡಿಸುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ರಾಮನಗರ

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಜಿಬಿಡಿಎ) ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಟೌನ್ ಶಿಪ್ ಯೋಜನೆ ಕೂಡಲೇ ಕೈಬಿಡಬೇಕು. ಇಲ್ಲದಿದ್ದರೆ ರೈತರಿಂದಲೇ ಛೀಮಾರಿ ಹಾಕಿಸಿ ಚಪ್ಪಲಿ, ಪೊರಕೆಯಲ್ಲಿ ಹೊಡಿಸುವುದಾಗಿ ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಎ.ಮಂಜುನಾಥ್ ಎಚ್ಚರಿಕೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭೂ ಮಾಲೀಕರು ಮತ್ತು ಕುಟುಂಬದವರು ತಮ್ಮ ಆಸ್ತಿ ಉಳಿಸಿಕೊಳ್ಳಲು ಹೋರಾಟಕ್ಕೆ ಸನ್ನದ್ಧರಾಗಿದ್ದಾರೆ. ಈ ಯೋಜನೆಯನ್ನು ಕೈಬಿಡದಿದ್ದರೆ ಯೋಜನೆ ಹಿಂದಿರುವ ಎಲ್ಲರಿಗೂ ಮೋಕ್ಷಾ ಸಿಗುವುದು ಖಚಿತ. ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರಕ್ಕೆ ಭೂ ಸ್ವಾಧೀನ ಮಾಡಲು ಹಣ ಇಲ್ಲ. ಜೊತೆಗೆ ಧಮ್ಮು, ತಾಕತ್ತೂ ಇಲ್ಲ. ಕೆಐಎಡಿಬಿನವರು 800 ಎಕರೆ ಭೂ ಸ್ವಾಧೀನಕ್ಕೆ ಮುಂದಾದಾಗ ಶಾಸಕ ಬಾಲಕೃಷ್ಣ ರೈತರಿಗಾಗಿ ತನ್ನ ರಕ್ತ ಬಸಿಯುತ್ತೇನೆ ಎಂದಿದ್ದರು. ಆದರೀಗ ಭಯದಿಂದ ಬಾಯಿ ಬಿಡದೆ ಅವಿತುಕೊಳ್ತಿದ್ದಾರೆ. ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ಗೆ ರೈತರೊಂದಿಗೆ ನೇರವಾಗಿ ಮಾತನಾಡುವ ಧೈರ್ಯ ಇಲ್ಲದೆ, ಪೇಪರ್ ಹುಲಿಯಾಗಿದ್ದಾರೆ ಎಂದು ಟೀಕಿಸಿದರು.

ಎಚ್ಡಿಡಿ, ಎಚ್ಡಿಕೆ, ಕಮಲ ನಾಯಕರು ಭಾಗಿ :

ಬಿಡದಿ ಭಾಗದಲ್ಲಿ ಭೂಮಿ ಲೂಟಿ ಮಾಡುವ ಉದ್ದೇಶದಿಂದಲೇ ಕೈಗೊಂಬೆಯಾಗಿ ಕೆಲಸ ಮಾಡುವ

ಅಧಿಕಾರಿಗಳನ್ನು ನಿಯೋಜಿಸಿಕೊಂಡಿದ್ದಾರೆ. ಅವರನ್ನು ಉಪಯೋಗಿಸಿಕೊಂಡು ಸಂಚು ರೂಪಿಸಿ ರೈತರಿಗೆ ಮಂಕುಬೂದಿ ಎರೆಚಲು ಅವಕಾಶ ನೀಡುವುದಿಲ್ಲ. ಗೆಜೆಟ್ ಮಾಡಿರುವ ಪ್ರಿಲಿಮಿರಿ ನೋಟಿಫಿಕೇಷನ್ ನಮಗೆ ಅಸ್ತ್ರವಾಗಿ ಸಿಕ್ಕಿದ್ದು, ಬೈರಮಂಗಲದಿಂದಲೇ ಹೋರಾಟಕ್ಕೆ ಅಣಿಯಾಗುತ್ತೇವೆ. ರೈತರು ನಿರ್ಧಾರ ಮಾಡಿದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಬಿಜೆಪಿ ನಾಯಕರನ್ನು ಹೋರಾಟಕ್ಕೆ ಕರೆತಂದು ಬೀದಿಯಲ್ಲಿ ನಿಲ್ಲಿಸುತ್ತೇನೆ ಎಂದು ಹೇಳಿದರು.

