ಕನ್ನಡಪ್ರಭ ವಾರ್ತೆ ಮಂಡ್ಯ
ಬುಧವಾರ ನಗರದಲ್ಲಿ ನಡೆದ ಬೆಂಬಲಿಗರು, ಕಾರ್ಯಕರ್ತರು, ಹಿತೈಷಿಗಳ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ನ ನಾಯಕರೊಬ್ಬರು ಸುಮಲತಾ ಅವಶ್ಯಕತೆ ಹಿಂದೆ ಇರಲಿಲ್ಲ, ಈಗಲೂ ಇಲ್ಲ, ಮುಂದೆಯೂ ಇರುವುದಿಲ್ಲ ಎಂದು ಹೇಳಿದ್ದಾರೆ. ಕಾಂಗ್ರೆಸ್ಸಿಗರು ಬೇಡ ಎಂದ ಮೇಲೆ ನಾನು ಅಲ್ಲಿಗೆ ಹೋಗುವುದಿಲ್ಲ. ನನಗೆ ಗೌರವವಿಲ್ಲದ ಕಡೆಗೆ ನಾನು ಹೋಗುವುದೂ ಇಲ್ಲ. ನಿಮ್ಮ ನಾಯಕತ್ವ ಪಕ್ಷಕ್ಕೆ ಅಗತ್ಯವಿದೆ ಎಂದು ಮೋದಿ ನನಗೆ ಹೇಳಿದ್ದಾರೆ. ಹೀಗಾಗಿ ಅವರ ನಾಯಕತ್ವದಲ್ಲಿ ಮುನ್ನಡೆಯುವುದಕ್ಕೆ ನಿರ್ಧರಿಸಿದ್ದೇನೆ. ಸದ್ಯದಲ್ಲೇ ಬಿಜೆಪಿ ಸೇರುತ್ತೇನೆ ಎಂದು ತಿಳಿಸಿದರು.
ಮಂಡ್ಯದ ಬದಲು ಬೆಂಗಳೂರು ಉತ್ತರ, ಮೈಸೂರು, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುವಂತೆ ತಿಳಿಸಿದ್ದರು. ನಾನು ಅದೆಲ್ಲವನ್ನೂ ತಿರಸ್ಕರಿಸಿದ್ದೇನೆ. ಮಂಡ್ಯ ಬಿಟ್ಟು ಬೇರೆಲ್ಲೂ ಹೋಗುವುದಿಲ್ಲ. ಮಂಡ್ಯದ ಋಣ, ಜನರನ್ನು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.ಕುಮಾರಸ್ವಾಮಿ ಪರ ಪ್ರಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕೆಲವೇ ದಿನಗಳಲ್ಲಿ ಬಿಜೆಪಿಗೆ ಸೇರುತ್ತಿದ್ದೇನೆ. ಬಿಜೆಪಿಯಲ್ಲಿ ನಾನು ಯಾವುದೇ ಸ್ಥಾನಮಾನ ಕೇಳಿಲ್ಲ. ಹೀಗಾಗಿ, ಬಿಜೆಪಿ ನಿಲುವೇ ನನ್ನ ನಿಲುವು. ಪಕ್ಷ ಸೂಚಿಸಿದರೆ ಕುಮಾರಸ್ವಾಮಿ ಪರ ಪ್ರಚಾರ ಮಾಡುತ್ತೇನೆ. 52 ವರ್ಷದ ಬಳಿಕ ಮಹಿಳಾ ಅಭ್ಯರ್ಥಿಯೊಬ್ಬರು ಮಂಡ್ಯದಲ್ಲಿ ಗೆದ್ದಿದ್ದರು. ಎಲ್ಲ ಸಂದರ್ಭದಲ್ಲೂ ಪಕ್ಷೇತರವಾಗಿ ಸ್ಪರ್ಧಿಸಲು ಸಾಧ್ಯವಿಲ್ಲ. ಯಾರನ್ನೂ ಜೀವಮಾನದುದ್ದಕ್ಕೂ ದ್ವೇಷಿಸಲಾಗುವುದಿಲ್ಲ. ಸಹಕಾರ ಕೊಡಿ, ಹಳೆಯದನ್ನು ಮರೆಯಿರಿ ಎಂದು ಕುಮಾರಸ್ವಾಮಿ ನನ್ನಲ್ಲಿ ಕೋರಿದ್ದಾರೆ. ಅದಕ್ಕೆ ಸಹಕರಿಸುವುದಾಗಿ ತಿಳಿಸಿದ್ದೇನೆ ಎಂದರು. ಸುಮಲತಾ ಜೊತೆ ಸಭೆಯಲ್ಲಿ ಅವರ ಪುತ್ರ ಅಭಿಷೇಕ್, ನಟ ದರ್ಶನ್ ಕೂಡ ಪಾಲ್ಗೊಂಡಿದ್ದರು. ಸರ್ಜರಿ ಮುಂದೂಡಿ ಸುಮಲತಾ ಸಭೆಗೆ ಆಗಮಿಸಿದ ನಟ ದರ್ಶನ್‌ಅಮ್ಮ (ಸುಮಲತಾ) ರಾಜಕೀಯವಾಗಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾನು ಬದ್ಧನಿದ್ದೇನೆ ಎಂದು ನಟ ದರ್ಶನ್ ತಿಳಿಸಿದರು.
ಪಕ್ಷೇತರ ಸಂಸದೆಯಾಗಿ ಇಷ್ಟೆಲ್ಲಾ ಕೆಲಸ ಮಾಡಿರೋದು ದೊಡ್ಡದು. ರಾಜಕೀಯವಾಗಿ ನನಗೆ ಅಷ್ಟೊಂದು ಜ್ಞಾನವಿಲ್ಲ. ಅಮ್ಮ ಏನು ನಿರ್ಧಾರ ಕೈಗೊಳ್ಳುವರೋ ಅದರಂತೆ ನಾವೂ ನಡೆಯುತ್ತೇವೆ. ತಾಯಿ ಯಾವತ್ತಿದ್ದರೂ ತಾಯಿನೇ. ನಾವು ಆ ಮನೆಯ ಮಕ್ಕಳು. ಅಮ್ಮ ಹೇಳುವ ಮಾತನ್ನು ಕೇಳುವುದಷ್ಟೇ ನಮ್ಮ ಕೆಲಸ ಎಂದರು.