ನಾರಾಯಣ ಹೆಗಡೆ
ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬುಧವಾರ ಡಿ.ಕೆ.ಶಿವಕುಮಾರ ಪದಗ್ರಹಣ ಮಾಡುತ್ತಿದ್ದು, ಅವರ ಸಂಪುಟ ಸೇರಲು ಜಿಲ್ಲೆಯ ಶಾಸಕರು ಕೊನೆ ಕ್ಷಣದ ಪ್ರಯತ್ನದಲ್ಲಿದ್ದಾರೆ. ಈ ಸಲವಾದರೂ ಜಿಲ್ಲೆಗೆ ಮಂತ್ರಿಗಿರಿ ಸಿಗುತ್ತಾ ಎಂಬ ಕುತೂಹಲ ಮೂಡಿಸಿದೆ.
ಮಂತ್ರಿ ಸ್ಥಾನಕ್ಕಾಗಿ ಜಿಲ್ಲೆಯ ಶಾಸಕರು ಈಗಾಗಲೇ ಲಾಬಿ ನಡೆಸಿದ್ದಾರೆ. ಆ ಪೈಕಿ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ, ಹಾವೇರಿಯ ರುದ್ರಪ್ಪ ಲಮಾಣಿ, ಹಾನಗಲ್ಲಿನ ಶ್ರೀನಿವಾಸ ಮಾನೆ ಪೈಪೋಟಿ ನಡೆಸಿದ್ದಾರೆ. ಇನ್ನುಳಿದ ಮೂರು ಕ್ಷೇತ್ರಗಳಲ್ಲಿ ಶಿಗ್ಗಾಂವಿಯ ಯಾಸಿರ್‌ಖಾನ್ ಪಠಾಣ್ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಗೆದ್ದವರು. ಪ್ರಕಾಶ ಕೋಳಿವಾಡ ಕೂಡ ಮೊದಲ ಬಾರಿಗೆ ಶಾಸಕರಾದವರು. ಹಿರೇಕೆರೂರಿನ ಯು.ಬಿ. ಬಣಕಾರ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಂದು ಗೆದ್ದವರು. ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡಿದರೆ ಈ ಮೂವರು ಪರಿಗಣನೆಗೆ ಬರಲಿದ್ದಾರೆ. ಆ ಸಾಧ್ಯತೆ ಕಡಿಮೆ ಇರುವುದರಿಂದ ಮಂತ್ರಿ ಸ್ಥಾನಕ್ಕೆ ಈ ಮೂವರು ಅಷ್ಟೇನೂ ಪ್ರಯತ್ನ ನಡೆಸಿಲ್ಲ. ಆದರೆ, ಮೂವರು ಹಿರಿಯ ಶಾಸಕರು ದೆಹಲಿ, ಬೆಂಗಳೂರು ಅಲೆಯುತ್ತಲೇ ಇದ್ದು, ಹೇಗಾದರೂ ಸಂಪುಟ ಸೇರಬೇಕು ಎಂಬ ಪ್ರಯತ್ನದಲ್ಲಿದ್ದಾರೆ.ಎಲ್ಲ ಕ್ಷೇತ್ರಗಳಲ್ಲಿ ಕೈ ಶಾಸಕರು: ಶಿಗ್ಗಾಂವಿ ಉಪಚುನಾವಣೆ ಗೆಲುವು ಸೇರಿದಂತೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರೇ ಇದ್ದಾರೆ. ಪಕ್ಷಕ್ಕೆ ಶಕ್ತಿ ತುಂಬಿರುವ ಜಿಲ್ಲೆಗೆ ಸಹಜವಾಗಿಯೇ ರಾಜಕೀಯ ಪ್ರಾತಿನಿಧ್ಯ ಅಗತ್ಯವಿದ್ದು, ಇದನ್ನೇ ಜಿಲ್ಲೆಯ ಶಾಸಕರು ಕೇಳುತ್ತಿದ್ದಾರೆ. ಸಿದ್ದರಾಮಯ್ಯ ಸಂಪುಟದಲ್ಲಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗದೇ ಬೇರೆ ಜಿಲ್ಲೆಯವರು ಉಸ್ತುವಾರಿ ಸಚಿವರಾಗಿದ್ದರು. ಜಿಲ್ಲೆಯವರೇ ಉಸ್ತುವಾರಿ ಮಂತ್ರಿಗಳಾದರೆ ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಅನುಕೂಲವಾಗುತ್ತದೆ ಎಂಬುದು ಕಾರ್ಯಕರ್ತರ ಅಭಿಪ್ರಾಯವಾಗಿದ್ದು, ಜಿಲ್ಲೆಯ ಯಾರಿಗಾದರೂ ಮಂತ್ರಿ ಸ್ಥಾನ ಕೊಡಬೇಕು ಎಂಬುದು ಕೈ ಕಾರ್ಯಕರ್ತರ ಆಗ್ರಹವಾಗಿದೆ.
ಇನ್ನು ವಿಧಾನ ಪರಿಷತ್‌ನಲ್ಲಿ ಸರ್ಕಾರದ ಮುಖ್ಯ ಸಚೇತಕರಾಗಿರುವ ಸಲೀಂ ಅಹ್ಮದ್ ಕೂಡ ಸಚಿವ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಸದ್ದಿಲ್ಲದೇ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿರುವ ಅವರು, ಮಂತ್ರಿಯಾಗುವ ವಿಶ್ವಾಸವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿ ಆಗಿರುವ ಅವರು, ಇತ್ತೀಚೆಗೆ ದಾವಣಗೆರೆ ಉಪಚುನಾವಣೆಯಲ್ಲಿ ಪಕ್ಷದ ಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಪುಟ ಸೇರುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ.ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಅವರೂ ಮಂತ್ರಿಗಿರಿ ಮೇಲೆ ಕಣ್ಣಿಟ್ಟು ಪೈಪೋಟಿ ನಡೆಸುತ್ತಿದ್ದಾರೆ. ಎರಡು ಅವಧಿ ಪರಿಷತ್ ಸದಸ್ಯರಾಗಿ, ಎರಡು ಸಲ ಶಾಸಕರಾಗಿ ಹೀಗೆ ನಾಲ್ಕು ಬಾರಿ ಶಾಸಕರಾಗಿರುವ ಅವರ ಹೆಸರು ಕೆಲವು ದಿನಗಳಿಂದ ಜೋರಾಗಿ ಓಡುತ್ತಿದೆ. ಆದರೆ ಪಕ್ಷದ ಹೈಕಮಾಂಡ್ ಸಾಮಾಜಿಕ ನ್ಯಾಯದಡಿ ಎಲ್ಲ ಜಾತಿ, ವರ್ಗದವರನ್ನು ಪರಿಗಣಿಸಿದರೆ ಅವಕಾಶ ಕೈತಪ್ಪಬಹುದು ಎನ್ನಲಾಗುತ್ತಿದೆ.