ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ತ್ರಿಭಾಷಾ ಸೂತ್ರದ ಬದಲು, ದ್ವಿಭಾಷಾ ಸೂತ್ರ ಇರಲಿ ಎಂದುಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ವರ್ಷದಿಂದ ಹಿಂದೆ ಭಾಷೆಗೆ ಅಂಕ ನೀಡುವುದಿಲ್ಲ. ಬದಲಿಗೆ ಗ್ರೇಡ್ ನೀಡಲಾಗುತ್ತದೆ. ಈ ಗ್ರೇಡ್ ಆ ವಿದ್ಯಾರ್ಥಿಯ ಫಲಿತಾಂಶಕ್ಕೇನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ:
ಹಿಂದಿ ಪರೀಕ್ಷೆ ಬರೆಯದೆ ಬಿಟ್ಟರೆ ನಡಿಯುತ್ತಾ ? ಅದಕ್ಕೆ ಅಂಕನೇ ಕೊಡ್ತಾ ಇಲ್ಲಂದ್ರ ಏಕೆ ಬರೀಬೇಕು ಸಾರ್..!
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಹಿಂದಿ ಭಾಷಾ ಪರೀಕ್ಷೆಗೆ ಅಂಕ ಬದಲು ಗ್ರೇಡ್ ನೀಡ ಸರ್ಕಾರ ನಿರ್ಧರಿಸಿರುವುದಕ್ಕೆ ವಿದ್ಯಾರ್ಥಿಗಳು ತಮ್ಮ ಶಾಲಾ ಶಿಕ್ಷಕರಿಗೆ ಕರೆ ಮಾಡಿ ಕೇಳುತ್ತಿರುವ ಪ್ರಶ್ನೆ ಇದು.
ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ತ್ರಿಭಾಷಾ ಸೂತ್ರದ ಬದಲು, ದ್ವಿಭಾಷಾ ಸೂತ್ರ ಇರಲಿ ಎಂದುಕೊಂಡು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಈ ವರ್ಷದಿಂದ ಹಿಂದೆ ಭಾಷೆಗೆ ಅಂಕ ನೀಡುವುದಿಲ್ಲ. ಬದಲಿಗೆ ಗ್ರೇಡ್ ನೀಡಲಾಗುತ್ತದೆ. ಈ ಗ್ರೇಡ್ ಆ ವಿದ್ಯಾರ್ಥಿಯ ಫಲಿತಾಂಶಕ್ಕೇನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಇನ್ಮೇಲೆ ಎಸ್ಸೆಸ್ಸೆಲ್ಸಿಗೆ 625ರ ಬದಲು 525 ಅಂಕ ಅಷ್ಟೇ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸರ್ಕಾರದ ನಿರ್ಧಾರ ಪ್ರಕಟಿಸುತ್ತಿದ್ದಂತೆ, ಇತ್ತ ವಿದ್ಯಾರ್ಥಿ, ಪಾಲಕರು, ಶಿಕ್ಷಕರಲ್ಲೂ ಗೊಂದಲ ಶುರುವಾಗಿದೆ.
ಹಿಂದಿಗೆ ಅಂಕವನ್ನೇ ಕೊಡುವುದಿಲ್ಲ. ಫಲಿತಾಂಶಕಕ್ಕೂ ಇದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಅಂದರೆ ಈ ಪರೀಕ್ಷೆಗೆ ಏಕೆ ಕುಳಿತುಕೊಳ್ಳಬೇಕು? ಇದರ ಬದಲು ಏ. 2ರಂದು ನಡೆಯಲಿರುವ ಸಮಾಜ ವಿಜ್ಞಾನ ವಿಷಯವನ್ನೇ ಇನ್ನಷ್ಟು ಓದುತ್ತೇವೆಂದು ಶಾಲೆ ಹಾಗೂ ಹಿಂದಿ ಶಿಕ್ಷಕರಿಗೆ ಕರೆ ಮಾಡಿ ವಿದ್ಯಾರ್ಥಿಗಳು ಪ್ರಶ್ನಿಸುತ್ತಿದ್ದಾರೆ. ಇದು ಶಿಕ್ಷಕರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದರೂ ಕಡ್ಡಾಯವಾಗಿ ಪರೀಕ್ಷೆಗೆ ಹಾಜರಾಗಿ ಎಂದು ಹೇಳುತ್ತಿದ್ದಾರೆ.