ಈಗ ಕಾಂಗ್ರೆಸ್‌ನವರು ಕೇಂದ್ರ ಸಚಿವ ಕುಮಾರಸ್ವಾಮಿ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಅವರು ಬಿಡದಿ ಮಾತ್ರವಲ್ಲದೆ ನಂದಗುಡಿ, ರಾಮನಗರ ಕಸಬಾ, ಬಿಡದಿ, ಸೋಲೂರು, ಸಾತನೂರು ಪ್ರೋಸೆಡಿಂಗ್ ಮಾಡಿಕೊಂಡಿತ್ತು. ಡಿಎಲ್‌ಎಫ್ ಕಂಪನಿ ಬಿಡದಿಯಲ್ಲಿ 10 ಸಾವಿರ ಎಕರೆ ಪಡೆದು ಅಭಿವೃದ್ಧಿ ಪಡಿಸಲು ನಿರ್ಧರಿಸಿ 400 ಕೋಟಿ ರು.ಗಳನ್ನು ಪಾವತಿಸಿತ್ತು. ಅಲ್ಲಿವರೆಗೂ ರೈತರ ಜಮೀನಿಗೆ ಬೆಲೆ ನಿಗದಿ ಪಡಿಸಿರಲಿಲ್ಲ. ಆಗ ನೋಟಿಫಿಕೇಷನ್ ಹೊರಡಿಸಿದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.

ಟೌನ್ ಶಿಪ್ ಬೇಡವೆಂದು ರೈತರು ಹೇಳಿದ ಕಾರಣ ಆ ಯೋಜನೆ ಕೈಬಿಡಲಾಯಿತು. ಆಗ ಕಾಂಗ್ರೆಸ್ ನವರು ಹೋರಾಟ ಮಾಡಿದ್ದರು. ಆದರೀಗ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಭೂಮಿ ಕಬಳಿಸಲು ಸಂಚು ರೂಪಿಸುತ್ತಿದ್ದಾರೆ. ಭೂ ಸ್ವಾಧೀನ ಪಡಿಸಿಕೊಂಡು ಯಾರಿಗೆ ಎಷ್ಟು ಭೂಮಿ ಕೊಡುತ್ತಿದ್ದೀರಿ, ರೈತರಿಗೆ ಎಷ್ಟು ಪರಿಹಾರ ಕೊಡುತ್ತೀರಿ ಎಂಬುದನ್ನು ಬಹಿರಂಗ ಪಡಿಸಿಲ್ಲ ಎಂದು ದೂರಿದರು.

ಕನಕಪುರ ರೈತರಿಗೆ ಭೂಮಿ ಮಾರಿಕೊಳ್ಳಬೇಡಿ ಅನ್ನುತ್ತಾರೆ. ಇಲ್ಲಿ ಬಿಡದಿ ಭಾಗದ ಭೂಮಿ ಲೂಟಿ ಮಾಡಲು ಸಂಚು ಮಾಡಿದ್ದಾರೆ. ನಿಮಗೆ ತಾಕತ್ತಿದ್ದರೆ ಸಾತನೂರು ಬಳಿ ಟೌನ್ ಶಿಪ್ ಮಾಡಿ ರೈತರನ್ನು ಕೆಣಕಿ ತೋರಿಸಿ ನೋಡೋಣ. ಈ ಯೋಜನೆಯಿಂದ ರೈತರಿಗೆ ಏನು ಅನುಕೂಲವಾಗುತ್ತದೆ ಎಂದು ಹೇಳುವ ತಾಕತ್ತೇ ಇಲ್ಲ ಎಂದು ಕಿಡಿಕಾರಿದರು.

