ಅಬಕಾರಿ ಇಲಾಖೆ ಭಷ್ಟಾಚಾರ :ಪ್ರಧಾನಿ ಮೋದಿಗೆ ಮತ್ತೆ ಸವಾಲು ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Nov 14, 2024, 12:48 AM ISTUpdated : Nov 14, 2024, 11:55 AM IST
Siddaramaiah

ಸಾರಾಂಶ

ಅಬಕಾರಿ ಇಲಾಖೆಯಲ್ಲಿ ಒಂದೇ ಒಂದು ಪೈಸೆ ಭಷ್ಟಾಚಾರ ಮಾಡಿದ್ದರೆ ನಾನು ರಾಜಕೀಯ ಬಿಡ್ತೀನಿ. ಇಲ್ಲಾಂದ್ರೆ ಮೋದಿ ಅವರು ಪ್ರಧಾನಿ ಸ್ಥಾನ ಬಿಡ್ತಾರಾ ಕೇಳಿ? ಎಂದು ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.

 ಮೈಸೂರು : ಅಬಕಾರಿ ಇಲಾಖೆಯಲ್ಲಿ ಒಂದೇ ಒಂದು ಪೈಸೆ ಭಷ್ಟಾಚಾರ ಮಾಡಿದ್ದರೆ ನಾನು ರಾಜಕೀಯ ಬಿಡ್ತೀನಿ. ಇಲ್ಲಾಂದ್ರೆ ಮೋದಿ ಅವರು ಪ್ರಧಾನಿ ಸ್ಥಾನ ಬಿಡ್ತಾರಾ ಕೇಳಿ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬರಿ ಭ್ರಷ್ಟಾಚಾರ ಎಂದು ಸುಳ್ಳು ಹೇಳುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಕೋವಿಡ್ ವೇಳೆ ನಡೆದ ಭ್ರಷ್ಟಾಚಾರ ಬಗ್ಗೆ ಪ್ರಧಾನಿ ಏನು ಹೇಳುತ್ತಾರೆ. ಮೋದಿ ಅವರಿಗೆ ಕರ್ನಾಟಕ ಮತ್ತು ಸಿದ್ದರಾಮಯ್ಯ ಇಬ್ಬರೂ ಟಾರ್ಗೆಟ್ ಎಂದರು.

ಕರ್ನಾಟಕ ಅತಿ ದೊಡ್ಡ ರಾಜ್ಯ. ಇಲ್ಲಿ ನಾವು 136 ಸ್ಥಾನ ಗೆದ್ದಿದ್ದೇವೆ. ಹೀಗಾಗಿ ನಮ್ಮನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವ ಭ್ರಷ್ಟಾಚಾರವೂ ಇಲ್ಲ. ಭ್ರಷ್ಟಾಚಾರ ನಡೆಯುವುದಕ್ಕೂ ಬಿಡುವುದಿಲ್ಲ ಎಂದು ಹೇಳಿದರು.

ಕರಿಯ ಹೇಳಿಕೆಗೆ ಸಮರ್ಥನೆ: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಚಿವ ಜಮೀರ್ ಅಹಮದ್ ಅವರು ಕರಿಯ ಎಂದು ಹೇಳಿರುವುದನ್ನು ಸಮರ್ಥಿಸಿದ ಸಿದ್ದರಾಮಯ್ಯ ಅವರು, ದೇವೇಗೌಡರು ನನ್ನ ಸೊಕ್ಕು ಮುರೀತೀನಿ, ಗರ್ವಭಂಗ ಮಾಡುತ್ತೀನಿ ಎಂದು ಹೇಳಿದ್ದು ಸರಿನಾ? ಜಮೀರ್ ಮತ್ತು ಕುಮಾರಸ್ವಾಮಿ ಥಿಕ್ ಅಂಡ್ ಥ್ಹೀನ್ ಫ್ರೆಂಡ್ಸ್ . ಅವರವರ ನಡುವೆ ಏನೇನೋ ನಡೆಯುತ್ತಿರುತ್ತದೆ. ಆ ವಿಚಾರ ಜಮೀರ್‌ ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಇದೆಲ್ಲವೂ ಉಪಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದರು.

ಮುಸ್ಲಿಂ ಮೀಸಲು ಚಿಂತನೆ ಇಲ್ಲ: ಮುಸ್ಲಿಮರಿಗೆ ಗುತ್ತಿಗೆಯಲ್ಲಿ ಮೀಸಲಾತಿ ನೀಡುವಂತೆ ಕೆಲವರು ಕೇಳಿದ್ದಾರೆ, ಮನವಿ ಕೊಟ್ಟಿದ್ದಾರೆ. ಆದರೆ ಈ ಬಗ್ಗೆ ಯಾವ ಚಿಂತನೆಯೂ ನಡೆದಿಲ್ಲ. ಬಿಜೆಪಿ ಸುಮ್ಮನೆ ಕೋಮುವಾದದ ಹಿನ್ನೆಲೆಯಲ್ಲಿ ಇದನ್ನು ವಿವಾದ ಮಾಡುತ್ತಿದೆ. ಶಾಂತಿ ಸೌಹರ್ದ ಕೆಡಿಸುವುದೇ ಅವರ ಕೆಲಸ. ಹೀಗಾಗಿ ಇದು ವಿವಾದವಾಗುತ್ತಿದೆ ಅಷ್ಟೇ ಎಂದರು.ಬಂಡೀಪುರ ರಾತ್ರಿ ಸಂಚಾರ ನಿಷೇಧ ವಾಪಸ್ ಪಡೆಯಲ್ಲ:

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆಗೆಯುವ ಪ್ರಸ್ತಾವ, ಮಾತುಕತೆ ಯಾವುದೂ ಸರ್ಕಾರದ ಮುಂದೆ ಇಲ್ಲ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ ಎಂದು ಇದೇ ವೇಳೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.ಸಚಿವ ಸಂಪುಟದ ಪುನರ್‌ ರಚನೆ ಇಲ್ಲ

ರಾಜ್ಯದಲ್ಲಿ ಸಚಿವ ಸಂಪುಟ ಪುನರ್‌ ರಚನೆ ಪ್ರಸ್ತಾಪ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.ಬುಧವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಅವ್ಯವಹಾರ ಪ್ರಕರಣದಲ್ಲಿ ಜೈಲುಪಾಲಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸುವ ಕುರಿತು ಬೇಡಿಕೆ ಬಂದಿದೆ. ಉಪ ಚುನಾವಣೆ ಬಳಿಕ ಆ ಕುರಿತು ನೋಡೋಣ ಎಂದು ಹೇಳಿದ್ದೇನೆ. ಅದನ್ನೇ ಸಂಪುಟ ಪುನರ್‌ ರಚನೆ ಎಂದು ಹೇಳಬೇಡಿ ಎಂದು ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನ ಎಚ್‌.ಡಿ.ಕೋಟೆಯ ಕಾರ್ಯಕ್ರಮವೊಂದರಲ್ಲಿ ಮಂಗಳವಾರ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕೆಂದಿದೆ. ಕೊಡುತ್ತೇನೆ ಎಂದು ಭರವಸೆ ನೀಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!