ಆಸಕ್ತಿ ಹೋಗುತ್ತೆ:
ಹಿಂದಿ ಪರೀಕ್ಷೆಯ ಅಂಕ ಪರಿಗಣಿಸುವುದಿಲ್ಲ ಎಂಬ ನಿರ್ಧಾರದಿಂದ ಸರ್ಕಾರ ಹಿಂದೇ ಸರಿಯಬೇಕು. ಇಲ್ಲದಿದ್ದರೆ ಮಕ್ಕಳ ಕಲಿಕೆ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಡ್ರಾಯಿಂಗ್, ದೈಹಿಕ ಶಿಕ್ಷಣ ವಿಷಯಗಳು ಬರೀ ಹೆಸರಿಗಷ್ಟೇ ಆಗಿವೆ. ಈ ವಿಷಯಗಳನ್ನು ಗಂಭೀರವಾಗಿ ಕಲಿಸುವುದಿಲ್ಲ. ಕಲಿಸಲು ಶಿಕ್ಷಕರು ಆಸಕ್ತಿ ತೋರಿದರೂ ವಿದ್ಯಾರ್ಥಿಗಳು ತೋರುವುದಿಲ್ಲ. ಡ್ರಾಯಿಂಗ್, ದೈಹಿಕ ಶಿಕ್ಷಣಗಳ ಸಮಯವನ್ನು ಗಣಿತ, ವಿಜ್ಞಾನ, ಇಂಗ್ಲಿಷ್ ಭಾಷೆಯ ತರಗತಿಗಳು ನಡೆಯುತ್ತವೆ. ಅದೇ ರೀತಿ ಮುಂದೆ ಹಿಂದಿಗೂ ಬರುತ್ತದೆ. ಅನ್ಯ ರಾಜ್ಯಗಳಲ್ಲಿ ಕನ್ನಡ ಮಾತನಾಡಿದರೆ ನಡೆಯುತ್ತದೆಯೇ? ಅಲ್ಲೆಲ್ಲ ಹಿಂದಿಯಲ್ಲೋ, ಇಂಗ್ಲಿಷ್‌ನಲ್ಲೂ ಮಾತನಾಡಬೇಕು. ಆದರೆ ಈಗ ಹಿಂದಿಗೆ ತೋರುತ್ತಿರುವ ನಿರ್ಲಕ್ಷ್ಯದಿಂದ ಮಕ್ಕಳ ಭಾಷಾ ಕಲಿಕಾಮಟ್ಟ ಕುಸಿಯುತ್ತದೆ. ಹಿಂದಿ ಮಾತನಾಡಲು, ಬರೆಯಲೂ ಬರುವುದಿಲ್ಲ ಎಂಬ ಆತಂಕ ಶಿಕ್ಷಣ ಪ್ರೇಮಿಗಳದ್ದು.