ಟೌನ್ ಶಿಪ್ ಹೆಸರಿನಲ್ಲಿ ರೈತರ ಭೂಮಿ ಲಪಟಾಯಿಸಿ, ಸರ್ಕಾರಿ ಭೂಮಿಯನ್ನು ಅಡವಿಟ್ಟು ಸಾಲ ತಂದು ರೈತರಿಗೆ ನೀಡಿ ಖಾಲಿ ಮಾಡುವ ಪ್ರಯತ್ನ. ಕೆಲ ಪ್ರಭಾವಿಗಳು ಮೂರು ನಾಲ್ಕು ತಿಂಗಳ ಹಿಂದೆ ಬೇನಾಮಿ ಹೆಸರಿನಲ್ಲಿ 400-500 ಎಕರೆ ನೋಂದಣಿ ಆಗಿದೆ. ಇನ್ನೊಂದು ನೋಟಿಫಿಕೇಷನ್ ಆಗುವ ವೇಳೆಗೆ ಕಾಂಗ್ರೆಸ್ ಸರ್ಕಾರವೇ ಇರುವುದಿಲ್ಲ. ಅಷ್ಟರೊಳಗೆ ಇವರೆಲ್ಲರ ನಿಜಬಣ್ಣ ಬಯಲು ಮಾಡುತ್ತೇವೆ ಎಂದು ಎ.ಮಂಜುನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ರೈತರಾದ ಮುನಿ ನಾರಾಯಣಸ್ವಾಮಿ, ಕೇಶವರೆಡ್ಡಿ, ರಾಮಣ್ಣ, ಗಿರಿಧರ್, ಹೇಮಂತ್, ಶ್ರೀಧರ್, ಅಶ್ವತ್ಥ್, ತಿಮ್ಮೇಗೌಡ, ಕೊಡಿಯಾಲ ಸತೀಶ್, ಮಂಡಳಿದೊಡ್ಡಿ ನಾಗರಾಜು, ಗುಂಡಾ, ಗೌತಮ್ ಇತರರಿದ್ದರು.

ರಾಜ್ಯ ಸರ್ಕಾರದಿಂದಲೇ ರಿಯಲ್ ಎಸ್ಟೇಟ್

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವೇ ಟೌನ್ ಶಿಪ್ ಯೋಜನೆ ಹೆಸರಿನಲ್ಲಿ ನೇರವಾಗಿ ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದೆ. ಈ ಯೋಜನೆ ಅನುಷ್ಠಾನವಾಗಲು ಮೊದಲು ಪ್ರಿಲಿಮಿರಿ ನೋಟಿಫಿಕೇಷನ್ ಆಗಬೇಕು. ನಂತರ ಪೇಪರ್ ನೋಟಿಫಿಕೇಷನ್, ತಕರಾರು ಅರ್ಜಿ ಸ್ವೀಕಾರ, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ರೈತರ ಸಂಧಾನ ಸಭೆ ನಡೆಯಬೇಕು. ಇದಕ್ಕೆಲ್ಲ ಹೆಚ್ಚಿನ ಕಾಲಾವಕಾಶ ಬೇಕಿದೆ. ಇದೆಲ್ಲವನ್ನು ಧಿಕ್ಕರಿಸಿ ಸರ್ಕಾರ ಮುನ್ನಡೆದರೆ ಕಾನೂನು ಹೋರಾಟ ಮಾಡುತ್ತೇವೆ. ಅದಕ್ಕೆ ತಗಲುವ ಸಂಪೂರ್ಣ ವೆಚ್ಚವನ್ನು ನಾನೇ ಭರಿಸುತ್ತೇನೆ.

-ಎ.ಮಂಜುನಾಥ್, ಮಾಜಿ ಶಾಸಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದು 2028ರವರೆಗೂ ಸಿಎಂ, ಇಳಿಸಲು ಆಗೋಲ್ಲ: ಜಮೀರ್‌
ಫೆ.೮ರಂದು ಶ್ರೀ ರಾಮಲಿಂಗೇಶ್ವರ ಮಠ ಲೋಕಾರ್ಪಣೆ