ಬೆಂಗಳೂರು : ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಬಿಜೆಪಿ ನಾಯಕರು ಅಸಹಕಾರ ವ್ಯಕ್ತಪಡಿಸಿದ್ದು, ನಮ್ಮ ಮನೆಗೆ ಬಂದಾಗ ನಮ್ಮ ಕುಟುಂಬದ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾತಿ ಗಣತಿ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಜೋಶಿ ಅವರು, ರಾಜ್ಯ ಸರ್ಕಾರ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಅನಗತ್ಯ ವಿವರ ಕಲೆ ಹಾಕಲಾಗುತ್ತಿದ್ದು, ಜಾತಿ ಗಣತಿಗೆ ಬಂದರೆ ನಮ್ಮ ಕುಟುಂಬದ ಮಾಹಿತಿ ನೀಡದಿರಲು ನಿರ್ಧರಿಸಿದ್ದೇನೆ ಎಂದಿದ್ದಾರೆ.
ಗಣತಿ ವೇಳೆ ದೈನಂದಿನ ಆದಾಯ, ಮನೆಯಲ್ಲಿ ವಿಧವೆಯರಿದ್ದಾರೆಯೇ? ಜಾತಿ ತಾರತಮ್ಯ ಅನುಭವಿಸಿದಿರಾ? ಸಾಮಾಜಿಕ ಸಂಘಟನೆ ಸದಸ್ಯತ್ವ ಇತ್ಯಾದಿ ಅನಗತ್ಯ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇದೆಲ್ಲ ಸರ್ಕಾರಕ್ಕೆ ಯಾಕೆ ಬೇಕು? ಎಂದು ಪ್ರಶ್ನಿಸಿರುವ ಜೋಶಿ, ಈ ಹಿಂದಿನ ಸಮೀಕ್ಷೆಯ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಈ ಬಾರಿಯ ಸಮೀಕ್ಷೆಯ ದತ್ತಾಂಶ ಎಷ್ಟು ಸುರಕ್ಷಿತ ಆಗಿರಲಿದೆ. ಇದನ್ನು ಮಾರಾಟ ಮಾಡುವ ಸಾಧ್ಯತೆ ಇದೆ ಎಂದು ಆರೋಪಿಸಿದ್ದಾರೆ.
ಸಮೀಕ್ಷೆಯಲ್ಲಿ ಮುಜಾವರ ಬ್ರಾಹ್ಮಣ, ಲಿಂಗಾಯತ ಮುಸಲ್ಮಾನ ಜಾತಿಗಳನ್ನು ಕೈಬಿಟ್ಟಿಲ್ಲ. ಸಮೀಕ್ಷೆಯಲ್ಲಿ ಕಡ್ಡಾಯ ಪಾಲ್ಗೊಳ್ಳುವಂತೆ ಜನರನ್ನು ಒತ್ತಾಯಿಸಬೇಡಿ ಎಂದು ಹೈಕೋರ್ಟ್ ಹೇಳಿದರೂ ಸಮೀಕ್ಷೆದಾರರ ಮೂಲಕ ಜನರನ್ನು ಒತ್ತಾಯಪಡಿಸಲಾಗುತ್ತಿದೆ. ಆಡಳಿತ ವೈಫಲ್ಯ, ಪಕ್ಷದಲ್ಲಿ ನಡೆಯುತ್ತಿರುವ ಕಲಹ, ಅಕ್ಟೋಬರ್‌ದಲ್ಲಿ ಅಧಿಕಾರ ಹಸ್ತಾಂತರಿಸುವ ವಿಷಗಳನ್ನು ಮರೆಮಾಚಲು ಹಾಗೂ ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಕಾಂಗ್ರೆಸ್ ಸರ್ಕಾರ ಸಮೀಕ್ಷೆ ನಡೆಸುತ್ತಿದೆ ಎಂದು ಟೀಕಿಸಿದರು.
ಯಾವ ಜಾತಿಗೂ ಉಪಯೋಗವಿಲ್ಲ:
ಬೆಂಗಳೂರಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ ಅವರು, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನಾನು ಭಾಗವಹಿಸುವುದಿಲ್ಲ. ರಾಜ್ಯದ ಜನರು ಕೂಡ ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದು, ಜಾತಿ ಜಾತಿಗಳ ನಡುವೆ ಜನರನ್ನು ಎತ್ತಿಕಟ್ಟಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶದಿಂದ ಈ ಸರ್ಕಾರ ಸಮೀಕ್ಷೆ ಮಾಡುತ್ತಿದೆ. ಇದರಿಂದ ಯಾವೊಂದು ಜಾತಿಗೂ, ಯಾವ ಬಡವರಿಗೂ ಉಪಯೋಗವಿಲ್ಲ. ದಯವಿಟ್ಟು ನೀವು ಸಿದ್ದರಾಮಯ್ಯನವರ ಜಾತಿ ಗಣತಿಯನ್ನು ಬಹಿಷ್ಕಾರ ಮಾಡಬೇಕು ಎಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಜಾತಿಗಣತಿ ಮೂಲಕ ಸಿದ್ದರಾಮಯ್ಯನವರು ಮತ್ತೊಬ್ಬ ಲಾಲು ಪ್ರಸಾದ್ ಯಾದವ್, ಮುಲಾಯಂ ಸಿಂಗ್ ಯಾದವ್ ಆಗಲು ಹೊರಟಿದ್ದಾರೆ. ಬೇರೆ ಬೇರೆ ಜಾತಿಗಳ ಜನರ ನಡುವೆ ವೈಷಮ್ಯ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಈ ಪ್ರಯತ್ನವು ಹೈಕೋರ್ಟಿನ ಆದೇಶದ ಬಳಿಕ ಪ್ರಾರಂಭದಲ್ಲೇ ವಿಫಲವಾಗಿದೆ ಎಂದರು.
ಸಮೀಕ್ಷೆಯಲ್ಲಿ ಸಾರ್ವಜನಿಕರು ಭಾಗವಹಿಸುವುದು ಅನಿವಾರ್ಯ ಅಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಈ ಸರ್ಕಾರ ನನ್ನ ಡೇಟಾವನ್ನು ಪಡೆದು ಸುರಕ್ಷಿತವಾಗಿ ಇರಿಸುವುದೇ? ಯಾವ ಉದ್ದೇಶಕ್ಕೆ ಬಳಸುತ್ತಾರೆ? ತಮ್ಮ ಯಾವ ರಾಜಕೀಯ ದುರುದ್ದೇಶಗಳಿಗೆ ಉಪಯೋಗಿಸಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಇದೆ. ಈ ಸರ್ಕಾರದ ಮೇಲೆ ನನಗೆ ನಂಬಿಕೆ ಇಲ್ಲ. ಹೀಗಾಗಿ, ನಾನಂತು ಭಾಗವಹಿಸುವುದಿಲ್ಲ ಎಂದು ತಿಳಿಸಿದರು.