ಹೋರಾಟಕ್ಕೂ ಸಿದ್ಧ:
ಹಿಂದಿ ಭಾಷೆ ಬಗ್ಗೆ ಗೊಂದಲ ಸೃಷ್ಟಿಸಿರುವ ಸರ್ಕಾರ ಕೂಡಲೇ ತನ್ನ ನಿರ್ಧಾರ ಬದಲಾಯಿಸಬೇಕು. ಏನೇ ನಿರ್ಧಾರ ಕೈಗೊಳ್ಳುವುದಿದ್ದರೂ ಶೈಕ್ಷಣಿಕ ವರ್ಷದ ಆರಂಭದಲ್ಲೇ ತೆಗೆದುಕೊಳ್ಳಬೇಕು. ಪರೀಕ್ಷೆಗೆ ಕೆಲ ದಿನ ಬಾಕಿ ಇರುವಾಗ ನಿರ್ಧಾರ ತೆಗೆದುಕೊಂಡರೆ ಹೇಗೆ? ಬರೀ ಹಿಂದಿ ಅಷ್ಟೇ ಅಲ್ಲದೆ ಉಳಿದ ಭಾಷೆಗಳ ಕಲಿಕೆಗೂ ಹೊಡೆತ ಬೀಳುತ್ತದೆ. ಮೊದಲಿನಂತೆ ತ್ರಿಭಾಷಾ ಸೂತ್ರವನ್ನೇ ಜಾರಿಗೊಳಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂಬ ಎಚ್ಚರಿಕೆ ಹಿಂದಿ ಶಿಕ್ಷಕರದ್ದು.
ಒಟ್ಟಿನಲ್ಲಿ ಹಿಂದಿ ಭಾಷೆ ಬಗ್ಗೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ದೊಡ್ಡ ಮಟ್ಟದಲ್ಲಿ ಗೊಂದಲವನ್ನುಂಟು ಮಾಡಿರುವುದಂತೂ ಸತ್ಯ. ಸರ್ಕಾರ ಮುಂದೆ ಏನು ನಿರ್ಣಯ ಕೈಗೊಳ್ಳುತ್ತದೆಯೋ ಕಾಯ್ದು ನೋಡಬೇಕಷ್ಟೇ!ಹಿಂದಿ ಭಾಷೆ ಬಗ್ಗೆ ಸರ್ಕಾರ ಕೈಗೊಂಡಿರುವ ನಿರ್ಧಾರದಿಂದ ಪರೀಕ್ಷೆ ಬರೆಯದೆ ಇದ್ದರೆ ನಡೆಯುತ್ತಿದೆಯೇ ಎಂದು ವಿದ್ಯಾರ್ಥಿ ಸಮೂಹ ಪ್ರಶ್ನಿಸುತ್ತಿದೆ. ಅವರಿಗೆ ಪರೀಕ್ಷೆಗೆ ಕುಳಿತುಕೊಳ್ಳಲೇಬೇಕು ಎಂದು ಹೇಳಲಾಗುತ್ತಿದೆ. ಸರ್ಕಾರ ಹಿಂದಿನ ಪದ್ಧತಿಯನ್ನೇ ಮುಂದುವರಿಸಬೇಕು. ಇಲ್ಲದಿದ್ದಲ್ಲಿ ಹೋರಾಟ ನಡೆಸಬೇಕಾಗುತ್ತದೆ.
ಎಂ.ಡಿ. ಮಾನೆ, ಹಿಂದಿ ಶಿಕ್ಷಕರು, ಆಲೂರ ವೆಂಕಟರಾವ್ ಹೈಸ್ಕೂಲ್, ಧಾರವಾಡ
ಹಿಂದಿ ಭಾಷೆಗೆ ಅಂಕ ನೀಡುವುದಿಲ್ಲ ಎಂಬ ನಿರ್ಧಾರ ಸರಿಯಲ್ಲ. ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ. ಹಿಂದಿ ಬಗ್ಗೆ ಇದ್ದ ಆಸಕ್ತಿ ಕ್ಷೀಣಿಸುತ್ತದೆ. ಕಲಿತರೂ ಅಷ್ಟೇ ಬಿಟ್ಟರೂ ಅಷ್ಟೇ ಎಂಬ ಮನೋಭಾವ ಬರುತ್ತದೆ. ಅನ್ಯ ರಾಜ್ಯಗಳಲ್ಲಿ ವ್ಯವಹರಿಸಲು ಹಿಂದಿ ಅತ್ಯಗತ್ಯ. ಅದಕ್ಕೆ ಹೊಡೆತ ಬೀಳುತ್ತದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.