ನಾನು ಅಧಿಕಾರದಲ್ಲಿರುವಾಗ ಕನ್ನಡಕ್ಕೆ ಚ್ಯುತಿಯಾಗಲು ಎಂದಿಗೂ ಬಿಡುವುದಿಲ್ಲ: ಸಿಎಂ ಸಿದ್ದರಾಮಯ್ಯ

KannadaprabhaNewsNetwork | Updated : Nov 02 2024, 05:40 AM IST

ಸಾರಾಂಶ

ನಾನು ಅಧಿಕಾರದಲ್ಲಿರುವಾಗ ಕನ್ನಡಕ್ಕೆ ಚ್ಯುತಿಯಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕರ್ನಾಟಕ ರಾಜ್ಯೋತ್ಸವ ಸಮಿತಿಯಿಂದ ನಗರದ ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ಮಂಟಪದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

 ಬೆಂಗಳೂರು : ನಾನು ಅಧಿಕಾರದಲ್ಲಿರುವಾಗ ಕನ್ನಡಕ್ಕೆ ಚ್ಯುತಿಯಾಗಲು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಕರ್ನಾಟಕ ರಾಜ್ಯೋತ್ಸವ ಸಮಿತಿಯಿಂದ ನಗರದ ಮೈಸೂರು ಬ್ಯಾಂಕ್ ವೃತ್ತದ ನೃಪತುಂಗ ಮಂಟಪದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ, ನೆಲ, ಜಲ ಸೇರಿ ನಾಡಿನ ಹಿತಾಸಕ್ತಿಗಾಗಿ ಹೋರಾಟ ನಡೆಸಲು ಸ್ಥಾಪಿಸಲಾದ ಕನ್ನಡ ಕಾವಲು ಸಮಿತಿಗೆ 1983ರಲ್ಲಿ ನಾನು ಅಧ್ಯಕ್ಷನಾಗಿದ್ದೆ. ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ರೂಪದಲ್ಲಿ ಕಾವಲು ಸಮಿತಿ ಕಾರ್ಯನಿರ್ವಹಿಸುತ್ತಿದೆ. ಕನ್ನಡ ಭಾಷೆಗೆ ಚ್ಯುತಿಯಾಗಲು ನಾನು ಎಂದಿಗೂ ಬಿಡುವುದಿಲ್ಲ. ದೀರ್ಘ ಕಾಲದಿಂದ ಕನ್ನಡ ನಾಡು, ನುಡಿ, ನೆಲ, ಜಲ ಸಂರಕ್ಷಣೆಗೆ ವಾಟಾಳ್ ನಾಗರಾಜ್ ಶ್ರಮಿಸುತ್ತಿದ್ದಾರೆ. 

ಅವರು ಅಧಿಕಾರ ಉದ್ದೇಶದಿಂದ ಹೋರಾಟಗಳನ್ನು ಮಾಡಲಿಲ್ಲ. ಕನ್ನಡಕ್ಕಾಗಿಯೇ ತಮ್ಮ ಹೋರಾಟ, ಜೀವನ ಮುಡಿಪಾಗಿಟ್ಟಿದ್ದಾರೆ. ಬೇರೆ ಬೇರೆ ಪಕ್ಷಗಳಿಂದ ಅವರಿಗೆ ಆಹ್ವಾನ ಬಂದಿದ್ದರೂ, ಕನ್ನಡ ಚಳವಳಿ ಪಕ್ಷ ಬಿಟ್ಟು ಬೇರೆಡೆಗೆ ಅವರು ಮುಖ ಮಾಡಲಿಲ್ಲ. ಅಧಿಕಾರದ ಹಿಂದೆ ಹೋಗಿದ್ದರೆ ಸಚಿವರಾಗಿರುತ್ತಿದ್ದರು. ಅನೇಕ ಮುಖ್ಯಮಂತ್ರಿಗಳಿಗೆ ಆಪ್ತರಾಗಿದ್ದರೂ ಎಂದಿಗೂ ಅಧಿಕಾರಕ್ಕೆ ಹಪಹಪಿ ತೋರಲಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ವಾಟಾಳ್ ನಾಗರಾಜ್ ಮಾತನಾಡಿ, ಕನ್ನಡ ಭಾಷೆ, ಕನ್ನಡಿಗರ ಹಿತಾಸಕ್ತಿಯನ್ನು ಕಾಪಾಡಲು ಸಿದ್ದರಾಮಯ್ಯ ಅವರು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ನನ್ನ ಕನ್ನಡಪರ ಹೋರಾಟಗಳು ಹಾಗೂ ನನ್ನ ಬಗ್ಗೆ ಸಿದ್ದರಾಮಯ್ಯ ಅವರಿಗೆ ವಿಶೇಷವಾದ ಗೌರವ, ಅಭಿಮಾನ ಇದೆ. ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಉಚ್ಚಾಟಿಸಿದಾಗ ಏಕೆ ಉಚ್ಛಾಟಿಸಿದ್ದಿರಾ ಎಂದು ಜೆಡಿಎಸ್ ನಾಯಕರನ್ನು ಅನೇಕ ಬಾರಿ ಪ್ರಶ್ನೆ ಮಾಡಿದ್ದೆ ಎಂದರು. ಈ ವೇಳೆ ಮಾಜಿ ಸಚಿವ ಎಚ್. ಆಂಜನೇಯ, ವಾಟಾಳ್ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article